
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕಳೆದುಕೊಂಡಿದ್ದ ಟೀಂ ಇಂಡಿಯಾ (India vs South Africa) ಇದೀಗ ಏಕದಿನ ಸರಣಿಯನ್ನು ಆಡಲು ಸಜ್ಜಾಗಿದೆ. ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ನವೆಂಬರ್ 30 ರಿಂದ ಆರಂಭವಾಗಲಿದೆ. ಮೊದಲ ಪಂದ್ಯಕ್ಕೆ ರಾಂಚಿ ಮೈದಾನ ಆತಿಥ್ಯವಹಿಸುತ್ತಿದ್ದು, ಈ ಪಂದ್ಯಕ್ಕಾಗಿ ಈಗಾಗಲೇ ಟೀಂ ಇಂಡಿಯಾ ಭರದ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ ಈ ಸರಣಿಯಲ್ಲಿ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli) ಆಡುತ್ತಿರುವುದು ಅಭಿಮಾನಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ. ಇವರಿಬ್ಬರ ಜೊತೆಗೆ ಇನ್ನು ಕೆಲವು ಆಟಗಾರರ ಬಹಳ ದಿನಗಳ ಬಳಿಕ ಏಕದಿನ ತಂಡದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ತಂಡದ ಪ್ಲೇಯಿಂಗ್ ಹೇಗಿರಲಿದೆ ಎಂಬುದು ಕುತೂಹಲ ಕೆರಳಿಸಿದೆ. ಇದೆಲ್ಲದರ ನಡುವೆ ಪಂದ್ಯಕ್ಕೆ ಒಂದು ದಿನ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡದ ನಾಯಕ ಕೆಎಲ್ ರಾಹುಲ್ ಪ್ಲೇಯಿಂಗ್ 11 ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನವೆಂಬರ್ 30 ರ ಭಾನುವಾರದಂದು ರಾಂಚಿಯಲ್ಲಿ ಏಕದಿನ ಸರಣಿ ಆರಂಭವಾಗುತ್ತದೆ. ನವೆಂಬರ್ 29 ರ ಶನಿವಾರ, ಪಂದ್ಯದ ಒಂದು ದಿನ ಮೊದಲು, ಕೆ.ಎಲ್. ರಾಹುಲ್ ನಾಯಕನಾಗಿ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು ಕೆಲವು ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಮಯದಲ್ಲಿ, ರಾಹುಲ್ ಆಡುವ XI ನಲ್ಲಿ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ಸಹ ಖಚಿತಪಡಿಸಿದರು. ಸರಣಿಯ ಉದ್ದಕ್ಕೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಾಗಿ ಹೇಳಿದ ರಾಹುಲ್, ‘ನಾನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತೇನೆ’ ಎಂದಿದ್ದಾರೆ.
ಇದಾದ ಬಳಿಕ ರಿಷಭ್ ಪಂತ್ ಮತ್ತು ರುತುರಾಜ್ ಗಾಯಕ್ವಾಡ್ ಆಡುವ ಬಗ್ಗೆಯೂ ಪ್ರಶ್ನಿಸಲಾಯಿತು. ವಾಸ್ತವವಾಗಿ ಚಾಂಪಿಯನ್ಸ್ ಟ್ರೋಫಿ ನಂತರ ಪಂತ್ ತಂಡಕ್ಕೆ ಮರಳಿದರೆ, ಇತ್ತ ರುತುರಾಜ್ ಗಾಯಕ್ವಾಡ್ ಕೂಡ ಸುಮಾರು ಎರಡು ವರ್ಷಗಳ ನಂತರ ಈ ಸ್ವರೂಪದಲ್ಲಿ ಆಡಲಿದ್ದಾರೆ. ಹೀಗಾಗಿ ಇವರಿಬ್ಬರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತದೆಯೇ ಎಂಬ ಪ್ರಶ್ನೆ ಕೇಳಲಾಯಿತು. ಈ ವೇಳೆ ಪಂತ್ ಬಗ್ಗೆ ಮಾತನಾಡಿದ ರಾಹುಲ್, ‘ನಾನು ಬ್ಯಾಟ್ಸ್‌ಮನ್ ಆಗಿಯೂ ಆಡಬಹುದು, ಆದರೆ ಪಂತ್ ಅವರನ್ನು ಪ್ಲೇಯಿಂಗ್ XI ನಲ್ಲಿ ಸೇರಿಸಿದರೆ, ವಿಕೆಟ್ ಕೀಪರ್ ಆಗಿ ಆಡುತ್ತಾರೆ. ಪಂತ್ ತಂಡಕ್ಕೆ ತರುವ ಪ್ರತಿಭೆಯನ್ನು ಎಲ್ಲರೂ ನೋಡಿದ್ದಾರೆ. ಅವರು ಬ್ಯಾಟ್ಸ್‌ಮನ್ ಆಗಿ ಮಾತ್ರ ಆಡುವ ಸಾಮರ್ಥ್ಯ ಹೊಂದಿದ್ದಾರೆ, ಆದರೆ ಅವರನ್ನು ಪ್ಲೇಯಿಂಗ್ XI ನಲ್ಲಿ ಸೇರಿಸಿದರೆ, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ’ ಎಂದರು.
IND vs SA: ಕಳಪೆ ಪ್ರದರ್ಶನಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಿದ ರಿಷಭ್ ಪಂತ್
ರುತುರಾಜ್ ಗಾಯಕ್ವಾಡ್ ಅವರಿಗೆ ಅವಕಾಶ ನೀಡುವ ಬಗ್ಗೆ ಕೇಳಿದಾಗ, ರುತುರಾಜ್ ರಾಂಚಿ ಏಕದಿನ ಪಂದ್ಯದಲ್ಲಿ ಆಡುತ್ತಾರೆಯೇ ಎಂಬುದನ್ನು ರಾಹುಲ್ ಖಚಿತಪಡಿಸಲಿಲ್ಲ. ಆದರೆ ಈ ಸರಣಿಯಲ್ಲಿ ರುತುರಾಜ್ಗೆ ಖಂಡಿತವಾಗಿಯೂ ಅವಕಾಶ ಸಿಗುತ್ತದೆ ಎಂದು ಭರವಸೆ ನೀಡಿದರು. ‘ರುತುರಾಜ್ ಗಾಯಕ್ವಾಡ್ ಒಬ್ಬ ಅದ್ಭುತ ಆಟಗಾರ. ಅವರು ಪಡೆದ ಕೆಲವೇ ಕೆಲವು ಅವಕಾಶಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಸರಣಿಯಲ್ಲಿ ಅವರಿಗೆ ಅವಕಾಶ ನೀಡಲಾಗುವುದು’ ಎಂದು ರಾಹುಲ್ ಹೇಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:29 pm, Sat, 29 November 25