India vs Australia Test Series | 5 ವಿಕೆಟ್​ ಕಬಳಿಸಿದ ನಂತರ ಬೌಲರ್​ಗಳು ಮತ್ತಷ್ಟು ಶ್ರಮವಹಿಸಬೇಕಿತ್ತು: ಗಾವಸ್ಕರ್

ಟೆಸ್ಟ್​ ಕ್ರಿಕೆಟ್​ಗೆ ಇಂದು ಪಾದಾರ್ಪಣೆ ಮಾಡಿದ ಟಿ.ನಟರಾಜನ್ ದಿನದಾಟದ ಕೊನೆಯ ಸೆಷನ್​ನಲ್ಲಿ ಶತಕ ಬಾರಿಸಿದ ಮಾರ್ನಸ್ ಲಬುಶೇನ್ ಮತ್ತು ಮ್ಯಾಥ್ಯೂ ವೇಡ್ ಅವರನ್ನು ಔಟ್ ಮಾಡಿ ಭಾರತಕ್ಕೆ ಮೇಲುಗೈ ಒದಗಿಸಿದ್ದರು, ಆಗಲೇ ಮತ್ತೆರಡು ವಿಕೆಟ್ ಕಬಳಿಸಿದ್ದರೆ ದಿನದಾಟದ ಗೌರವ ಭಾರತಕ್ಕೆ ಸಿಗುತ್ತಿತ್ತು ಎಂದು ಗಾವಸ್ಕರ್ ಹೇಳಿದ್ದಾರೆ.

India vs Australia Test Series | 5 ವಿಕೆಟ್​ ಕಬಳಿಸಿದ ನಂತರ ಬೌಲರ್​ಗಳು ಮತ್ತಷ್ಟು ಶ್ರಮವಹಿಸಬೇಕಿತ್ತು: ಗಾವಸ್ಕರ್
ಆಸ್ಸೀಗಳ ವಿಕೆಟ್ ಪತನವನ್ನು ಸಂಭ್ರಮಿಸುತ್ತಿರುವ ಟೀಮ್ ಇಂಡಿಯಾ

Updated on: Jan 15, 2021 | 9:22 PM

ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಇಂದು ಬ್ರಿಸ್ಬೇನ್​ನಲ್ಲಿ ಆರಂಭವಾದ ನಾಲ್ಕನೇ ಮತ್ತು ಅಂತಿಮ ಟೆಸ್ಟ್​ನಲ್ಲಿ ಭಾರತದ ಅನನುಭವಿ ಬೌಲಿಂಗ್ ಪಡೆ ಅತಿಥೇಯರ 5 ವಿಕೆಟ್​ ಉರುಳಿಸಿರುವುದನ್ನು ಶ್ಲಾಘಿಸಿರುವ ಭಾರತದ ಮಾಜಿ ಆರಂಭ ಆಟಗಾರ ಸುನಿಲ್ ಗಾವಸ್ಕರ್, ಪರಿಸ್ಥಿಯ ಸಂಪೂರ್ಣ ಲಾಭ ಪಡೆಯಲು ಅವರು ವಿಫಲರಾಗಿದ್ದಕ್ಕೆ ನಿರಾಸೆ ವ್ಯಕ್ತಪಡಿಸಿದರು.

‘ದಶಕಗಳಿಂದ ಅಂದರೆ 1932ರಿಂದ ಇದು ಪುರಾವರ್ತನೆಯಾಗುತ್ತಿದೆ. ಭಾರತದ ಬೌಲರ್​ಗಳು ಮೊದಲ 5 ವಿಕೆಟ್​ಗಳನ್ನು ಬೇಗ ಪಡೆಯುತ್ತಾರೆ. ಅದರೆ, ಉಳಿದರ್ಧ ಟೀಮನ್ನು ಔಟ್ ಮಾಡಲು ಹೆಣಗುತ್ತಾರೆ’ ಎಂದು ಸೋನಿ ಸ್ಪೋರ್ಟ್ಸ್ ನೆಟ್​ವರ್ಕ್ ನಡೆಸುವ ಎಕ್ಸ್​ಟ್ರಾ ಇನ್ನಿಂಗ್ಸ್ ಕಾರ್ಯಕ್ರಮದಲ್ಲಿ ಮೊದಲ ದಿನದಾಟದ ನಂತರ ಭಾಗವಹಿಸಿದ ಲೆಜೆಂಡರಿ ಓಪನರ್ ಹೇಳಿದರು.

ಟೆಸ್ಟ್​ ಕ್ರಿಕೆಟ್​ಗೆ ಇಂದು ಪಾದಾರ್ಪಣೆ ಮಾಡಿದ ವೇಗದ ಬೌಲರ್ ಟಿ.ನಟರಾಜನ್ ದಿನದಾಟದ ಕೊನೆಯ ಸೆಷನ್​ನಲ್ಲಿ ಶತಕ ಬಾರಿಸಿದ ಮಾರ್ನಸ್ ಲಬುಶೇನ್ ಮತ್ತು ಮ್ಯಾಥ್ಯೂ ವೇಡ್ ಅವರನ್ನು ಔಟ್ ಮಾಡಿ ಭಾರತಕ್ಕೆ ಮೇಲುಗೈ ಒದಗಿಸಿದರು. ಆಗ ಅತಿಥೇಯರ ಸ್ಕೋರ್ 213/5 ಆಗಿತ್ತು. ಕ್ರೀಸಿಗೆ ಆಗಷ್ಟೇ ಬಂದಿದ್ದ ಕೆಮೆರಾನ್ ಗ್ರೀನ್ ಮತ್ತು ನಾಯಕ ಟಿಮ್ ಪೈನ್ ಅವರನ್ನು ಬೇಗ ಪೆವಿಲಿಯನ್​ಗೆ ಕಳಿಸಲು ಭಾರತೀಯ ಬೌಲರ್​ಗಳು ಮತ್ತಷ್ಟು ಶ್ರಮಿಸಬೇಕಿತ್ತೆಂದು ಗಾವಸ್ಕರ್ ಹೇಳಿದರು.

ಸುನಿಲ್ ಗಾವಸ್ಕರ್

‘ಟೀ ವಿರಾಮದ ನಂತರ ಎರಡು ವಿಕೆಟ್ ಪಡೆದ ಭಾರತ, ಗ್ರೀನ್ ಮತ್ತು ಪೈನ್ ಅವರ ಮೇಲೆ ಒತ್ತಡ ಹೇರಿ ಔಟ್ ಮಾಡಿದ್ದರೆ ಮೊದಲ ದಿನದಾಟದ ಖಂಡಿತವಾಗಿಯೂ ಭಾರತಕ್ಕೆ ದಕ್ಕುತ್ತಿತ್ತು. ಇಂದೇ ಮತ್ತೆರಡು ವಿಕೆಟ್​ಗಳನ್ನು ಭಾರತ ಉರುಳಿಸಿದ್ದರೆ, ಆಸ್ಟ್ರೇಲಿಯಾವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಬಹುದಿತ್ತು, ಅದರೆ ಬೌಲರ್​ಗಳು ಅವರಿಬ್ಬರ ಜೊತೆಯಾಟವನ್ನು ಬೆಳೆಯಲು ಬಿಟ್ಟರು’ ಎಂದು ಗಾವಸ್ಕರ್ ಹೇಳಿದರು.

ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮ, ಮೊಹಮ್ಮದ್ ಸೈನಿ, ಉಮೇಶ್ ಯಾದವ್, ರವಿಚಂದ್ರನ್ ಅಶ್ವಿನ್, ಮತ್ತು ರವೀಂದ್ರ ಜಡೇಜಾ ಮೊದಲಾದ ಪ್ರಮುಖ ಬೌಲರ್​ಗಳ ಅನುಪಸ್ಥಿಯಲ್ಲಿ ಹೊಸ ಬೌಲರ್​ಗಳು ನಡೆಸಿದ ದಾಳಿಯನ್ನು ಗಾವಸ್ಕರ್ ಕೊಂಡಾಡಿದರು.

ಶಾರ್ದುಲ್ ಠಾಕೂರ್​ಗೆ ಟೆಸ್ಟ್​ಗಳಲ್ಲಿ ಮೊದಲ ವಿಕೆಟ್

‘ನಿಸ್ಸಂದೇಹವಾಗಿ ಭಾರತದ ಬೌಲರ್​ಗಳು ಅತ್ಯುತ್ತಮ ದಾಳಿ ನಡೆಸಿದರು. ಅವರೆಲ್ಲ ಟೆಸ್ಟ್​ ಕ್ರಿಕೆಟ್​ಗೆ ತೀರ ಹೊಸಬರು. ಶಾರ್ದುಲ್ ಠಾಕೂರ್ ತಾನು ಪಾದಾರ್ಪಣೆ ಮಾಡಿದ ಟೆಸ್ಟ್​ನಲ್ಲಿ ಒಂದು ಡಜನ್ ಎಸೆತಗಳನ್ನು ಸಹ ಬೌಲ್ ಮಾಡಿರಲಿಲ್ಲ. ನವದೀಪ್​ ಸೈನಿಗೆ ಇದು ಎರಡನೇ ಪಂದ್ಯವಾದರೆ, ಸಿರಾಜ್​ಗೆ ಮೂರನೆಯದ್ದು. ವಾಷಿಂಗ್ಟನ್ ಸುಂದರ್ ಮತ್ತು ನಟರಾಜನ್​ಗೆ ಇದು ಮೊಟ್ಟಮೊದಲ ಟೆಸ್ಟ್. ಇವರಲ್ಲ ಹೊಸಬರಾದರೂ ಬ್ರಿಸ್ಬೇನ್​ನಲ್ಲಿ ಪ್ರದರ್ಶಿಸಿದ ಸಂಕಲ್ಪ ಮತ್ತು ಬದ್ಧತೆ ಮೆಚ್ಚುವಂಥದ್ದು’ ಎಂದು ಗಾವಸ್ಕರ್ ಹೇಳಿದರು.

‘1932ರ ಸರಣಿಯಲ್ಲಿ ಭಾರತದ ಬೌಲರ್​​ಗಳು 80ರನ್​ಗಳಾಗುವಷ್ಟರಲ್ಲಿ ಇಂಗ್ಲೆಂಡಿನ 5 ವಿಕೆಟ್​ ಕಿತ್ತಿದ್ದರು, ಅದರೆ ಉಳಿದ ಐವರು 180ರನ್​ಗಳನ್ನು ಕಲೆಹಾಕಿ ಪಂದ್ಯವನ್ನು ತಮ್ಮೆಡೆ ಸೆಳೆದುಕೊಂಡರು. ಆ ಪರಂಪರೆ ಹಾಗೆಯೇ ಉಳಿದುಕೊಂಡಿದೆ. 1932ರ ಸ್ಥಿತಿ ಇಲ್ಲೂ ಮರುಕಳಿಸದೆ ಭಾರತೀಯರು ಅತಿಥೇಯರನ್ನು 350 ರನ್​ಗಳಿಗೆ ಸೀಮಿತಗೊಳಿಸುವರೆಂಬ ನಿರೀಕ್ಷೆ ಇಟ್ಟುಕೊಂಡಿದ್ದೇನೆ’ ಎಂದು ಗಾವಸ್ಕರ್ ಹೇಳಿದರು.

India vs Australia Test Series | ಚಿನ್ನಪ್ಪಂಪಟ್ಟಿಯಿಂದ ಬ್ರಿಸ್ಬೇನ್​ವರೆಗಿನ ನಟರಾಜನ್ ಏಳಿಗೆ ಱಗ್ಸ್ ಟು ರಿಚಸ್ ಕತೆಯಂತಿದೆ!

Published On - 9:08 pm, Fri, 15 January 21