India vs England: ಅಂತಿಮ ಟೆಸ್ಟ್ ಗೆದ್ದು ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸುವ ತವಕದಲ್ಲಿ ಟೀಂ ಇಂಡಿಯಾ.. ಆಡುವ 11ರ ಬಳಗ ಹೀಗಿದೆ
India vs England: ವೈಯಕ್ತಿಕ ಕಾರಣಗಳಿಂದ ಸರಣಿಯಿಂದ ಹಿಂದೆ ಸರಿದಿರುವ ಟೀಂ ಇಂಡಿಯಾದ ಪ್ರಧಾನ ವೇಗಿ ಜಸ್ಪ್ರೀತ್ ಬುಮ್ರಾ ಅವರ ಬದಲಿಗೆ ಬೇರೆ ಯಾರಿಗೆ ಅವಕಾಶ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಅಹಮದಾಬಾದ್: ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುರುವಾರ (ಮಾರ್ಚ್ 4) ಆರಂಭವಾಗಲಿರುವ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಟೀಂ ಇಂಡಿಯಾ- ಇಂಗ್ಲೆಂಡ್‌ನೊಂದಿಗೆ ಸೆಣಸಾಡಲಿದೆ. ಅದೇ ಸ್ಥಳದಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ 10 ವಿಕೆಟ್‌ಗಳ ಗೆಲುವಿನೊಂದಿಗೆ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ ವಿರಾಟ್ ಕೊಹ್ಲಿ ಮತ್ತು ಅವರ ತಂಡವು ಸರಣಿಯನ್ನು 3-1 ರಿಂದ ಗೆದ್ದುಕೊಳ್ಳುವ ಉತ್ಸಾಹದಲ್ಲಿದೆ. ಮತ್ತೊಂದೆಡೆ, ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡವು ಸರಣಿಗೆ ವಾಪಾಸಾಗಿ, ಆತಿಥೇಯರಿಗೆ ಕಠಿಣ ಸವಾಲನ್ನು ನೀಡಲು ಮತ್ತು ಸರಣಿಯನ್ನು ಸಮಗೊಳಿಸುವ ತವಕದಲ್ಲಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಸರಣಿಯಿಂದ ಹಿಂದೆ ಸರಿದಿರುವ ಟೀಂ ಇಂಡಿಯಾದ ಪ್ರಧಾನ ವೇಗಿ ಜಸ್ಪ್ರೀತ್ ಬುಮ್ರಾ ಅವರ ಬದಲಿಗೆ ಬೇರೆ ಯಾರಿಗೆ ಅವಕಾಶ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಕಳೆದ ಪಂದ್ಯದ ಹೀನಾಯ ಸೋಲಿನ ನಂತರ ಇಂಗ್ಲೆಂಡ್ ಕೂಡ ತಮ್ಮ ತಂಡದಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿವೆ.
ಅಹಮದಾಬಾದ್‌ನಲ್ಲಿ ನಡೆಯುವ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ ಇಲೆವೆನ್ ಹೇಗಿರಬಹುದು ಎಂಬುದು ಇಲ್ಲಿದೆ..
1. ರೋಹಿತ್ ಶರ್ಮಾ: ಹಿರಿಯ ಓಪನರ್ ಮೂರನೇ ಟೆಸ್ಟ್‌ನಲ್ಲಿ ಅದ್ಭುತ ಅರ್ಧಶತಕವನ್ನು ಬಾರಿಸಿದಲ್ಲದೇ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 145 ರನ್ ಗಳಿಸಲು ನೆರವಾದರು. ಎರಡನೇ ಇನ್ನಿಂಗ್ಸ್‌ನಲ್ಲಿ ರೋಹಿತ್ 25 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟಿದಲ್ಲದೇ ಅಜೇಯರಾಗಿ ಉಳಿದರು. ಎರಡನೇ ಟೆಸ್ಟ್‌ನಲ್ಲಿ ಚೆನ್ನೈನಲ್ಲಿ ಭವ್ಯವಾದ 161 ರನ್ ಗಳಿಸಿದ ರೋಹಿತ್, ಭಾರತದ ಅದ್ಭುತ ಗೆಲುವಿಗೆ ದಾರಿ ಮಾಡಿಕೊಟ್ಟರು. ಗುಲಾಬಿ ಚೆಂಡಿನ ಟೆಸ್ಟ್‌ನಲ್ಲಿನ ಪ್ರದರ್ಶನದ ನಂತರ ಬ್ಯಾಟ್ಸ್‌ಮನ್‌ಗಳ ಇತ್ತೀಚಿನ ಟೆಸ್ಟ್ ಶ್ರೇಯಾಂಕದಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಎಂಟನೇ ಸ್ಥಾನವನ್ನು ರೋಹಿತ್ ಗಳಿಸಿದ್ದಾರೆ. ಹೀಗಾಗಿ ಮುಂಬೈಕರ್ ಮೇಲೆ ಅಂತಿಮ ಟೆಸ್ಟ್‌ನಲ್ಲಿ ಸಾಕಷ್ಟು ನಿರೀಕ್ಷೆಗಳಿವೆ.
2. ಶುಭ್ಮನ್ ಗಿಲ್: ಆಸ್ಟ್ರೇಲಿಯಾದಲ್ಲಿ ಅವರ ಅದ್ಭುತ ಪ್ರದರ್ಶನದಿಂದಾಗಿ ಯುವ ಬ್ಯಾಟ್ಸ್‌ಮನ್‌ಗೆ, ಮಯಾಂಕ್ ಅಗರ್‌ವಾಲ್ ಅವರ ಬದಲು ಇಂಗ್ಲೆಂಡ್ ವಿರುದ್ಧ ಆರಂಭಿಕ ಆಟಗಾರನಾಗಿ ಆದ್ಯತೆ ನೀಡಲಾಗಿದೆ. ಆದರೆ ಆರಂಭವನ್ನು ದೊಡ್ಡ ನಾಕ್ ಆಗಿ ಪರಿವರ್ತಿಸಲು ಸಾಧ್ಯವಾಗದ ಕಾರಣ ಗಿಲ್, ತವರು ಸರಣಿಯಲ್ಲಿ ಅಷ್ಟೇನೂ ಉತ್ತಮವಾಗಿ ಆಡಿಲ್ಲ. ಚೆನ್ನೈನಲ್ಲಿ ನಡೆದ ಆರಂಭಿಕ ಟೆಸ್ಟ್‌ನ ಎರಡನೇ ಇನ್ನಿಂಗ್ಸ್ಲ್ಲಿನ 50 ರನ್ನು ಹೊರತುಪಡಿಸಿ, ಬಲಗೈ ಬ್ಯಾಟ್ಸ್‌ಮನ್ ಉಳಿದ ಐದು ಇನ್ನಿಂಗ್ಸ್‌ಗಳಲ್ಲಿ 29, 0, 14, 11 ಮತ್ತು 15 ರನ್ ಬಾರಿಸಿದ್ದಾರೆ. ಆಗಿದ್ದರೂ, ತಂಡದ ಆಡಳಿತ ಮಂಡಳಿಯು ಪ್ರತಿಭಾವಂತ ಪಂಜಾಬ್ ಕ್ರಿಕೆಟಿಗನಿಗೆ ಅಂತಿಮ ಟೆಸ್ಟ್‌ನಲ್ಲಿ ಮತ್ತೊಂದು ಅವಕಾಶವನ್ನು ನೀಡುವ ಸಾಧ್ಯತೆಗಳಿವೆ.
3.ಚೇತೇಶ್ವರ ಪೂಜಾರ: ಈ ಸೌರಾಷ್ಟ್ರ ಬ್ಯಾಟ್ಸ್‌ಮನ್ ಕೂಡ ನಡೆಯುತ್ತಿರುವ ಸರಣಿಯಲ್ಲಿ ಉತ್ತಮ ಫಾರ್ಮ್‌ನಲ್ಲಿಲ್ಲ. ಗಿಲ್ನಂತೆಯೇ, ಪೂಜಾರ ಕೂಡ ನಡೆಯುತ್ತಿರುವ ಸರಣಿಯಲ್ಲಿ ಒಂದು ಪಂದ್ಯದಲ್ಲಿ ಮಾತ್ರ ಕೇವಲ ಐವತ್ತು ರನ್ ಗಳಿಸಿದ್ದಾರೆ. ಆರಂಭಿಕ ಟೆಸ್ಟ್‌ನಲ್ಲಿ 222 ಎಸೆತಗಳಲ್ಲಿ 73 ರನ್ ಗಳಿಸಿದ ಅವರ ಹೋರಾಟ ವ್ಯರ್ಥವಾಯಿತು. ಏಕೆಂದರೆ ಭಾರತವು ಆ ಪಂದ್ಯವನ್ನು ಕಳೆದುಕೊಂಡಿತು. ಅವರು ಬ್ಯಾಟಿಂಗ್ ಮಾಡಿದ ಮುಂದಿನ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 15, 21, 7 ಮತ್ತು 0 ರನ್ ಗಳಿಸಿದರು. ಹೀಗಾಗಿ ಈ ಪಂದ್ಯದಲ್ಲಿ ಪೂಜಾರ ಅವರ ಬ್ಯಾಟ್ನಿಂದ ಬಿಗ್ ಸ್ಕೋರ್ ಬರುವ ನಿರೀಕ್ಷೆ ಇದೆ.
4.ವಿರಾಟ್ ಕೊಹ್ಲಿ: 2021 ರಲ್ಲಿ ಕೊಹ್ಲಿ ಬ್ಯಾಟ್ನಿಂದ ಇನ್ನೂ ಒಂದು ಶತಕ ಕೂಡ ಬಂದಿಲ್ಲ. 2019 ರಲ್ಲಿ ಬಾಂಗ್ಲಾದೇಶ ವಿರುದ್ಧದ ಆ ದ್ವಿಶತಕದ ನಂತರ ಕೊಹ್ಲಿ ಬ್ಯಾಟ್ ಮತ್ತೆ ಆಕಾಶದತ್ತ ಮುಖ ಮಾಡಿಲ್ಲ. ಅಲ್ಲದೆ ಈ ಸಾರಣಿಯಲ್ಲಿ ಕೊಹ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಕೇವಲ ಅರ್ಧತಕಕ್ಕೆ ಕೊಹ್ಲಿಯ ಬ್ಯಾಟ್ ಸದ್ದು ನಿಲ್ಲಿಸುತ್ತಿದೆ. ಹೀಗಾಗಿ ಅಂತಿಮ ಟೆಸ್ಟ್‌ನಲ್ಲಿ ಶತಕ ಸಿಡಿಸಿ, ತಮ್ಮ ಶತಕಗಳ ಬರವನ್ನು ಕೊಹ್ಲಿ ನೀಗಿಸಲ್ಲಿದ್ದಾರೆ.
5. ಅಜಿಂಕ್ಯ ರಹಾನೆ: ಟೀಂ ಇಂಡಿಯಾದ ಉಪನಾಯಕನ ಬ್ಯಾಟಿಂಗ್ ಫಾರ್ಮ್ ಕೂಡ ತೀರ ಕಳಪೆಯಾಗಿದೆ. ಹೋಮ್ ಸರಣಿಯಲ್ಲಿ ರಹಾನೆ ಫಾರ್ಮ್‌ನಲ್ಲಿಲ್ಲ. ಮೆಲ್ಬೋರ್ನ್‌ನಲ್ಲಿ ಅವರ ಸಂವೇದನಾಶೀಲ ಶತಕದ ನಂತರ ರಹಾನೆ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಮುಂಬೈಕರ್ ನಿರೀಕ್ಷೆಗಳಿಗೆ ತಕ್ಕಂತೆ ಆಡುವಲ್ಲಿ ವಿಫಲರಾಗಿದ್ದಾರೆ. ಛೆಪಾಕ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್ನಲ್ಲಿ 67 ರನ್ ಗಳಿಸಿದ ಪ್ರತಿಭಾನ್ವಿತ ಬಲಗೈ ಬ್ಯಾಟ್ಸ್‌ಮನ್, ನಡೆಯುತ್ತಿರುವ ಸರಣಿಯಲ್ಲಿ ಉಳಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 1, 0, 10 ಮತ್ತು 7 ರನ್ ಗಳಿಸಿದ್ದಾರೆ.
6. ರಿಶಭ್ ಪಂತ್: ಪಂತ್ ಅವರು ಮೊಟೆರಾದಲ್ಲಿ ನಡೆದ ಗುಲಾಬಿ ಚೆಂಡಿನ ಟೆಸ್ಟ್‌ನಲ್ಲಿ ಬ್ಯಾಟ್ಸ್‌ಮನ್ ಆಗಿ ಹೆಚ್ಚು ಪ್ರದರ್ಶನ ನೀಡಲಿಲ್ಲ ಆದರೆ ಅವರ ವಿಕೆಟ್‌ಕೀಪಿಂಗ್ ಕಳೆದ ಎರಡು ಪಂದ್ಯಗಳಲ್ಲಿ ಸಾಕಷ್ಟು ಸುಧಾರಿಸಿದೆ ಎಂದು ತೋರುತ್ತದೆ. ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ 58 ರನ್ ಗಳಿಸಿದ ನಂತರ, ಎಲ್ಲರೂ ಪಂತ್ ಮೇಲೆ ಬಾರಿ ನಿರೀಕ್ಷೆ ಇಟ್ಟಿದ್ದರು. ಆದರೆ ನಿರೀಕ್ಷೆಗೆ ತಕ್ಕಂತೆ ಪಂತ್ ಬ್ಯಾಟಿಂಗ್ ಮಾಡುತ್ತಿಲ್ಲ.
7. ಆರ್ ಅಶ್ವಿನ್: ಅಮೋಘ ಬ್ಯಾಟಿಂಗ್ ಮತ್ತು ಬೌಲಿಂಗ್ನಿಂದಾಗಿ ಎರಡನೇ ಟೆಸ್ಟ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ತೋರಿದ ಅಶ್ವಿನ್ ಮೇಲೆ ಈಗ ಟೀಂ ಇಂಡಿಯಾ ಸಾಕಷ್ಟು ಅವಲಂಬಿತವಾಗಿದೆ. ಅದೇ ನಂಬಿಕೆಯನ್ನು ಉಳಿಸಿಕೊಂಡಿರುವ ಆರ್. ಅಶ್ವಿನ್ ಮೂರನೇ ಟೆಸ್ಟ್‌ನಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಈ ಅನುಭವಿ ಆಫ್ ಸ್ಪಿನ್ನರ್ ಹಿಂದಿನ ಪಂದ್ಯದಲ್ಲಿ 400 ವಿಕೆಟ್ ಪಡೆದ ಆಟಗಾರರ ಕ್ಲಬ್‌ಗೆ ಅಧಿಕೃತವಾಗಿ ಪ್ರವೇಶ ಪಡೆದರು.
8. ಅಕ್ಷರ್ ಪಟೇಲ್: ಪಿಂಕ್ ಬಾಲ್ ಟೆಸ್ಟ್‌ನಲ್ಲಿನ ಸಾಧನೆಗಾಗಿ ಎಡಗೈ ಸ್ಪಿನ್ನರ್ 3ನೇ ಟೆಸ್ಟ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಏಕೆಂದರೆ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ 5 ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾಕ್ಕೆ ನೆರವಾದರು. ಸ್ಪಿನ್-ಸ್ನೇಹಿ ಮೊಟೆರಾ ಪಿಚ್‌ನಲ್ಲಿ ಇಂಗ್ಲಿಷ್ ಬ್ಯಾಟ್ಸ್ಮನ್ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ಗೆ ಅಟ್ಟುವಲ್ಲಿ ಅಕ್ಷರ್ ಯಶಸ್ವಿಯಾದರು. ಹೀಗಾಗಿ ಗುಜರಾತ್ ಆಲ್‌ರೌಂಡರ್ ನಾಲ್ಕನೇ ಟೆಸ್ಟ್‌ನಲ್ಲಿ ಮತ್ತೊಮ್ಮೆ ತನ್ನ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ.
9. ವಾಷಿಂಗ್ಟನ್ ಸುಂದರ್ / ಕುಲದೀಪ್ ಯಾದವ್: ವಾಷಿಂಗ್ಟನ್ ಸುಂದರ್ ಅವರನ್ನು ಮೂರನೇ ಟೆಸ್ಟ್ಗೆ ಆಯ್ಕೆ ಮಾಡಲಾಗಿತ್ತು. ಆದರೆ ಆರ್. ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಜೋಡಿಯು ಇಂಗ್ಲೆಂಡ್ನ ಬ್ಯಾಟಿಂಗ್ ಶ್ರೇಣಿಯನ್ನು ಕಡಿಮೆ ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಹೀಗಾಗಿ 3ನೇ ಟೆಸ್ಟ್‌ನಲ್ಲಿ ಸುಂದರ್ಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಆದಾಗ್ಯೂ, ಆಫ್-ಸ್ಪಿನ್ನರ್ ಎರಡನೇ ಇನ್ನಿಂಗ್ಸ್ನಲ್ಲಿ 1 ವಿಕೆಟ್ ಪಡೆದರು. ಆದರೆ ಮೊಟೆರಾ ಟೆಸ್ಟ್‌ನ ಮೊದಲ ಇನ್ನಿಂಗ್ಸ್ನಲ್ಲಿ ರನ್ ಗಳಿಸುವಲ್ಲಿ ಸುಂದರ್ ವಿಫಲರಾದರು. ಹೀಗಾಗಿ ನಾಲ್ಕನೇ ಟೆಸ್ಟ್‌ನಲ್ಲಿ ಕುಲದೀಪ್ ಯಾದವ್ ಅವರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
10. ಇಶಾಂತ್ ಶರ್ಮಾ: ಅನುಭವಿ ವೇಗಿ ಅಂತಿಮ ಟೆಸ್ಟ್‌ನಲ್ಲಿ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ತಮ್ಮ 101 ನೇ ಟೆಸ್ಟ್ ಆಡುತ್ತಿರುವ ಇಶಾಂತ್ ಅವರು ಮೋಟೆರಾ ಪಿಚ್‌ನಲ್ಲಿ ಹೆಚ್ಚಿನ ವಿಕೆಟ್‌ಗಳನ್ನು ಪಡೆಯಲು ಯತ್ನಿಸುತ್ತಿದ್ದಾರೆ. ಈ ಬಲಗೈ ವೇಗಿ ಹೊಸ ಚೆಂಡಿನೊಂದಿಗೆ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.
11. ಉಮೇಶ್ ಯಾದವ್ / ಮೊಹಮ್ಮದ್ ಸಿರಾಜ್: ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದ ಉಮೇಶ್ ಯಾದವ್ ಮೂರನೇ ಟೆಸ್ಟ್ ಪಂದ್ಯದ ನಂತರ ತಂಡಕ್ಕೆ ಸೇರಿಕೊಂಡಿದ್ದಾರೆ. ಅಲ್ಲದೆ ತಂಡದಲ್ಲಿ ಸ್ಥಾನ ಪಡೆಯಲು ಈ ವಿದರ್ಭ ಸ್ಪೀಡ್ ಸ್ಟಾರ್, ಹೈದರಾಬಾದ್ ವೇಗಿ ಮೊಹಮ್ಮದ್ ಸಿರಾಜ್ ಅವರೊಂದಿಗೆ ತೀವ್ರ ಪೈಪೋಟಿ ಎದುರಿಸಬೇಕಾಗಿದೆ. ಸಿರಾಜ್ ತಮಗೆ ಸಿಕ್ಕಿರುವ ಕಡಿಮೆ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.