SAFF Championship 2023: ಟೀಮ್ ಇಂಡಿಯಾ ಚಾಂಪಿಯನ್ಸ್
SAFF Championship 2023: ಭಾರತ ತಂಡವು 1993, 1997, 1999, 2005, 2009, 2011, 2015, 2021 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಬಲಿಷ್ಠ ಕುವೈತ್ ತಂಡಕ್ಕೆ ಸೋಲುಣಿಸಿ 9ನೇ ಬಾರಿ ಕಿರೀಟ ಮುಡಿಗೇರಿಸಿಕೊಂಡಿದೆ.

SAFF Championship 2023: ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಸೌತ್ ಏಷ್ಯಾನ್ ಫುಟ್ಬಾಲ್ ಫೆಡರೇಷನ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿ ಕುವೈತ್ (Kuwait) ತಂಡವನ್ನು ಮಣಿಸಿ ಟೀಮ್ ಇಂಡಿಯಾ (India) ಚಾಂಪಿಯನ್ ಪಟ್ಟ ಅಲಂಕರಿಸಿದೆ. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದ 14ನೇ ನಿಮಿಷದಲ್ಲೇ ಗೋಲು ದಾಖಲಿಸಿ ಶಬೀಬ್ ಅಲಿ ಖಿಲ್ದಿ ಕುವೈತ್ ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟಿದ್ದರು. ಆದರೆ ದಿಟ್ಟ ಹೋರಾಟ ಪ್ರದರ್ಶಿಸಿದ ಭಾರತೀಯ ಆಟಗಾರರು ಎದುರಾಳಿ ತಂಡದ ಗೋಲು ಪೋಸ್ಟ್ನತ್ತ ಸತತ ದಾಳಿ ನಡೆಸಿದರು. ಪರಿಣಾಮ 38ನೇ ನಿಮಿಷದಲ್ಲಿ ಚಾಂಗ್ಟೆ ಬಾರಿಸಿದ ಚೆಂಡು ಗೋಲು ಕೀಪರ್ ಅನ್ನು ವಂಚಿಸಿ ಗುರಿ ಮುಟ್ಟಿತು. ಇದರೊಂದಿಗೆ ಮೊದಲಾರ್ಧ 1-1 ಅಂತರದಿಂದ ಕೊನೆಗೊಂಡಿತು.
ದ್ವಿತೀಯಾರ್ಧದಲ್ಲೂ ಉಭಯ ತಂಡಗಳಿಂದ ಆಕ್ರಮಣಕಾರಿ ಆಟ ಮೂಡಿಬಂದರೂ ಗೋಲು ದಾಖಲಿಸುವಲ್ಲಿ ಎರಡೂ ತಂಡಗಳು ಯಶಸ್ವಿಯಾಗಿರಲಿಲ್ಲ. ಇನ್ನು ಹೆಚ್ಚುವರಿ ಸಮಯವಕಾಶ ನೀಡಲಾದರೂ ಗೋಲು ಬಾರಿಸುವಲ್ಲಿ ವಿಫಲರಾದರು. ಹೀಗಾಗಿ ಫಲಿತಾಂಶ ನಿರ್ಧಾರಕ್ಕಾಗಿ ಪೆನಾಲ್ಟಿ ಶೂಟೌಟ್ನ ಮೊರೆ ಹೋಗಬೇಕಾಯಿತು.
ಪೆನಾಲ್ಟಿ ಶೂಟೌಟ್:
- ಮೊದಲ ಅವಕಾಶ ಪಡೆದ ಟೀಮ್ ಇಂಡಿಯಾ ಪರ ನಾಯಕ ಸುನಿಲ್ ಛೆಟ್ರಿ ಚೆಂಡನ್ನು ಗುರಿ ಮುಟ್ಟಿಸಿ ಮೊದಲ ಗೋಲು ದಾಖಲಿಸಿದರು.
- ಅತ್ತ ಕುವೈತ್ ತಂಡದ ಅಬ್ದುಲ್ಲಾ ದಹಮ್ ಮೊದಲ ಅವಕಾಶದಲ್ಲಿ ವಿಫಲರಾದರು.
- 2ನೇ ಅವಕಾಶದಲ್ಲಿ ಸಂದೇಶ್ ಜಿಂಗನ್ ಗೋಲು ದಾಖಲಿಸಿ ಅಂತರವನ್ನು 2-0 ಗೆ ಹೆಚ್ಚಿಸಿದರು.
- ಆದರೆ ದ್ವಿತೀಯ ಅವಕಾಶದಲ್ಲಿ ಗೋಲು ಬಾರಿಸಿದ ಕುವೈತ್ ಆಟಗಾರ ಫವಾಜ್ ಅಂತರವನ್ನು 2-1 ಕ್ಕೆ ಇಳಿಸಿದರು.
- 3ನೇ ಅವಕಾಶದಲ್ಲಿ ಭಾರತದ ಪರ ಚಾಂಗ್ಟೆ ಗೋಲುಗಳಿಸಿದರು.
- ಅತ್ತ ಕುವೈತ್ ಆಟಗಾರ ಅಲ್ ದೇಫಿರಿ ಕೂಡ ಗೋಲು ಬಾರಿಸಿದರು.
- 4ನೇ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ಟೀಮ್ ಇಂಡಿಯಾದ ಉದಾಂತ್ ಸಿಂಗ್ ವಿಫಲರಾದರು.
- ಕುವೈತ್ ಆಟಗಾರ ಅಜೀಜ್ ನಾಜಿ ಚೆಂಡನ್ನು ಗೋಲು ಬಲೆಯೊಳಗೆ ತಲುಪಿಸಿ 3-3 ಸಮಬಲಗೊಳಿಸಿದರು.
- ನಿರ್ಣಾಯಕ ಅವಕಾಶದಲ್ಲಿ ಟೀಮ್ ಇಂಡಿಯಾ ಪರ ಮಹೇಶ್ ಸಿಂಗ್ ಗೋಲು ದಾಖಲಿಸಿದರು.
- ಆದರೆ ಅತ್ತ ಕುವೈತ್ ಆಟಗಾರ ಇಬ್ರಾಹಿಂ ಕೊನೆಯ ಅವಕಾಶದಲ್ಲಿ ವಿಫಲರಾದರು.
ಈ ಮೂಲಕ ಭಾರತ ತಂಡವು ಪೆನಾಲ್ಟಿ ಶೂಟೌಟ್ನಲ್ಲಿ 5-4 ಅಂತರದಿಂದ ಕುವೈತ್ ತಂಡವನ್ನು ಮಣಿಸಿ 9ನೇ ಬಾರಿ ಸೌತ್ ಏಷ್ಯನ್ ಫುಟ್ಬಾಲ್ ಚಾಂಪಿಯನ್ಶಿಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಇದಕ್ಕೂ ಮುನ್ನ ಭಾರತ ತಂಡವು 1993, 1997, 1999, 2005, 2009, 2011, 2015, 2021 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಬಲಿಷ್ಠ ಕುವೈತ್ ತಂಡಕ್ಕೆ ಸೋಲುಣಿಸಿ 9ನೇ ಬಾರಿ ಟ್ರೋಫಿಗೆ ಮುತ್ತಿಕ್ಕುವ ಮೂಲಕ ಏಷ್ಯಾದ ಫುಟ್ಬಾಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
Published On - 10:45 pm, Tue, 4 July 23
