
ಪ್ರಸ್ತುತ ಭಾರತದಲ್ಲಿ ಐಪಿಎಲ್ (IPL 2024) ಜ್ವರ ಶುರುವಾಗಿದೆ. ಈ ಜ್ವರ ಮೇ ತಿಂಗಳ ಕೊನೆಯವರೆಗೆ ಇರಲಿದೆ. ಆ ಬಳಿಕವೂ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ ರಸದೌತಣವೇ ಕಾದಿದ್ದು, ಜೂನ್ ಮೊದಲ ವಾರದಲ್ಲೇ ಚುಟುಕು ವಿಶ್ವಸಮರ ಅಂದರೆ ಟಿ20 ವಿಶ್ವಕಪ್ (T20 World Cup 2024) ಆರಂಭವಾಗಲಿದೆ. ಈ ಮಿನಿ ವಿಶ್ವಕಪ್‌ಗೆ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯವಹಿಸುತ್ತಿವೆ. ಇದು ಒಂದೆಡೆಯಾದರೆ, ಮಹಿಳೆಯರ ಟಿ20 ವಿಶ್ವಕಪ್ ಕೂಡ ಇದೇ ವರ್ಷ ನಡೆಯುತ್ತಿದೆ. ಆದರೆ ಅದರ ವೇಳಾಪಟ್ಟಿ ಇನ್ನು ಪ್ರಕಟವಾಗದಿದ್ದರೂ, ಇಷ್ಟರಲ್ಲೇ ಪ್ರಕಟವಾಗುವ ಸಾಧ್ಯತೆಗಳಿವೆ. ಮಹಿಳೆಯರ ಟಿ20 ವಿಶ್ವಕಪ್‌ಗೆ ಬಾಂಗ್ಲಾದೇಶ ಆತಿಥ್ಯವಹಿಸುತ್ತಿದೆ. ಹೀಗಾಗಿ ಟಿ20 ವಿಶ್ವಕಪ್ನ ಪೂರ್ವ ತಯಾರಿಯಾಗಿ ಭಾರತ ಮಹಿಳಾ ತಂಡ (Indian Women’s Cricket Team) ಐದು ಪಂದ್ಯಗಳ ಟಿ20 ಸರಣಿ ಆಡುವ ಸಲುವಾಗಿ ಬಾಂಗ್ಲಾದೇಶ ಪ್ರವಾಸ ಮಾಡಲಿದೆ. ಇದೀಗ ಅದರ ವೇಳಾಪಟ್ಟಿ ಸಹ ಪ್ರಕಟವಾಗಿದೆ.
ಮೇಲೆ ಹೇಳಿದಂತೆ ಈ ಪ್ರವಾಸದಲ್ಲಿ ಟೀಂ ಇಂಡಿಯಾ ಐದು ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಪ್ರವಾಸವು ಬಾಂಗ್ಲಾದೇಶದ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಮೊದಲು ಪಿಚ್‌ಗಳ ಸ್ವರೂಪವನ್ನು ತಿಳಿಯಲು ತಂಡಕ್ಕೆ ಸಹಾಯ ಮಾಡಲ್ಲಿದೆ. ಈ ಸರಣಿಯು ಏಪ್ರಿಲ್ 28 ರಿಂದ ಮೇ 9 ರವರೆಗೆ ನಡೆಯಲಿದೆ. ಈ ಸರಣಿಗಾಗಿ ಟೀಂ ಇಂಡಿಯಾ ಏಪ್ರಿಲ್ 23 ರಂದು ಬಾಂಗ್ಲಾದೇಶ ಪ್ರಯಾಣ ಬೆಳೆಸಲಿದ್ದು, ಮೇ 10 ರಂದು ಭಾರತಕ್ಕೆ ವಾಪಸಾಗಲಿದೆ.
*ಈ ಸರಣಿಯ ಎಲ್ಲಾ ಪಂದ್ಯಗಳನ್ನು ಸಿಲ್ಹೆಟ್‌ನಲ್ಲಿ ನಡೆಯಲ್ಲಿವೆ.
ಭಾರತ ಮಹಿಳಾ ತಂಡವು ಕೊನೆಯ ಬಾರಿ ಬಾಂಗ್ಲಾದೇಶ ಪ್ರವಾಸ ಕೈಗೊಂಡಾಗ, ಸರಣಿಯು ಡ್ರಾದಲ್ಲಿ ಕೊನೆಗೊಂಡಿತ್ತು. ಇದಲ್ಲದೇ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಎರಡೂ ತಂಡಗಳು ಒಟ್ಟು 13 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಟೀಂ ಇಂಡಿಯಾ 11 ಪಂದ್ಯಗಳನ್ನು ಗೆದ್ದಿದ್ದರೆ, ಬಾಂಗ್ಲಾದೇಶ ಎರಡು ಬಾರಿ ಭಾರತವನ್ನು ಸೋಲಿಸಿದೆ. ಬಾಂಗ್ಲಾದೇಶ ತಂಡ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುಧಾರಿಸಿದೆ. ಕೊನೆಯ ಐದು ಟಿ20 ಅಂತರಾಷ್ಟ್ರೀಯ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, ಭಾರತ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಬಾಂಗ್ಲಾದೇಶ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:56 pm, Wed, 3 April 24