Asian Champions Trophy 2023: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿದ ಭಾರತ
India vs Malaysia: ದ್ವಿತಿಯಾರ್ಧದ ಆರಂಭದಲ್ಲಿ ಮಲೇಷ್ಯಾ ತಂಡ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರೆ ಭಾರತೀಯ ಆಟಗಾರರು ಆಕ್ರಮಣಕಾರಿ ಆಟದೊಂದಿಗೆ ಮುನ್ನುಗ್ಗಿದರು. ಪರಿಣಾಮ 45ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಹರ್ಮನ್‌ಪ್ರೀತ್ ಸಿಂಗ್ ಗೋಲಾಗಿಸಿದರು. ಇದರ ಬೆನ್ನಲ್ಲೇ ಲಾಂಗ್ ಪಾಸ್ ಮೂಲಕ ಸಿಕ್ಕ ಚೆಂಡನ್ನು ಅದ್ಭುತವಾಗಿ ಕೊಂಡೊಯ್ದ ಗುರ್ಜಂತ್ ಸಿಂಗ್ ಮಲೇಷ್ಯಾ ಗೋಲ್ ಕೀಪರ್ನನ್ನು ವಂಚಿಸಿ ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾದರು.
Asian Champions Trophy 2023: ಚೆನ್ನೈನ ಮೇಯರ್ ರಾಧಾಕೃಷ್ಣನ್ ಸ್ಟೇಡಿಯಂನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಆರಂಭದಿಂದಲೇ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಮೊದಲ ಬಾರಿಸಿದ್ದು ಭಾರತ ತಂಡ ಎಂಬುದು ವಿಶೇಷ. ಆದರೆ ಮೊದಲಾರ್ಧದಲ್ಲಿ ಈ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿತ್ತು. ಇದಾಗ್ಯೂ ದ್ವಿತಿಯಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿ ಟೀಮ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
ಈ ಪಂದ್ಯದ 9ನೇ ನಿಮಿಷದಲ್ಲಿ ಡ್ರ್ಯಾಗ್ ಫ್ಲಿಕ್ ಮೂಲಕ ಹರ್ಮನ್‌ಪ್ರೀತ್ ಚೆಂಡನ್ನು ಜುಗರಾಜ್ ಸಿಂಗ್ಗೆ ನೀಡಿದರು. ಈ ಅತ್ಯುತ್ತಮ ಪಾಸ್ ಅನ್ನು ಅದ್ಭುತವಾಗಿ ಡ್ರ್ಯಾಗ್ ಫ್ಲಿಕ್ ಮಾಡಿದ ಜುಗರಾಜ್ ಸಿಂಗ್ ಚೆಂಡನ್ನು ಗೋಲು ಬಲೆಯೊಳಗೆ ತಲುಪಿಸಿದರು.
ಆರಂಭದಲ್ಲೇ 1-0 ಮುನ್ನಡೆ ಪಡೆದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದ್ದ ಟೀಮ್ ಇಂಡಿಯಾಗೆ ಆ ಬಳಿಕ ಮಲೇಷ್ಯಾ ತಂಡದಿಂದ ಕಠಿಣ ಪೈಪೋಟಿ ಎದುರಾಯಿತು. ಅಲ್ಲದೆ 14ನೇ ನಿಮಿಷದಲ್ಲಿ ಅಜುವಾನ್ ಹಸನ್ ನೀಡಿದ ಪಾಸ್ ಅನ್ನು ಅಬು ಕಮಾಲ್ ಅಜ್ರೈ ಗೋಲಾಗಿಸಿ ಗೋಲುಗಳ ಅಂತರವನ್ನು ಸಮಬಲಗೊಳಿಸಿದರು.
ಸಮಬಲ ಸಾಧಿಸುತ್ತಿದ್ದಂತೆ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಮಲೇಷ್ಯಾ ಮುನ್ಪಡೆ ಆಟಗಾರರು ಭಾರತ ತಂಡದ ಗೋಲಿನತ್ತ ಸತತ ದಾಳಿ ನಡೆಸಿದರು. ಅಲ್ಲದೆ ದ್ವಿತೀಯ ಸುತ್ತಿನಲ್ಲಿ ಗೋಲಿ ಶ್ರೀಜೇಶ್ರನ್ನು ವಂಚಿಸುವಲ್ಲಿ ಯಶಸ್ವಿಯಾದ ರಾಝೀ ರಹೀಮ್ ಮಲೇಷ್ಯಾ ತಂಡಕ್ಕೆ 2ನೇ ಯಶಸ್ಸು ತಂದುಕೊಟ್ಟರು.
ಎರಡನೇ ಗೋಲು ಬಾರಿಸಿ ಹತ್ತು ನಿಮಿಷ ಕಳೆಯುವುದರೊಂದಿಗೆ ಅಮೀನುದ್ದೀನ್ ಮುಹಮ್ಮದ್ ಮತ್ತೊಂದು ಗೋಲು ಸಿಡಿಸಿದರು. ಅಲ್ಲದೆ ಮೊದಲಾರ್ಧದಲ್ಲಿ 1-3 ಅಂತರದೊಂದಿಗೆ ಮಲೇಷ್ಯಾ ಮುನ್ನಡೆ ಸಾಧಿಸಿತು.
ದ್ವಿತಿಯಾರ್ಧದ ಆರಂಭದಲ್ಲಿ ಮಲೇಷ್ಯಾ ತಂಡ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರೆ ಭಾರತೀಯ ಆಟಗಾರರು ಆಕ್ರಮಣಕಾರಿ ಆಟದೊಂದಿಗೆ ಮುನ್ನುಗ್ಗಿದರು. ಪರಿಣಾಮ 45ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಹರ್ಮನ್‌ಪ್ರೀತ್ ಸಿಂಗ್ ಗೋಲಾಗಿಸಿದರು.
ಇದನ್ನೂ ಓದಿ: ಟೀಮ್ ಇಂಡಿಯಾ ಪಾಲಿಗೆ ಶ್ರೇಯಸ್ ಅಯ್ಯರ್ ಅನಿವಾರ್ಯ..!
ಇದರ ಬೆನ್ನಲ್ಲೇ ಲಾಂಗ್ ಪಾಸ್ ಮೂಲಕ ಸಿಕ್ಕ ಚೆಂಡನ್ನು ಅದ್ಭುತವಾಗಿ ಕೊಂಡೊಯ್ದ ಗುರ್ಜಂತ್ ಸಿಂಗ್ ಮಲೇಷ್ಯಾ ಗೋಲ್ ಕೀಪರ್ನನ್ನು ವಂಚಿಸಿ ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಉಭಯ ತಂಡಗಳ ಗೋಲು 3-3 ಸಮಗೊಂಡಿತು. ಇನ್ನು 56ನೇ ನಿಮಿಷದಲ್ಲಿ ಸುಖ್ಜೀತ್ ನೀಡಿದ ಉತ್ತಮ ಪಾಸ್ ಅನ್ನು ಆಕಾಶದೀಪ್‌ಗೆ ಶಾಟ್ ಮೂಲಕ ಗೋಲು ಬಲೆಯೊಳಗೆ ತಲುಪಿಸಿದರು.
ಈ ಮೂಲಕ ಮಲೇಷ್ಯಾ ತಂಡವನ್ನು 4-3 ಅಂತರದಿಂದ ಬಗ್ಗು ಬಡಿದು ಟೀಮ್ ಇಂಡಿಯಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
Published On - 10:41 pm, Sat, 12 August 23