Hockey Asia Cup 2025; ನಾಯಕನಿಂದ ಹ್ಯಾಟ್ರಿಕ್ ಗೋಲು; ಚೀನಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ
Hockey Asia Cup 2025; ಭಾರತವು ಬಿಹಾರದ ರಾಜ್‌ಗಿರ್‌ನಲ್ಲಿ ನಡೆದ 2025ರ ಹಾಕಿ ಏಷ್ಯಾ ಕಪ್‌ನ ಆರಂಭಿಕ ಪಂದ್ಯದಲ್ಲಿ ಚೀನಾವನ್ನು 4-3 ಗೋಲುಗಳ ಅಂತರದಿಂದ ಸೋಲಿಸಿದೆ. ನಾಯಕ ಹರ್ಮನ್ಪ್ರೀತ್ ಸಿಂಗ್ ಹ್ಯಾಟ್ರಿಕ್ ಸಾಧಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಜಪಾನ್ ಮತ್ತು ದಕ್ಷಿಣ ಕೊರಿಯಾ ಕೂಡ ತಮ್ಮ ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದವು. ಬಾಂಗ್ಲಾದೇಶ ಮಲೇಷ್ಯಾ ವಿರುದ್ಧ ಸೋಲೊಪ್ಪಿಕೊಂಡಿತು.

ಇಂದಿನಿಂದ ಅಂದರೆ ಆಗಸ್ಟ್ 29 ರ ಶುಕ್ರವಾರದಿಂದ ಬಿಹಾರದ ರಾಜ್‌ಗಿರ್‌ನಲ್ಲಿ 2025 ರ ಹಾಕಿ ಏಷ್ಯಾಕಪ್ (Hockey Asia Cup 2025) ಆರಂಭವಾಗಿದೆ. ಬಿಹಾರದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಈ ಪಂದ್ಯಾವಳಿಯ ಮೊದಲ ಪಂದ್ಯದಲ್ಲೇ ಆತಿಥೇಯ ಭಾರತ ತಂಡ ಚೀನಾ ತಂಡವನ್ನು 4-3 ಗೋಲುಗಳ ಅಂತರದಿಂದ ಮಣಿಸಿ ಟೂರ್ನಿಯಲ್ಲಿ ಗೇಲುವಿನ ಶುಭಾರಂಭ ಮಾಡಿದೆ. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕ ಹರ್ಮನ್ ಪ್ರೀತ್ ಸಿಂಗ್ (Harmanpreet Singh) ಈ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದರು. ಅವರು ಪಂದ್ಯದ 20, 33 ಮತ್ತು 47ನೇ ನಿಮಿಷಗಳಲ್ಲಿ ಗೋಲುಗಳನ್ನು ಬಾರಿಸಿದರು. ಉಳಿದಂತೆ ಜುಗ್ರಾಜ್ ಸಿಂಗ್ ತಂಡದ ಪರ ಏಕೈಕ ಗೋಲು ದಾಖಲಿಸಿದರು.
ಹರ್ಮನ್‌ಪ್ರೀತ್ ಹ್ಯಾಟ್ರಿಕ್ ಗೆಲುವು
ಇಂದು ನಡೆದ ಈ ಪೂಲ್-ಎ ಪಂದ್ಯದಲ್ಲಿ ಚೀನಾ ಮೊದಲ ಗೋಲು ಗಳಿಸಿತು, ಪಂದ್ಯದ 12 ನೇ ನಿಮಿಷದಲ್ಲಿ ಡು ಶಿಹಾವೊ ಪೆನಾಲ್ಟಿ ಕಾರ್ನರ್ ಮೂಲಕ ಖಾತೆ ತೆರೆದು ಚೀನಾಕ್ಕೆ 1-0 ಮುನ್ನಡೆ ತಂದುಕೊಟ್ಟರು. ಆದರೆ ಚೀನಾದ ಈ ಮುನ್ನಡೆ ಹೆಚ್ಚು ಕಾಲ ಉಳಿಯಲಿಲ್ಲ. ಪಂದ್ಯದ 18 ನೇ ನಿಮಿಷದಲ್ಲಿ ಭಾರತದ ಜುಗ್ರಾಜ್ ಸಿಂಗ್ ಗೋಲು ಬಾರಿಸಿ ಗೋಲನ್ನು 1-1 ರಿಂದ ಸಮಗೊಳಿಸಿದರು. ಇದಾದ ನಂತರ ಪಾರುಪತ್ಯ ಮೇರೆದ ಭಾರತ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್, ಪಂದ್ಯದ 20 ಮತ್ತು 33 ನೇ ನಿಮಿಷಗಳಲ್ಲಿ 2 ಪೆನಾಲ್ಟಿ ಕಾರ್ನರ್ಗಳನ್ನು ಗೋಲಾಗಿ ಪರಿವರ್ತಿಸಿ ಗೋಲುಗಳ ಅಂತರವನ್ನು 3-1ಕ್ಕೆ ಹೆಚ್ಚಿಸಿದರು.
𝐀𝐬𝐢𝐚 𝐂𝐮𝐩 𝐇𝐨𝐜𝐤𝐞𝐲 𝐂𝐡𝐚𝐦𝐩𝐢𝐨𝐧𝐬𝐡𝐢𝐩 –
🇮🇳 4-3 🇨🇳
Indian hockey team beats China 4-3 in their opening Pool A match of the Asia Cup in Rajgir, Bihar.#HockeyIndia #IndiaKaGame #HumSeHaiHockey #HeroAsiaCupRajgir pic.twitter.com/KUUzU5yLZx
— All India Radio News (@airnewsalerts) August 29, 2025
ಆದರೆ ಚೀನಾ ಸುಲಭವಾಗಿ ಸೋಲೊಪ್ಪಿಕೊಳ್ಳದೆ ಮುಂದಿನ 2 ಗೋಲುಗಳನ್ನು ಗಳಿಸಿ ಪಂದ್ಯವನ್ನು 3-3 ರಲ್ಲಿ ಸಮಬಲಗೊಳಿಸಿತು. ಹೀಗಾಗಿ ಮೂರನೇ ಕ್ವಾರ್ಟರ್ 3-3 ರಿಂದ ಡ್ರಾದಲ್ಲಿ ಕೊನೆಗೊಂಡಿತು. ಆದರೆ ಕೊನೆಯ ಕ್ವಾರ್ಟರ್ನ 47 ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ನಾಯಕ ಹರ್ಮನ್‌ಪ್ರೀತ್ ಮತ್ತೊಮ್ಮೆ ಗೋಲಾಗಿ ಪರಿವರ್ತಿಸಿ ತಂಡಕ್ಕೆ 4-3 ರ ನಿರ್ಣಾಯಕ ಮುನ್ನಡೆಯನ್ನು ನೀಡಿದಲ್ಲದೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಜಪಾನ್-ಕೊರಿಯಾ ತಂಡಗಳಿಗೆ ಭರ್ಜರಿ ಗೆಲುವು
ಪೂಲ್ ಎ ನ ಮತ್ತೊಂದು ಪಂದ್ಯದಲ್ಲಿ ಜಪಾನ್ ಕೂಡ ಅದ್ಭುತ ಆರಂಭವನ್ನು ಕಂಡಿತು. ಮೊದಲ ಪ್ರಶಸ್ತಿ ಗೆಲ್ಲುವ ಭರವಸೆಯೊಂದಿಗೆ ಟೂರ್ನಿಗೆ ಪ್ರವೇಶಿಸಿರುವ ಜಪಾನ್ ತಂಡವು ಕಜಕಿಸ್ತಾನ್ ತಂಡವನ್ನು 7-0 ಅಂತರದಿಂದ ಏಕಪಕ್ಷೀಯವಾಗಿ ಸೋಲಿಸಿತು. ಪೂಲ್ ಬಿ ನಲ್ಲೂ ದಕ್ಷಿಣ ಕೊರಿಯಾ, ಚೈನೀಸ್ ತೈಪೆಯನ್ನು 7-0 ಅಂತರದಿಂದ ಸೋಲಿಸಿತು. ಆದರೆ ಪಾಕಿಸ್ತಾನದ ಬದಲಿಗೆ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದಿರುವ ಬಾಂಗ್ಲಾದೇಶ ತಂಡವು ಮಲೇಷ್ಯಾ ವಿರುದ್ಧ 1-4 ಅಂತರದಿಂದ ಸೋಲೊಪ್ಪಿಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
