IND vs ENG: ಯಾರೇ ಕೂಗಾಡಲಿ, ಊರೇ ಹೋರಾಡಲಿ… ಜೋಫ್ರಾ ಆರ್ಚರ್ ನಿದ್ರೆಗೆ ಭಂಗವಿಲ್ಲ

India vs England: ಭಾರತ ಮತ್ತು ಇಂಗ್ಲೆಂಡ್ ನಡುವಣ 8 ಪಂದ್ಯಗಳ ಸರಣಿ ಮುಗಿದಿದೆ. ಐದು ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದ್ದ ಟೀಮ್ ಇಂಡಿಯಾ ಇದೀಗ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಈ ಮೂಲಕ ಆಂಗ್ಲರ ವಿರುದ್ಧ ಎರಡೂ ಸರಣಿಯಲ್ಲೂ ಭಾರತೀಯರು ಪಾರುಪತ್ಯ ಮೆರೆದಿದ್ದಾರೆ.

IND vs ENG: ಯಾರೇ ಕೂಗಾಡಲಿ, ಊರೇ ಹೋರಾಡಲಿ... ಜೋಫ್ರಾ ಆರ್ಚರ್ ನಿದ್ರೆಗೆ ಭಂಗವಿಲ್ಲ
Jofra Archer

Updated on: Feb 13, 2025 | 7:53 AM

ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಮುಗಿದಿದೆ. ಈ ಸರಣಿಯ ಮೊದಲ ಮ್ಯಾಚ್​ನಲ್ಲಿ 4 ವಿಕೆಟ್​ಗಳ ಜಯ ಸಾಧಿಸಿದ್ದ ಟೀಮ್ ಇಂಡಿಯಾ, ದ್ವಿತೀಯ ಪಂದ್ಯವನ್ನು ಸಹ ನಾಲ್ಕು ವಿಕೆಟ್​ಗಳಿಂದ ಗೆದ್ದುಕೊಂಡಿತ್ತು. ಇನ್ನು ಮೂರನೇ ಮ್ಯಾಚ್​ನಲ್ಲಿ ಭಾರತ ತಂಡ 142 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡಿದ್ದರು.

ಆದರೆ ಬಟ್ಲರ್ ಅವರ ನಿರ್ಧಾರ ತಪ್ಪು ಎಂಬುದನ್ನು ಮೊದಲ 10 ಓವರ್​ಗಳಲ್ಲೇ ಟೀಮ್ ಇಂಡಿಯಾ ಬ್ಯಾಟರ್​ಗಳು ಸಾರಿ ಹೇಳಿದ್ದರು. ಏಕೆಂದರೆ ಆರಂಭಿಕನಾಗಿ ಕಣಕ್ಕಿಳಿದ ಶುಭ್​ಮನ್ ಗಿಲ್, ಆ ಬಳಿಕ ಬಂದ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಗಿಲ್ 112 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 52 ರನ್ ಗಳಿಸಿದರು. ಇನ್ನು ಶ್ರೇಯಸ್ ಅಯ್ಯರ್ 78 ರನ್ ಚಚ್ಚಿದರು. ಈ ಮೂಲಕ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 356 ರನ್ ಕಲೆಹಾಕಿತು.

357 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ಮೊದಲ 10 ಓವರ್​ಗಳಲ್ಲಿ 84 ರನ್ ಬಾರಿಸಿದ್ದರು. ಆದರೆ ಆ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಟೀಮ್ ಇಂಡಿಯಾ ಬೌಲರ್​ಗಳು ಯಶಸ್ವಿಯಾದರು. ಪರಿಣಾಮ ಆಂಗ್ಲರು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು.

ಅತ್ತ ಇಂಗ್ಲೆಂಡ್ ಬ್ಯಾಟರ್​ಗಳು ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರೆ, ಇತ್ತ ಡಗೌಟ್​ನಲ್ಲಿ ಜೋಫ್ರಾ ಆರ್ಚರ್ ಗಾಢ ನಿದ್ದೆಗೆ ಜಾರಿದ್ದರು. ಅದರಲ್ಲೂ ಅಹಮದಾಬಾದ್​ನಂತಹ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಹರ್ಷೋದ್ಘಾರ ಮುಗಿಲು ಮುಟ್ಟಿದ್ದರೂ ಆರ್ಚರ್ ಅವರ ನಿದ್ರೆಗೆ ಮಾತ್ರ ಭಂಗ ಬರಲಿಲ್ಲ.  ಇದೀಗ ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ನಿದ್ದೆ ಮಾಡುತ್ತಿರುವ ಆರ್ಚರ್ ಅವರ ವಿಡಿಯೋ ವೈರಲ್ ಆಗಿದೆ.

ಜೋಫ್ರಾ ಆರ್ಚರ್ ನಿದ್ರೆ ಮಾಡುತ್ತಿರುವ ವಿಡಿಯೋ:

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 357 ರನ್​ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು 34.2 ಓವರ್​ಗಳಲ್ಲಿ 214 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡ 142 ರನ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

ಇದನ್ನೂ ಓದಿ: ಭಾರತ ತಂಡಕ್ಕೆ ಮೊಹಮ್ಮದ್ ಸಿರಾಜ್ ಮತ್ತೆ ಆಯ್ಕೆ… ಆದರೆ

ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇದಕ್ಕೂ ಮುನ್ನ ನಡೆದ ಟ5 ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡ 4-1 ಅಂತರದಿಂದ ಗೆದ್ದುಕೊಂಡಿತ್ತು. ಇದೀಗ ಏಕದಿನ ಸರಣಿಯನ್ನು ಗೆಲ್ಲುವ ಮೂಲಕ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಪಾರುಪತ್ಯ ಮೆರೆದಿದೆ.