IND vs SL: ಗಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಿದ ಟೀಂ ಇಂಡಿಯಾ

Team India's 600th Test: ಇಡೀ ಭಾರತ 80ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವಾಗ, ಟೀಂ ಇಂಡಿಯಾ ಶ್ರೀಲಂಕಾದ ಗಾಲೆಯಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸಿದೆ. ನಾಯಕ ಶುಭ್​ಮನ್ ಗಿಲ್ ಧ್ವಜ ಹಾರಿಸಿದರು. ಈ ಐತಿಹಾಸಿಕ ಸಂದರ್ಭ ಟೀಂ ಇಂಡಿಯಾದ 600ನೇ ಟೆಸ್ಟ್ ಪಂದ್ಯಕ್ಕೆ ಮುನ್ನ ನಡೆಯಿತು, ಇದು ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲು.

IND vs SL: ಗಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಿದ ಟೀಂ ಇಂಡಿಯಾ
Team India

Updated on: Aug 15, 2026 | 3:25 PM

ಇಡೀ ಭಾರತ 80 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಇತ್ತ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ (Team India) ಕೂಡ ಸಿಂಹಳೀಯರ ನಾಡಿನಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಿದೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಇಂದು ಅಂದರೆ ಆಗಸ್ಟ್ 15 ರಂದು ಗಾಲೆಯಲ್ಲಿ ಆರಂಭವಾಗಿದೆ. ಟೀಂ ಇಂಡಿಯಾ ಪಾಲಿಗೆ ಈ ಪಂದ್ಯ ಬಹಳ ವಿಶೇಷವಾಗಿದೆ. ಏಕೆಂದರೆ ಈ ಪಂದ್ಯ ಟೀಂ ಇಂಡಿಯಾಗೆ 600 ನೇ ಟೆಸ್ಟ್ ಪಂದ್ಯವಾಗಿದೆ. ಹೀಗಾಗಿ ಈ ಐತಿಹಾಸಿಕ ಪಂದ್ಯಕ್ಕಾಗಿ ಕಣಕ್ಕಿಳಿಯುವ ಮೊದಲು ಟೀಂ ಇಂಡಿಯಾ ಗಾಲೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿತು. ನಾಯಕ ಶುಭ್​ಮನ್ ಗಿಲ್ (Shubman Gill) ಧ್ವಜಾರೋಹಣ ನೆರವೇರಿಸಿದರು. ಈ ಸಮಯದಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಉಪಸ್ಥಿತರಿದ್ದರು.

ಗಾಲೆಯಲ್ಲಿ ಹಾರಿದ ತ್ರಿವರ್ಣ ಧ್ವಜ

ಟೀಂ ಇಂಡಿಯಾ ಗಾಲೆಯಲ್ಲಿ 80 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ ವೀಡಿಯೊವನ್ನು ಬಿಸಿಸಿಐ ಹಂಚಿಕೊಂಡಿದೆ. ಈ ವೀಡಿಯೊದಲ್ಲಿ, ಶುಭ್​ಮನ್ ಗಿಲ್ ಧ್ವಜಾರೋಹಣ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಗಾಲೆ ಟೆಸ್ಟ್ ಆರಂಭಕ್ಕೂ ಸ್ವಲ್ಪ ಮೊದಲು ಈ ಕಾರ್ಯಕ್ರಮ ಹಮ್ಮಿಕ್ಕೊಳ್ಳಲಾಗಿದೆ. ತ್ರಿವರ್ಣ ಧ್ವಜ ಹಾರಿಸಿದ ನಂತರ, ಟೀಂ ಇಂಡಿಯಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಒಟ್ಟಾಗಿ ರಾಷ್ಟ್ರಗೀತೆ ಹಾಡಿದ್ದಾರೆ.

ಭಾರತಕ್ಕೆ ಐತಿಹಾಸಿಕ ಟೆಸ್ಟ್ ಪಂದ್ಯ

ಗಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ನಂತರ ಕಣಕ್ಕಿಳಿದಿರುವ ಟೀಂ ಇಂಡಿಯಾಕ್ಕೆ ಇದು ಐತಿಹಾಸಿಕ ಮಹತ್ವವನ್ನು ಹೊಂದಿರುವ ಪಂದ್ಯವಾಗಿದೆ. ಈ ಟೆಸ್ಟ್ ಪಂದ್ಯವು ಭಾರತೀಯ ತಂಡದ 600 ನೇ ಟೆಸ್ಟ್ ಪಂದ್ಯವಾಗಿದೆ. 600 ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುವುದರ ಜೊತೆಗೆ, ಶುಭ್​ಮನ್ ಗಿಲ್ ಗ್ಯಾಲೆಯಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ.

IND vs SL: 600ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ

ಈ ಸಾಧನೆ ಮಾಡಿದ ಮೂರನೇ ತಂಡ

ಕ್ರಿಕೆಟ್ ಇತಿಹಾಸದಲ್ಲಿ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮಾತ್ರ ಭಾರತಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿವೆ. ಇದರರ್ಥ ಭಾರತ 600 ಟೆಸ್ಟ್ ಪಂದ್ಯಗಳನ್ನು ಆಡಿದ ಮೂರನೇ ತಂಡವಾಗಿದೆ. ಈ ಹಿಂದೆ ಆಡಿದ 599 ಟೆಸ್ಟ್‌ಗಳಲ್ಲಿ ಭಾರತ 186 ಪಂದ್ಯಗಳನ್ನು ಗೆದ್ದು 188 ಪಂದ್ಯಗಳಲ್ಲಿ ಸೋತಿದೆ. ಉಳಿದಂತೆ 224 ಪಂದ್ಯಗಳು ಡ್ರಾ ಆಗಿವೆ. ಭಾರತ ತನ್ನ 300ನೇ, 400ನೇ ಮತ್ತು 500ನೇ ಟೆಸ್ಟ್‌ಗಳನ್ನು ಗೆದ್ದಿದೆ. ಆದ್ದರಿಂದ, ಟೀಂ ಇಂಡಿಯಾ ತನ್ನ 600ನೇ ಟೆಸ್ಟ್‌ನಲ್ಲಿಯೂ ಗೆಲುವು ಸಾಧಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:22 pm, Sat, 15 August 26

Loading...
Unable to load recommendations.
Follow Us