IND vs ENG: ರಣರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ಮಣಿಸಿ ಫೈನಲ್ಗೇರಿದ ಟೀಂ ಇಂಡಿಯಾ
India Dominates England in T20 WC 2026 Semifinal: 2026ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ರೋಚಕ ಗೆಲುವು ಸಾಧಿಸಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ 253 ರನ್ ಗಳಿಸಿತ್ತು. ಇಂಗ್ಲೆಂಡ್‌ನ ಜೆಕಬ್ ಬೆಥೆಲ್ ಶತಕ ಸಿಡಿಸಿದರೂ, ಕೊನೆಯ ಓವರ್‌ಗಳಲ್ಲಿ ಭಾರತದ ಬೌಲರ್‌ಗಳ ಅತ್ಯುತ್ತಮ ಪ್ರದರ್ಶನ ತಂಡಕ್ಕೆ ರಣರೋಚಕ ಜಯ ತಂದುಕೊಟ್ಟಿತು.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2026 ರ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯವನ್ನು 7 ರನ್ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್ಗೇರಿದೆ. ರನ್ಗಳ ಮಳೆಯೇ ಹರಿದ ಈ ಪಂದ್ಯ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿತು. ಅದರ ಫಲವಾಗಿ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 253 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಗುರಿ ದೊಡ್ಡದಿದ್ದರಿಂದ ಇಂಗ್ಲೆಂಡ್, ಭಾರತಕ್ಕೆ ಸುಲಭ ತುತ್ತಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಆಂಗ್ಲರ ಪರ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸಿದ ಜೆಕಬ್ ಬೆಥೆಲ್ ಸ್ಫೋಟಕ ಶತಕ ಸಿಡಿಸಿ ಇಂಗ್ಲೆಂಡ್ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಆದರೆ ಕೊನೆಯ 4 ಓವರ್‌ಗಳಲ್ಲಿ ಪಂದ್ಯದ ದಿಕ್ಕು ಬದಲಿಸಿದ ಭಾರತದ ಬೌಲರ್ಗಳು ತಂಡವನ್ನು ರಣರೋಚಕ ಗೆಲುವಿನತ್ತ ಕೊಂಡೊಯ್ದರು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು.ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ 253 ರನ್ ಕಲೆಹಾಕಿತು. ಇದು ಟಿ20 ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ತಂಡವೊಂದು ಕಲೆಹಾಕಿದ ಅತ್ಯಧಿಕ ಮೊತ್ತವಾಗಿತ್ತು.ಭಾರತ ಈ ದಾಖಲೆಯ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 89 ರನ್ ಗಳಿಸಿದರೆ, ಶಿವಂ ದುಬೆ 25 ಎಸೆತಗಳಲ್ಲಿ 43 ರನ್ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 27 ರನ್ ಗಳಿಸಿದರೆ, ತಿಲಕ್ ವರ್ಮಾ 7 ಎಸೆತಗಳಲ್ಲಿ 21 ರನ್ ಗಳಿಸಿದರು.
Published On - 10:51 pm, Thu, 5 March 26
