
ಪ್ಯಾರಿಸ್ ಒಲಿಂಪಿಕ್ಸ್ನ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡವು ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಸೋಮವಾರ ಯವೆಸ್-ಡು-ಮನೋಯಿರ್ ಕ್ರೀಡಾಂಗಣದಲ್ಲಿ ನಡೆದ ಪೂಲ್-B ಪಂದ್ಯದಲ್ಲಿ ಭಾರತ ತಂಡವು ಅರ್ಜೆಂಟೀನಾ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಆರಂಭದಿಂದಲೇ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಅರ್ಜೆಂಟೀನಾ ಆರಂಭಿಕ ಮುನ್ನಡೆ ಪಡೆದಿತ್ತು.
ಮುನ್ಪಡೆ ಆಟಗಾರ ಲ್ಯೂಕಾಸ್ ಮಾರ್ಟಿನೆಝ್ 22ನೇ ನಿಮಿಷದಲ್ಲಿ ಅತ್ಯುತ್ತಮ ಡ್ರಿಬ್ಲಿಂಗ್ನೊಂದಿಗೆ ಚೆಂಡನ್ನು ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಅರ್ಜೆಂಟೀನಾ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.ಇದರ ಬೆನ್ನಲ್ಲೇ ಸತತ ಪ್ರತಿದಾಳಿ ನಡೆಸಿದ ಭಾರತೀಯ ಪಡೆಗೆ ಅರ್ಜೆಂಟೀನಾದ ರಕ್ಷಣಾ ಕವಚವನ್ನು ಭೇದಿಸಲು ಸಾಧ್ಯವಾಗಲೇ ಇಲ್ಲ.
ಇತ್ತ ಭಾರತೀಯರು ಉತ್ತಮ ಹೊಂದಾಣಿಕೆಯ ಆಟ ಪ್ರದರ್ಶಿಸಿದರೂ, ಅತ್ತ ಅರ್ಜೆಂಟೀನಾ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದರು. ಪರಿಣಾಮ 58 ನಿಮಿಷಗಳವರೆಗೆ ಭಾರತಕ್ಕೆ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.
ಆದರೆ ಕೊನೆಯ 2 ನಿಮಿಷಗಳಿರುವಾಗ ಆಕ್ರಮಣಕಾರಿ ಆಟದೊಂದಿಗೆ ಮುನ್ನುಗ್ಗಿದ ಭಾರತೀಯ ಮುನ್ಪಡೆ ಆಟಗಾರರು ಪೆನಾಲ್ಟಿ ಕಾರ್ನರ್ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾದರು. 59ನೇ ನಿಮಿಷದಲ್ಲಿ ಸಿಕ್ಕ ಈ ಅವಕಾಶವನ್ನು ಅದ್ಭುತ ಫ್ಲಿಕ್ನೊಂದಿಗೆ ಗೋಲಾಗಿ ಪರಿವರ್ತಿಸುವಲ್ಲಿ ಟೀಮ್ ಇಂಡಿಯಾ ನಾಯಕ ಹರ್ಮನ್ಪ್ರೀತ್ ಸಿಂಗ್ ಯಶಸ್ವಿಯಾದರು. ಪರಿಣಾಮ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿತು.
ಅಂದರೆ ಸೋಲಿನ ದವಡೆಯಲ್ಲಿದ್ದ ಭಾರತ ತಂಡವು ಕೊನೆಯ ನಿಮಿಷದಲ್ಲಿ ಅರ್ಜೆಂಟೀನಾ ಗೆಲುವನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಟೀಮ್ ಇಂಡಿಯಾ ಪೂಲ್-ಬಿ ಅಂಕ ಪಟ್ಟಿಯಲ್ಲಿ 4 ಪಾಯಿಂಟ್ಸ್ನೊಂದಿಗೆ 3ನೇ ಸ್ಥಾನಕ್ಕೇರಿದೆ.
ಪೂಲ್-ಬಿ ನಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವು ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 4.45 ರಿಂದ ಶುರುವಾಗಲಿದೆ. ಅತ್ತ ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿರುವ ಐರ್ಲೆಂಡ್ ತಂಡಕ್ಕೆ ಈ ಪಂದ್ಯ ನಿರ್ಣಾಯಕ. ಇತ್ತ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲಿದೆ. ಹೀಗಾಗಿ ಇಂದಿನ ಮ್ಯಾಚ್ನಲ್ಲೂ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಇದನ್ನೂ ಓದಿ: Suryakumar Yadav: ಸೂರ್ಯಕುಮಾರ್ ಯಾದವ್ ಅಬ್ಬರಕ್ಕೆ ಮ್ಯಾಕ್ಸ್ವೆಲ್ ವಿಶ್ವ ದಾಖಲೆ ಉಡೀಸ್
Published On - 8:32 am, Tue, 30 July 24