Asian Games: ಟ್ರ್ಯಾಪ್​ ಶೂಟಿಂಗ್​ ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದ ಭಾರತ ತಂಡ..!

Asian Games: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ 8ನೇ ದಿನದಂದು ಭಾರತ ಪದಕಗಳ ಭರ್ಜರಿ ಬೇಟೆಯನ್ನು ಆರಂಭಿಸಿದೆ. 50 ಮೀಟರ್ ಟ್ರ್ಯಾಪ್ ಶೂಟಿಂಗ್ ಪುರುಷರ​ ವಿಭಾಗದಲ್ಲಿ ಭಾರತದ ಪೃಥ್ವಿರಾಜ್ ತೊಂಡೈಮಾನ್, ಕಿನಾನ್ ಚೆನೈ ಮತ್ತು ಜೋರವರ್ ಸಿಂಗ್ ಸಂಧು ಅವರ ತಂಡ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದುಕೊಟ್ಟಿದೆ.

Asian Games: ಟ್ರ್ಯಾಪ್​ ಶೂಟಿಂಗ್​ ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದ ಭಾರತ ತಂಡ..!
ಪೃಥ್ವಿರಾಜ್ ತೊಂಡೈಮಾನ್, ಕಿನಾನ್ ಚೆನೈ ಮತ್ತು ಜೋರವರ್ ಸಿಂಗ್ ಸಂಧು

Updated on: Oct 01, 2023 | 10:52 AM

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನ (Asian Games 2023) 8ನೇ ದಿನದಂದು ಭಾರತ ಪದಕಗಳ ಭರ್ಜರಿ ಬೇಟೆಯನ್ನು ಆರಂಭಿಸಿದೆ. ದಿನದ ಆರಂಭದಲ್ಲಿ ಪುರುಷರ 10,000 ಮೀ ಓಟದಲ್ಲಿ ಭಾರತದ ಲಾಂಗ್ ಡಿಸ್ಟೆನ್ಸ್ ಓಟಗಾರರಾದ ಕಾರ್ತಿಕ್ ಕುಮಾರ್ ಮತ್ತು ಗುಲ್ವೀರ್ ಸಿಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದು ಬೀಗಿದ್ದರೆ, ಇದೀಗ 50 ಮೀಟರ್ ಟ್ರ್ಯಾಪ್​ ಶೂಟಿಂಗ್ ಪುರುಷರ​ ವಿಭಾಗದಲ್ಲಿ (Men’s Trap Team Event) ಭಾರತದ ಪೃಥ್ವಿರಾಜ್ ತೊಂಡೈಮಾನ್, ಕಿನಾನ್ ಚೆನೈ ಮತ್ತು ಜೋರವರ್ ಸಿಂಗ್ ಸಂಧು ಅವರ ತಂಡ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದುಕೊಟ್ಟಿದೆ.

11 ಚಿನ್ನ ಸೇರಿದಂತೆ 41 ಪದಕ ಬಂದಿವೆ

ಅಂತಿಮ ಸುತ್ತಿನಲ್ಲಿ ಕಿನಾನ್ ಚೆನೈ ಪರಿಪೂರ್ಣ 25ಕ್ಕೆ 25 ಅಂಕ ಗಳಿಸಿದರೆ, ಅಂತಿಮವಾಗಿ ಈ ಮೂವರು 361 ಅಂಕ ಕಲೆಹಾಕಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಈ ವಿಭಾಗದಲ್ಲಿ ಭಾರತ ಚಿನ್ನ ಗೆದ್ದರೆ, ಕುವೈತ್ ಮತ್ತು ಚೀನಾ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದವು. ಇದುವರೆಗೆ ನಡೆದಿರುವ ಸ್ಪರ್ಧೆಯಲ್ಲಿ ಭಾರತ ಕೇವಲ ಶೂಟಿಂಗ್‌ನಲ್ಲಿಯೇ 7 ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ. ಇದುವರೆಗೆ ಭಾರತ ಒಟ್ಟಾರೆ 11 ಚಿನ್ನ ಸೇರಿದಂತೆ 41 ಪದಕಗಳನ್ನು ಗೆದ್ದಿದ್ದು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

100 ಪದಕ ಗೆಲ್ಲುವ ಗುರಿ

ಏಷ್ಯನ್ ಗೇಮ್ಸ್​ನಲ್ಲಿ ಭಾರತಕ್ಕೆ ಕೇವಲ ಶೂಟಿಂಗ್ ವಿಭಾಗ ಒಂದರಲ್ಲೇ 7 ಚಿನ್ನ, 9 ಬೆಳ್ಳಿ, 5 ಕಂಚು ಸೇರಿದಂತೆ ಒಟ್ಟು 21 ಪದಕಗಳು ಬಂದಿವೆ. ಇನ್ನಷ್ಟು ಬರುವ ನಿರೀಕ್ಷೆಗಳಿವೆ. ಈ ಬಾರಿ ಭಾರತದ ಅಥ್ಲೀಟ್‌ಗಳು ಏಷ್ಯಾಡ್‌ನಿಂದ 100 ಪದಕ ಗೆಲ್ಲುವ ಗುರಿ ಹೊಂದಿದ್ದಾರೆ. ಭಾರತೀಯರು ಸದ್ಯ 41 ಪದಕಗಳನ್ನು ಗೆದ್ದಿದ್ದಾರೆ. ಅವರು ಸಾಗುತ್ತಿರುವ ರೀತಿಯನ್ನು ನೋಡಿದರೆ ಉಳಿದ ಕ್ರೀಡಾಕೂಟಗಳು ಚಿನ್ನವನ್ನು ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ. ಇದಕ್ಕೂ ಮೊದಲು ಜಕಾರ್ತಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಅತಿ ಹೆಚ್ಚು 16 ಚಿನ್ನ ಗೆದ್ದಿತ್ತು. ಈ ಬಾರಿ ಆ ದಾಖಲೆ ಮುರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Published On - 10:39 am, Sun, 1 October 23