India vs England Test Series: ವಿರಾಟ್ ಕೊಹ್ಲಿ ಶತಕಗಳ ಬರ ಅಹಮದಾಬಾದ್ನಲ್ಲಿ ನೀಗುವುದೇ
ವಿರಾಟ್ ಕೊಹ್ಲಿ 2008ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ನಂತರ ಪ್ರತಿ ವರ್ಷ ಶತಕಗಳನ್ನು ದಾಖಲಿಸುತ್ತಲೇ ಇದ್ದಾರೆ. ಆದರೆ 2020ರಲ್ಲಿ ಅವರ ಬ್ಯಾಟ್ನಿಂದ ಕ್ರಿಕೆಟ್ನ ಯಾವುದೇ ಫಾರ್ಮಾಟ್ನಲ್ಲಿ ಒಂದೇ ಒಂದು ಶತಕ ದಾಖಲಾಗಲಿಲ್ಲ.
ಭಾರತದ ಲೆಜೆಂಡರಿ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ ಈಗ ವಿರಾಟ್ ಕೊಹ್ಲಿ ಅನುಭವಿಸುತ್ತಿರುವಂಥ ಸ್ಥಿತಿಯನ್ನು ಹಿಂದೆ ಎದುರಿಸಿದ್ದರು. ಈ ಮಹಾನ್ ಆಟಗಾರರು ಪಂದ್ಯಗಳಲ್ಲಿ ಅದ್ಯಾವ ಮಟ್ಟಿನ ಸ್ಥಿರತೆಯೊಂದಿಗೆ ರನ್ ಗಳಿಸುತ್ತಾರೆಂದರೆ, ಒಂದೆರಡು ಟೆಸ್ಟ್ಗಳಲ್ಲಿ ರನ್ ಗಳಿಸಲು ವಿಫಲರಾದರೆ, ಮಾಧ್ಯಮಗಳಲ್ಲಿ ಚರ್ಚೆ ಶುರುವಾಗಿ, ಅವರ ಮೇಲೆ ಒತ್ತಡ ಬೀಳುತ್ತದೆ. ಟೀಮ್ ಇಂಡಿಯಾದ ನಾಯಕ 2008ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ನಂತರ ಪ್ರತಿ ವರ್ಷ ಶತಕಗಳನ್ನು ದಾಖಲಿಸುತ್ತಲೇ ಇದ್ದಾರೆ. ಆದರೆ 2020ರಲ್ಲಿ ಅವರ ಬ್ಯಾಟ್ನಿಂದ ಕ್ರಿಕೆಟ್ನ ಯಾವುದೇ ಫಾರ್ಮಾಟ್ನಲ್ಲಿ ಒಂದೇ ಒಂದು ಶತಕ ದಾಖಲಾಗಲಿಲ್ಲ. ನಿಮಗೆ ಗೊತ್ತಿದೆ, 2015ರಲ್ಲಿ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡ ನಂತರ ಅವರು ಹೇರಳವಾಗಿ ರನ್ ಸಂಪಾದಿಸಿ, ಒಂದಾದ ನಂತರ ಒಂದರಂತೆ ಶತಕಗಳನ್ನು ಬಾರಿಸಲಾರಂಭಿಸಿದರು. ಕೆಲ ಕ್ರಿಕೆಟ್ ಪರಿಣಿತರು ಅವರನ್ನು ಎಲ್ಲ ಆವೃತ್ತಿಗಳಲ್ಲೂ ವಿಶ್ವದ ನಂಬರ್ ಒನ್ ಬ್ಯಾಟ್ಸ್ಮನ್ ಎಂದು ಪರಿಗಣಿಸುತ್ತಾರೆ.
ಹಾಗೆ ನೋಡಿದರೆ, 2021ರಲ್ಲೂ ವಿರಾಟ್ ಕೊಹ್ಲಿಯ ಬ್ಯಾಟ್ನಿಂದ ಈವರೆಗೆ ಶತಕ ಸಿಡಿದಿಲ್ಲ. 2016 ಮತ್ತು 2017ರ ಸ್ವದೇಶದ ಸರಣಿಗಳಲ್ಲಿ ಅವರು ಟನ್ಗಟ್ಟಲೆ ರನ್ ಗಳಿಸಿದ್ದು ಅವರ ಅಭಿಮಾನಿಗಳಿಗೆ ಚೆನ್ನಾಗಿ ನೆನಪಿದೆ. 2018ರ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಅವರು ಉತ್ತಮ ಪ್ರದರ್ಶನಗಳನ್ನು ನೀಡಿದರು. 2019ರಲ್ಲಿ ದಕ್ಷಿಣ ಅಫ್ರಿಕಾ ವಿರುದ್ಧ ಅಜೇಯ 254 ರನ್ಗಳ ಇನ್ನಿಂಗ್ಸ್ ಆಡಿದ ನಂತರ ಬಾಂಗ್ಲಾದೇಶದ ವಿರುದ್ಧ ಭಾರತ ಆಡಿದ ಪ್ರಥಮ ಅಹರ್ನಿಶಿ ಪಂದ್ಯದಲ್ಲಿ 136 ರನ್ಗಳ ಉತ್ಕೃಷ್ಟ ಇನ್ನಿಂಗ್ಸ್ ಆಡಿದರು. ಅದಾದ ಮೇಲೆ 2020ರ ಆರಂಭದಲ್ಲಿ ಭಾರತ ನ್ಯೂಜಿಲೆಂಡ್ ಪ್ರವಾಸ ತೆರಳಿದಾಗ ಅವರು ರನ್ ಹೊಳೆ ಹರಿಸಬಹುದೆಂಬ ನಿರೀಕ್ಷೆಯಿತ್ತು. ಆದರೆ ಅಲ್ಲಿ ಆಡಿದ ಎರಡು ಟೆಸ್ಟ್ಗಳಲ್ಲಿ ಅವರು 2, 19, 3, 14 ರನ್ಗಳಿಸಿ ನಿರಾಶೆಗೊಳಿಸಿದರು.
ಕೊವಿಡ್-19 ಪಿಡುಗಿನಿಂದಾಗಿ ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ಕ್ರೀಡಾ ಚಟುವಟಿಕೆಗಳೂ ಸ್ಥಗಿತಗೊಂಡವು. ಭಾರತ ಪುನಃ ಟೆಸ್ಟ್ ಆಡಿದು ಡಿಸೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ. ಆದರೆ 4-ಟೆಸ್ಟ್ಗಳ ಸರಣಿಯಲ್ಲಿ ಕೊಹ್ಲಿ ಆಡಿದ್ದು, ಅಡಿಲೇಡ್ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಮಾತ್ರ. ಆ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ತಮ್ಮ ಎಂದಿನ ಆಟ ಪ್ರದರ್ಶಿಸುತ್ತಿದ್ದ ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ 28ನೇ ಶತಕ ಬಾರಿಸುವತ್ತ ಮುನ್ನಡೆದಿದ್ದರು. ಆದರೆ ಅವರ ವೈಯಕ್ತಿಕ ಸ್ಕೋರ್ 74 ಅಗಿದ್ದಾಗ, ರನ್ ಕದಿಯುವ ಭರದಲ್ಲಿ ಉಪನಾಯಕ ಅಜಿಂಕ್ಯಾ ರಹಾನೆ ಅವರೊಂದಿಗೆ ನಡೆದ ಗಲಿಬಿಲಿಯಲ್ಲಿ ರನೌಟ್ ಆದರು.
ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ತನ್ನ ಕ್ರಿಕೆಟ್ ಇತಿಹಾಸದ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದಾಗ ಕೊಹ್ಲಿಯ ಕಾಣಿಕೆ ಕೇವಲ 4 ರನ್ ಆಗಿತ್ತು. ಪಿತೃತ್ವದ ರಜೆ ಮೇಲೆ ಭಾರತಕ್ಕೆ ಹಿಂತಿರುಗಿದ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಆರಂಭವಾದ ಟೆಸ್ಟ್ ಸರಣಿಗೆ ವಾಪಸ್ಸಾದರು. ಎರಡು ಟೆಸ್ಟ್ಗಳ ನಾಲ್ಕು ಇನ್ನಿಂಗ್ಸ್ಗಳಲ್ಲಿ ಅವರು ಎರಡು ಅರ್ಧ ಶತಕಗಳನ್ನು ದಾಖಲಿಸಿದ್ದಾರೆ. ಎರಡೂ ಫಿಫ್ಟಿಗಳು ಪಂದ್ಯಗಳ ಎರಡನೇ ಇನ್ನಿಂಗ್ಸ್ನಲ್ಲಿ ಬಾರಿಸಿರುವುದು ವಿಶೇಷ.
ಕೊಹ್ಲಿಯ ಕಟ್ಟಾ ಅಭಿಮಾನಿಗಳಿಗೆ ಇದು ಗೊತ್ತಿರಬಹುದು, ಟೆಸ್ಟ್ ಕರೀಯರ್ ಆರಂಭದ ದಿನಗಳಲ್ಲಿ ಒಮ್ಮೆ ಕೊಹ್ಲಿ ಸತತವಾಗಿ 13 ಇನ್ನಿಂಗ್ಸ್ಗಳಲ್ಲಿ ಶತಕ ದಾಖಲಿಸಲು ವಿಫಲರಾಗಿದ್ದರು. ಆಮೇಲೆ, 2015 ರಲ್ಲಿ ಅವರ 11 ಇನ್ನಿಂಗ್ಸ್ಗಳಲ್ಲಿ ಶತಕ ಬಾರಿಸಿರಲಿಲ್ಲ. ಕ್ರಿಕೆಟ್ ಪರಿಣಿತರು ಹೇಳುವ ಹಾಗೆ, ಕೊಹ್ಲಿ ಕರೀಯರ್ನ ಉಲ್ಲೇಖನೀಯ ಅಂಶವೆಂದರೆ ಅರ್ಧ ಶತಕಗಳನ್ನು ಶತಕಗಳಲ್ಲಿ ಪರಿವರ್ತಿಸುವ ದರ. ಹಾಗಾಗೇ ಅವರು ಶತಕಗಳನ್ನು ದಾಖಲಿಸುವ ಸಾಧನೆಯಲ್ಲಿ ಸಚಿನ್ ನಂತರದ ಸ್ಥಾನದಲ್ಲಿದ್ದಾರೆ. ಮಾಸ್ಟರ್ ಬ್ಲಾಸ್ಟರ್ 100 ಅಂತರರಾಷ್ಟ್ರೀಯ ಶತಕಗಳೊಂದಿಗೆ ರಿಟೈರಾದರೆ, ಕೊಹ್ಲಿ ಇದುವರೆಗೆ 70 ಸೆಂಚುರಿಗಳನ್ನು ಬಾರಿಸಿದ್ದಾರೆ.
ಆದರೆ, 2019ರಿಂದ ಕೊಹ್ಲಿಯವರ ಪರಿವರ್ತನಾ ಪ್ರಮಾಣ ತಗ್ಗಿದ್ದು ಅವರ ಟೆಸ್ಟ್ ಕ್ರಿಕೆಟ್ ಸರಾಸರಿ ಸಹ ಇಳಿದಿದೆ. ಭಾರತದ ಕ್ರಿಕೆಟ್ ಪ್ರೇಮಿಗಳು ಕೊಹ್ಲಿ ಶತಕ ಬಾರಿಸುವುದನ್ನು ಮುಂದುವರಿಸಲಿ ಅಂತ ಕಾಯುತ್ತಿದ್ದಾರೆ. ಭಾರತ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯಶಿಪ್ (ಡಬ್ಲ್ಯುಟಿಸಿ) ಫೈನಲ್ಗೆ ಅರ್ಹತೆ ಗಿಟ್ಟಿಸಬೇಕಾದರೆ ಇಂಗ್ಲೆಂಡ್ ಅನ್ನು ಕನಿಷ್ಠ 2-1 ಅಂತರದಿಂದ ಸೋಲಿಸಬೇಕು. ಅದು ಸಾಧ್ಯವಾಗಬೇಕಾದರೆ ಕೊಹ್ಲಿಯ ಬ್ಯಾಟ್ನಿಂದ ಶತಕಗಳು ಸಿಡಿಯಬೇಕು. ಇಂಗ್ಲೆಂಡ್ ವಿರುದ್ಧ ಮೂರು ಮತ್ತು ನಾಲ್ಕನೇ ಟೆಸ್ಗಳು ಅಹಮದಾದಿನಲ್ಲಿ ನಡೆಯಲಿವೆ.
ಡಬ್ಲ್ಯುಟಿಸಿ ಫೈನಲ್ಗೆ ನ್ಯೂಜಿಲೆಂಡ್ ಈಗಾಗಲೇ ಅರ್ಹತೆ ಗಳಿಸಿದ್ದು, ಈ ಪಂದ್ಯ ಲಾರ್ಡ್ಸ್ನಲ್ಲಿ ಇದೇ ಜೂನ್ ತಿಂಗಳಲ್ಲಿ ನಡೆಯಲಿದೆ.
ಇದನ್ನೂ ಓದಿ: India vs England Test Series: ತಂಡಕ್ಕೆ ಮರಳಿದ ಉಮೇಶ ಯಾದವ್, ಶಾರ್ದುಲ್ ಠಾಕೂರ್ಗೆ ಕೊಕ್
Published On - 7:03 pm, Mon, 22 February 21