ಬಾಕ್ಸಿಂಗ್ ಡೇ ಟೆಸ್ಟ್; ಮೊದಲ ದಿನದ ಗೌರವಕ್ಕೆ ಪಾತ್ರರಾದ ಟೀಂ ಇಂಡಿಯಾ ವೇಗಿಗಳು.. ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ
ಪಂದ್ಯದ ಆರಂಭದಿಂದಲೂ ಕರಾರುವಕ್ಕಾದ ದಾಳಿ ನಡೆಸಿದ ಭಾರತೀಯ ವೇಗಿಗಳು ಯಾವೊಬ್ಬ ಆಸಿಸ್ ಆಟಗಾರನ್ನು ನೆಲಕಚ್ಚಿ ಆಡದಂತೆ ಮಾಡಿದರು. ಟೀಂ ಇಂಡಿಯಾ ಬೌಲರ್ಗಳ ದಾಳಿಗೆ ಬೆದರಿದ ಆಸಿಸ್ ದಾಂಡಿಗರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಪೆವಿಲಿಯನ್ ಪರೇಡ್ ನಡೆಸಿದರು.
ಮೆಲ್ಬೋರ್ನ್: ಟೀಂ ಇಂಡಿಯಾ ಹಾಗೂ ಆಸಿಸ್ಗೆ ಪ್ರತಿಷ್ಠೆಯ ಪಂದ್ಯವಾಗಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲನೇ ದಿನದ ಆಟ ಮುಕ್ತಾಯವಾಗಿದೆ.
ಮೊದಲನೇ ದಿನದ ಆಟವನ್ನು ಗಮನಿಸಿದರೆ, ದಿನದ ಗೌರವ ಭಾರತೀಯ ಬೌಲರ್ಗಳಿಗೆ ಸಲ್ಲಬೇಕಾಗುತ್ತದೆ. ಘಟಾನುಘಟಿ ದಾಂಡಿಗರನ್ನೇ ಹೊಂದಿರುವ ಆಸಿಸ್ ತಂಡವನ್ನು ಅವರ ನೆಲದಲ್ಲೇ (195 ರನ್) ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವುದರಲ್ಲಿ ಭಾರತೀಯ ಬೌಲರ್ಗಳು ಮೇಲುಗೈ ಸಾಧಿಸಿದ್ದಾರೆ.
ಪಂದ್ಯದ ಆರಂಭದಿಂದಲೂ ಕರಾರುವಕ್ಕಾದ ದಾಳಿ ನಡೆಸಿದ ಭಾರತೀಯ ವೇಗಿಗಳು ಯಾವೊಬ್ಬ ಆಸಿಸ್ ಆಟಗಾರನ್ನು ನೆಲಕಚ್ಚಿ ಆಡದಂತೆ ಮಾಡಿದರು. ಟೀಂ ಇಂಡಿಯಾ ಬೌಲರ್ಗಳ ದಾಳಿಗೆ ಬೆದರಿದ ಆಸಿಸ್ ದಾಂಡಿಗರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಪೆವಿಲಿಯನ್ ಪರೇಡ್ ನಡೆಸಿದರು. ಅದರಲ್ಲು ಆಸಿಸ್ ತಂಡದ ಪ್ರಮುಖ ಇಬ್ಬರು ದಾಂಡಿಗರನ್ನು ಶೂನ್ಯಕ್ಕೆ ಔಟ್ ಮಾಡಿದ್ದು ಟೀಂ ಇಂಡಿಯಾ ವೇಗಿಗಳ ಬೌಲಿಂಗ್ ಸಾಮಥ್ರ್ಯವನ್ನು ತೋರುತ್ತದೆ.
ಇದರ ಫಲವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 195 ರನ್ ಗಳಿಸಿದೆ. ಆಸ್ಟ್ರೇಲಿಯಾ ಪರ ಮಾರ್ನಸ್ ಲಾಬುಸ್ಚೆನ್ ಅತಿ ಹೆಚ್ಚು 48 ರನ್ ಗಳಿಸಿದರು. ಅವರಲ್ಲದೆ, ಟ್ರಾವಿಸ್ ಹೆಡ್ 38 ಮತ್ತು ಮ್ಯಾಥ್ಯೂ ವೇಡ್ 30 ರನ್ ಗಳಿಸಿದರು. ಮತ್ತೊಂದೆಡೆ, ಮಾರಕ ದಾಳಿ ನಡೆಸಿದ ಭಾರತದ ಜಸ್ಪ್ರೀತ್ ಬುಮ್ರಾ 4 ವಿಕೆಟ್, ಆರ್ ಅಶ್ವಿನ್ 3, ಮೊಹಮ್ಮದ್ ಸಿರಾಜ್ 2 ಮತ್ತು ರವೀಂದ್ರ ಜಡೇಜಾ 1 ವಿಕೆಟ್ ಪಡೆದು ಮಿಂಚಿದರು.
ಭಾರತಕ್ಕೆ ಆರಂಭದಲ್ಲೇ ಆಘಾತ.. ಆಸ್ಟ್ರೇಲಿಯಾ ಮೊದಲನೇ ಇನ್ನಿಂಗ್ಸ್‌ನಲ್ಲಿ ನೀಡಿರುವ 195 ರನ್ಗಳನ್ನು ಬೆನ್ನತ್ತಿರುವ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ. ಆರಂಭಿಕ ಮಾಯಾಂಕ್ ಖಾತೆ ತೆರೆಯುವುದಕ್ಕೂ ಮುನ್ನವೆ ಸ್ಟಾರ್ಕ್ ಎಸೆದ ಮೊದಲನೇ ಓವರ್ನ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಆರಂಭಿಕ ಗಿಲ್ ಜೊತೆ ಸೇರಿಕೊಂಡ ಚೇತೇಶ್ವರ್ ಪೂಜಾರ, ಗಿಲ್ ಜೊತೆ ಸೇರಿ ತಾಳ್ಮೆಯ ಆಟಕ್ಕೆ ಮುಂದಾಗಿದ್ದಾರೆ. ದಿನದ ಅತ್ಯಂಕ್ಕೆ ಭಾರತ 1 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ.
ಟೀಂ ಇಂಡಿಯಾ ದಾಂಡಿಗರ ಪ್ರತ್ಯುತ್ತರ ಏನಾಗಿರಲಿದೆ..? 2ನೇ ಟೆಸ್ಟ್ ಮೊದಲನೇ ದಿನದಲ್ಲಿ ಆಸಿಸ್ ಆಟಗಾರರು ವಿಕೆಟ್ ಒಪ್ಪಿಸಿದ ರೀತಿ ನೋಡಿದರೆ, ಪಿಚ್ ಬೌಲಿಂಗ್ ಸಹಕಾರಿಯಾಗಿದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಭಾರತೀಯ ಬ್ಯಾಟ್ಸ್ಮನ್ಗಳು ತಾಳ್ಮೆಯ ಹಾಗೂ ಎಚ್ಚರಿಕೆಯ ಆಟಕ್ಕೆ ಮುಂದಾಗಬೇಕಿದೆ. ಏಕೆಂದರೆ ಅನಾನುಭವಿಗಳೆ ಹೆಚ್ಚಿರುವ ಭಾರತ ತಂಡಕ್ಕೆ ಈಗ ಪೂಜಾರ ಹಾಗೂ ನಾಯಕ ರಹಾನೆಯೆ ತಂಡದ ಬೆನ್ನೇಲುಬಾಗಿದ್ದಾರೆ. ಈ ಇಬ್ಬರ ಆಟದ ಮೇಲೆ ತಂಡದ ಭವಿಷ್ಯ ನಿರ್ಧಾರವಾಗಲಿದೆ.
ಕೊಹ್ಲಿ ಸ್ಥಾನ ತುಂಬುತ್ತಾರ ಜಡೇಜಾ..? ನಾಯಕ ಕೊಹ್ಲಿ ಸ್ಥಾನಕ್ಕೆ ಆಯ್ಕೆಯಾಗಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ಕೇವಲ 5.3 ಓವರ್ ಎಸೆದು, 15 ರನ್ ನೀಡಿ, 1 ವಿಕೆಟ್ ಪಡೆದುಕೊಂಡಿದ್ದಾರೆ. ಹೀಗಾಗಿ ರವೀಂದ್ರ ಜಡೇಜಾ ಬ್ಯಾಟಿಂಗ್ ಮೇಲೆ ಎಲ್ಲರ ನಿರೀಕ್ಷೆ ಹೆಚ್ಚಾಗಿದೆ. ಬ್ಯಾಟಿಂಗ್ನಲ್ಲಿ ಜಡೇಜಾ ಅಬ್ಬರಿಸಿದರೆ ಕೊಹ್ಲಿ ಅನುಪಸ್ಥಿತಿಯನ್ನ ಮರೆಯಬಹುದಾಗಿದೆ.
ಒಟ್ಟಾರೆಯಾಗಿ ಮೊದಲ ದಿನದ ಗೌರವ ಸಂಪಾದಿಸಿರುವ ಟೀಂ ಇಂಡಿಯಾದ 2ನೇ ದಿನದ ಆಟದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಈಗಾಗಲೇ ಮೊದಲ ವಿಕೆಟ್ ಕಳೆದುಕೊಂಡಿರುವ ಭಾರತ 2ನೇ ದಿನದಲ್ಲಿ ಹೇಗೆ ಪುಟಿದೇಳಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.