AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಟೆನ್ನಿಸ್ ಅಭಿಯಾನ ಅಂತ್ಯ

Paris Olympics 2024: ಭಾನುವಾರ ನಡೆದ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನು ಭಾಕರ್ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮೆಡಲ್ ಖಾತೆ ತೆರೆದಿದೆ. ಇನ್ನು ಸೋಮವಾರ ನಡೆಯಲಿರುವ ಏರ್​ ರೈಫಲ್ ಶೂಟಿಂಗ್ ಫೈನಲ್​ನಲ್ಲಿ ಭಾರತದ ಇಬ್ಬರು ಶೂಟರ್​ಗಳು ಸ್ಪರ್ಧಿಸಲಿದ್ದು, ಇವರಿಂದ ಪದಕ ನಿರೀಕ್ಷಿಸಬಹುದು.

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದ ಟೆನ್ನಿಸ್ ಅಭಿಯಾನ ಅಂತ್ಯ
Rohan-Sri ram
TV9 Web
| Edited By: |

Updated on:Jul 30, 2024 | 12:34 PM

Share

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತ ಟೆನ್ನಿಸ್ ತಂಡದ ಅಭಿಯಾನ ಅಂತ್ಯಗೊಂಡಿದೆ. ಸಿಂಗಲ್ಸ್​ನಲ್ಲಿ ಸ್ಪರ್ಧಿಸಿದ್ದ ಸುಮಿತ್ ನಗಾಲ್ ಹಾಗೂ ಪುರುಷರ ಡಬಲ್ಸ್​ನಲ್ಲಿ ಕಣಕ್ಕಿಳಿದಿದ್ದ ರೋಹನ್ ಬೋಪಣ್ಣ ಮತ್ತು ಎನ್ ಶ್ರೀರಾಮ್ ಬಾಲಾಜಿ ಮೊದಲ ಪಂದ್ಯಗಳಲ್ಲೇ ಮುಗ್ಗರಿಸಿದ್ದಾರೆ. ಇದರೊಂದಿಗೆ ಟೆನ್ನಿಸ್​ನಲ್ಲಿ ಪದಕ ಗೆಲ್ಲುವ ಭಾರತದ ಕನಸು ಕೂಡ ಕಮರಿದೆ.

ಪುರುಷರ ಸಿಂಗಲ್ಸ್​ನಲ್ಲಿ ಕಣಕ್ಕಿಳಿದಿದ್ದ ಸುಮಿತ್ ನಗಾಲ್ ರೋಲ್ಯಾಂಡ್ ಗ್ಯಾರೋಸ್​ನಲ್ಲಿ ತಮ್ಮ ಕೈಚಳಕ ಪ್ರದರ್ಶಿಸುವಲ್ಲಿ ವಿಫಲರಾದರು. ಭಾನುವಾರ ನಡೆದ ಈ ಪಂದ್ಯದಲ್ಲಿ ಸುಮಿತ್ ಫ್ರೆಂಚ್ ಆಟಗಾರ ಕೊರೆಂಟಿನ್ ಮೌಟೆಟ್ 6-2, 2-6, 7-5 ಸೆಟ್​ಗಳಿಂದ ಸೋಲನುಭವಿಸಿದರು. ಇದರೊಂದಿಗೆ ಸುಮಿತ್ ನಗಾಲ್ ಪ್ಯಾರಿಸ್​ ಒಲಿಂಪಿಕ್ಸ್​ನಿಂದ ಹೊರಬಿದ್ದಿದ್ದಾರೆ.

ಇನ್ನು ಪುರುಷರ ಡಬಲ್ಸ್ ಟೆನಿಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ಧ ರೋಹನ್ ಬೋಪಣ್ಣ ಮತ್ತು ಶ್ರೀರಾಮ್ ಬಾಲಾಜಿ ಕೂಡ ನೀರಸ ಪ್ರದರ್ಶನ ನೀಡಿದ್ದಾರೆ. ರೋಲ್ಯಾಂಡ್ ಗ್ಯಾರೋಸ್​ನ ಕ್ಲೇ ಕೋರ್ಟ್​ನಲ್ಲಿ ನಡೆದ ಈ ಪಂದ್ಯದಲ್ಲಿ ಫ್ರೆಂಚ್ ಜೋಡಿ ಗೇಲ್ ಮೊನ್‌ಫಿಲ್ಸ್ ಮತ್ತು ಎಡ್ವರ್ಡ್ ರೋಜರ್-ವಾಸೆಲಿನ್ ವಿರುದ್ಧ ಮೊದಲ ಸುತ್ತಿನಲ್ಲೇ ಭಾರತೀಯ ಜೋಡಿ ಮುಗ್ಗರಿಸಿದ್ದಾರೆ.

ಮೂರು ಸೆಟ್​ಗಳ ಈ ಪಂದ್ಯದ ಮೊದಲ ಸುತ್ತಿನಲ್ಲಿ ರೋಹನ್ ಬೋಪಣ್ಣ ಮತ್ತು ಶ್ರೀರಾಮ್ ಬಾಲಾಜಿ ಉತ್ತಮ ಹೋರಾಟ ಪ್ರದರ್ಶಿಸಿದ್ದರು. ಇದಾಗ್ಯೂ ಫ್ರೆಂಚ್ ಜೋಡಿ 5-7 ಅಂತರದಿಂದ ಸೆಟ್ ಗೆದ್ದುಕೊಂಡರು. ಇನ್ನು ದ್ವಿತೀಯ ಸುತ್ತಿನಲ್ಲಿ ಪ್ರಾಬಲ್ಯ ಮೆರೆದ ಗೇಲ್ ಮೊನ್‌ಫಿಲ್ಸ್ ಮತ್ತು ಎಡ್ವರ್ಡ್ ರೋಜರ್-ವಾಸೆಲಿನ್ 2-6 ಅಂತರದಿಂದ ಗೆಲ್ಲುವ ಮೂಲಕ ಮುಂದಿನ ಹಂತಕ್ಕೇರಿದರು.

ಫ್ರೆಂಚ್ ಜೋಡಿಯ ಪರಾಕ್ರಮದ ಮುಂದೆ ಮಂಕಾದಂತೆ ಕಂಡು ಬಂದ ಆನುಭವಿ ಆಟಗಾರ ರೋಹನ್ ಬೋಪಣ್ಣ ಹಾಗೂ ಶ್ರೀರಾಮ್ ಮೊದಲ ಪಂದ್ಯದಲ್ಲೇ 5-7, 2-6 ಅಂತರದಿಂದ ಸೋತು ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನ ಅಂತ್ಯಗೊಳಿಸಿದ್ದಾರೆ. ವಿಶೇಷ ಎಂದರೆ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನಡೆದ ಪಂದ್ಯದ ವೇಳೆ ಟೀಮ್ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಕೂಡ ಕಾಣಿಸಿಕೊಂಡಿದ್ದರು. ಇದಾಗ್ಯೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಭಾರತೀಯ ಡಬಲ್ಸ್ ಜೋಡಿ ವಿಫಲರಾಗಿದ್ದಾರೆ.

ಬೋಪಣ್ಣ ವಿದಾಯ:

ಈ ಸೋಲಿನೊಂದಿಗೆ ರೋಹನ್ ಬೋಪಣ್ಣ ಭಾರತೀಯ ಟೆನ್ನಿಸ್​ಗೆ ವಿದಾಯ ಹೇಳಿದ್ದಾರೆ. ಅಂದರೆ ಇನ್ಮುಂದೆ ಅವರು ಟೆನಿಸ್ ಅಂಗಳದಲ್ಲಿ ಕಾಣಿಸಿಕೊಂಡರೂ, ಒಲಿಂಪಿಕ್ಸ್ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸುವುದಿಲ್ಲ. ಇದಾಗ್ಯೂ ಅವರು ಓಪನ್ ಟೆನಿಸ್ ಟೂರ್ನಿಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಡಬಲ್ಲ 10 ಸ್ಪರ್ಧಿಗಳು

ಖಾತೆ ತೆರೆದ ಭಾರತ:

ಭಾನುವಾರ ನಡೆದ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಮನು ಭಾಕರ್ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮೆಡಲ್ ಖಾತೆ ತೆರೆದಿದೆ. ಇನ್ನು ಸೋಮವಾರ ನಡೆಯಲಿರುವ ಏರ್​ ರೈಫಲ್ ಶೂಟಿಂಗ್ ಫೈನಲ್​ನಲ್ಲಿ ಭಾರತದ ರಮಿತಾ ಜಿಂದಾಲ್ (ಮಹಿಳಾ) ಹಾಗೂ ಅರ್ಜುನ್ ಬಾಬುತಾ (ಪುರುಷರ) ಕಾಣಿಸಿಕೊಳ್ಳಲಿದ್ದು, ಇವರಿಂದ ಪದಕ ನಿರೀಕ್ಷಿಸಬಹುದು.

Published On - 7:24 am, Mon, 29 July 24