India vs England: ರಾಹುಲ್ ಮೇಲೆ ವಿರಾಟ್ ನಂಬಿಕೆ! ನಿರ್ಣಾಯಕ ಪಂದ್ಯಕ್ಕಾಗಿ ಟೀಂ ಇಂಡಿಯಾದಲ್ಲಾಗುತ್ತಾ ಬದಲಾವಣೆ?
ರಾಹುಲ್ ಪ್ಲೇಯಿಂಗ್ ಹನ್ನೊಂದರಲ್ಲಿ ಇದ್ದರೆ, ಇಶಾನ್ ಕಿಶನ್‌ಗೆ ಅವಕಾಶವಿಲ್ಲ. ಏಕೆಂದರೆ, ಕಳೆದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ಸೂರ್ಯಕುಮಾರ್ ಯಾದವ್ ಕೂಡ ತಮ್ಮ ಅದ್ಭುತ ಆಟದಿಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಅಹಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ 20 ಸರಣಿಯು ಕೊನೆಯ ಹಂತದಲ್ಲಿದೆ. ಆದರೆ, ಸರಣಿಯನ್ನು ಯಾರು ಗೆಲ್ಲುತ್ತಾರೆ ಎಂಬ ನಿರ್ಧಾರ ಇನ್ನೂ ಬಂದಿಲ್ಲ. ಇಂದು ನಡೆಯಲಿರುವ ಸರಣಿಯ ಕೊನೆಯ ಪಂದ್ಯದಲ್ಲಿ ಇದು ನಿರ್ಧಾರವಾಗಲಿದೆ. ಇಂದು, ಭಾರತ ಮತ್ತು ಇಂಗ್ಲೆಂಡ್ ತಂಡಗಳು ಅಹಮದಾಬಾದ್ ನರೇಂದ್ರ ಮೋದಿ ಮೈದಾನದಲ್ಲಿ ಅಂತಿಮ ಕದನದಲ್ಲಿ ಮುಖಾಮುಖಿಯಾಗುತ್ತಿವೆ. ಇದಕ್ಕಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ. ಎರಡು ತಂಡಗಳು ಸಹ ಸರಣಿಯಲ್ಲಿ ಸಮಬಲ ಸಾಧಿಸಿರುವುದರಿಂದ ಇಂದಿನ ಪಂದ್ಯ ಬಾರಿ ಕುತೂಹಲ ಕೆರಳಿಸಿದೆ. ಗೆದ್ದವರು ಚಾಂಪಿಯನ್ ಆಗಿ ಹೊರಹೊಮ್ಮಲ್ಲಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಐಸಿಸಿ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನಕ್ಕೇರಲಿದೆ. ಹೀಗಾಗಿ ಇಂದಿನ ಪಂದ್ಯ ಟೀಂ ಇಂಡಿಯಾ ಪಾಲಿಗೆ ತುಂಬಾ ವಿಶೇಷವಾಗಿದೆ.
ತಂಡದಲ್ಲಿ ಬದಲಾವಣೆಯಾಗುತ್ತಾ? ನಾಯಕ ವಿರಾಟ್ ಸರಣಿಯ ನಿರ್ಣಾಯಕ ಪಂದ್ಯಕ್ಕೂ ಮುನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ಸೂಚನೆಗಳಿಲ್ಲ. ಇದರರ್ಥ ಕೊಹ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟಿ 20 ಯನ್ನು ರೋಮಾಂಚಕ ರೀತಿಯಲ್ಲಿ ಗೆದ್ದ ಅದೇ ಗೆಲುವಿನ ತಂಡದೊಂದಿಗೆ ಮೈದಾನಕ್ಕೆ ಬರಲು ಚಿಂತಿಸಿದ್ದಾರೆ.
ರಾಹುಲ್ ಮೇಲೆ ವಿರಾಟ್ ನಂಬಿಕೆ ಓಪನಿಂಗ್‌ನಲ್ಲಿ ಕೆ.ಎಲ್.ರಾಹುಲ್ ಅವರ ಫಾರ್ಮ್ ಕೆಟ್ಟದ್ದಾಗಿದೆ. ಕಳೆದ 4 ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 15 ರನ್‌ಗಳನ್ನು ಸೇರಿಸಲು ಸಮರ್ಥರಾಗಿದ್ದಾರೆ. ಅಲ್ಲದೆ 2 ಪಂದ್ಯಗಳಲ್ಲಿ ರಾಹುಲ್ ಖಾತೆ ತೆರೆಯಲಾಗಲಿಲ್ಲ. ಇದರ ಹೊರತಾಗಿಯೂ, ವಿರಾಟ್ ರಾಹುಲ್ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಈಗ ರಾಹುಲ್ ಪ್ಲೇಯಿಂಗ್ ಹನ್ನೊಂದರಲ್ಲಿ ಇದ್ದರೆ, ಇಶಾನ್ ಕಿಶನ್‌ಗೆ ಅವಕಾಶವಿಲ್ಲ. ಏಕೆಂದರೆ, ಕಳೆದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ಸೂರ್ಯಕುಮಾರ್ ಯಾದವ್ ಕೂಡ ತಮ್ಮ ಅದ್ಭುತ ಆಟದಿಂದಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಅವರೊಂದಿಗೆ ರಾಹುಲ್ ಬ್ಯಾಟಿಂಗ್ ಆರಂಭಿಸಲಿದ್ದಾರೆ. ಮಧ್ಯದಲ್ಲಿ ಇಶಾನ್ ಬದಲಿಗೆ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮಾಡಲಿದ್ದಾರೆ.
ವೇಗದ ಬೌಲಿಂಗ್ ಆಯ್ಕೆಯಲ್ಲಿ ಬದಲಾವಣೆ ಇಲ್ಲ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡುವುದು ತೀರ ವಿರಳವಾಗಿದೆ. ರಾಹುಲ್ ಚಹರ್ ಬೌಲಿಂಗ್ನಲ್ಲಿ ಕಮಾಲ್ ಮಾಡಿದ್ದಾರೆ. ಹಾಗಾಗಿ ವಿರಾಟ್ ಅಂತಿಮ ಪಂದ್ಯದಲ್ಲಿ ಅವರನ್ನು ಆಡಿಸುವುದು ಖಚಿತ. ರಾಹುಲ್ 4ನೇ ಟಿ 20 ಯಲ್ಲಿ ಸಿಕ್ಕ ಅವಕಾಶಗಳನ್ನೂ ಉತ್ತಮವಾಗಿ ಬಳಸಿಕೊಂಡಿದ್ದಾರೆ. ಇದಲ್ಲದೆ, ವೇಗದ ಬೌಲಿಂಗ್ ಆಯ್ಕೆಯಲ್ಲಿ ಬದಲಾವಣೆ ಇಲ್ಲ. ಏಕೆಂದರೆ, ಶಾರ್ದುಲ್ ಠಾಕೂರ್ ದುಬಾರಿಯಾಗಿದ್ದರೂ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷವಾಗಿ ಡೆತ್ ಓವರ್‌ಗಳಲ್ಲಿ.
ಟೀಮ್ ಇಂಡಿಯಾದ ಸಂಭಾವ್ಯ ಆಡುವ ಇಲೆವೆನ್ ಒಟ್ಟಾರೆಯಾಗಿ, 5 ನೇ ಟಿ 20 ಅಥವಾ ಸರಣಿಯ ನಿರ್ಣಾಯಕ ಯುದ್ಧದಲ್ಲಿ, ಟೀಮ್ ಇಂಡಿಯಾದ ಆಡುವ ಇಲೆವೆನ್ ನಾಲ್ಕನೇ ಟಿ20 ಯಲ್ಲಿದಂತೆಯೇ ಕಾಣುತ್ತದೆ.
ಕೆ.ಎಲ್. ರಾಹುಲ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ರಾಹುಲ್ ಚಹರ್, ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್