2 ದಿನಗಳಲ್ಲಿ 3 ಪಂದ್ಯಗಳು ಮಳೆಗಾಹುತಿ; ವಿಶ್ವಕಪ್ಗೂ ವರುಣನ ಅವಕೃಪೆ? ಹವಾಮಾನ ವರದಿ ಹೇಳುವುದೇನು?
ODI World Cup 2023: ಅಭ್ಯಾಸ ಪಂದ್ಯಗಳು ಆರಂಭವಾಗಿ ಕೇವಲ ಎರಡೇ ಎರಡು ದಿನಗಳಲ್ಲಿ ಮೂರು ಪಂದ್ಯಗಳು ಮಳೆಗಾಹುತಿಯಾಗಿವೆ. ಇದು ಟೂರ್ನಿಯ ಆರಂಭಕ್ಕೂ ಮುನ್ನ ಆತಿಥೇಯ ಭಾರತವನ್ನು ಚಿಂತೆಗೀಡು ಮಾಡಿದೆ. ವಾಸ್ತವವಾಗಿ ಈ ಹಿಂದೆ ನಡೆದ ಏಷ್ಯಾಕಪ್ಗೂ ಮಳೆ ಕಾಟ ನೀಡಿತ್ತು. ಇದರಿಂದ ಹಲವು ಪಂದ್ಯಗಳನ್ನು ರದ್ದುಗೊಳಿಸಲಾಗಿತ್ತು.
ಅಕ್ಟೋಬರ್ 5 ರಿಂದ ಆರಂಭವಾಗಿರುವ ಏಕದಿನ ವಿಶ್ವಕಪ್‌ಗಾಗಿ (ODI World Cup 2023) ವಿಶ್ವದ ಅಗ್ರ 10 ತಂಡಗಳು ಈಗಾಗಲೇ ಭಾರತಕ್ಕೆ ಕಾಲಿಟ್ಟಿವೆ. ಈಗಾಗಲೇ ಅಭ್ಯಾಸ ಪಂದ್ಯಗಳು ಆರಂಭವಾಗಿದ್ದು, ಎಲ್ಲಾ ತಂಡಗಳು ಹಂತಿಮ ಹಂತದ ಸಿದ್ದತೆಗಳನ್ನು ಪೂರ್ಣಗೊಳಿಸಿಕೊಳ್ಳುತ್ತಿವೆ. ಆದರೆ ಅಭ್ಯಾಸ ಪಂದ್ಯಗಳು ಆರಂಭವಾಗಿ ಕೇವಲ ಎರಡೇ ಎರಡು ದಿನಗಳಲ್ಲಿ ಮೂರು ಪಂದ್ಯಗಳು ಮಳೆಗಾಹುತಿಯಾಗಿವೆ (Rain). ಇದು ಟೂರ್ನಿಯ ಆರಂಭಕ್ಕೂ ಮುನ್ನ ಆತಿಥೇಯ ಭಾರತವನ್ನು ಚಿಂತೆಗೀಡು ಮಾಡಿದೆ. ವಾಸ್ತವವಾಗಿ ಈ ಹಿಂದೆ ನಡೆದ ಏಷ್ಯಾಕಪ್ಗೂ (Asia Cup 2023) ಮಳೆ ಕಾಟ ನೀಡಿತ್ತು. ಇದರಿಂದ ಹಲವು ಪಂದ್ಯಗಳನ್ನು ರದ್ದುಗೊಳಿಸಲಾಗಿತ್ತು. ಇದೀಗ ವಿಶ್ವಕಪ್ ಆರಂಭಕ್ಕೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯಗಳಿಗೆ ವರುಣನ ಅವಕೃಪೆ ಎದುರಾಗುತ್ತಿದೆ. ಹೀಗಾಗಿ ಏಷ್ಯಾಕಪ್ನಲ್ಲಿ ಆದ ಅವಾಂತರವೇ ವಿಶ್ವಕಪ್‌ನಲ್ಲೂ ಆಗುತ್ತಾ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಲಾರಂಭಿಸಿದೆ.
ಸೆಪ್ಟೆಂಬರ್ 29 ರಿಂದ ಅಭ್ಯಾಸ ಪಂದ್ಯಗಳ ಆರಂಭವಾಗಿವೆ. ಆದರೆ ಮೊದಲ ದಿನವೇ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಅಭ್ಯಾಸ ಪಂದ್ಯ ಮಳೆಯಿಂದ ರದ್ದಾಯಿತು. ಇನ್ನು ನಿನ್ನೆ ಅಂದರೆ, ಸೆಪ್ಟೆಂಬರ್ 30 ರಂದು ನಡೆಯಬೇಕಿದ್ದ ಭಾರತ-ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ-ನೆದರ್ಲ್ಯಾಂಡ್ಸ್ ನಡುವಿನ ಪಂದ್ಯಗಳು ಸಹ ಮಳೆಗಾಹುತಿಯಾಗಿವೆ. ಹೀಗಿರುವಾಗ ಇಡೀ ಟೂರ್ನಮೆಂಟ್‌ನಲ್ಲಿ ಹೀಗಾಗಬಹುದು ಎಂಬ ಭಯ ಪ್ರತಿಯೊಬ್ಬ ಅಭಿಮಾನಿಯ ಮನದಲ್ಲಿ ಮೂಡಿದೆ. ವಾಸ್ತವವಾಗಿ, ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ವೇಳಾಪಟ್ಟಿ ಪ್ರಕಟವಾದಾಗ, ಈ ಮೆಗಾ ಈವೆಂಟ್ ಮಳೆಗೆ ಸಿಲುಕಿಕೊಳ್ಳಬಹುದೆಂಬ ಭಯ ಎಲ್ಲರ ಮನದಲ್ಲಿತ್ತು. ಅದು ಈಗ ನಿಜವಾಗುತ್ತಿದೆ.
ಟೀಂ ಇಂಡಿಯಾ ಅಲ್ಲ; ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಹೆಸರಿಸಿದ ಗವಾಸ್ಕರ್
ಮಳೆಯಿಂದ ಅಭ್ಯಾಸ ಪಂದ್ಯಗಳು ರದ್ದು
ಭಾರತದಲ್ಲಿ ಆಗಸ್ಟ್-ಸೆಪ್ಟೆಂಬರ್ ನಡುವೆ ಮಾನ್ಸೂನ್ ಇರುತ್ತದೆ. ಆದರೆ ಈ ಬಾರಿ ಮಾನ್ಸೂನ್ ಭಾರತಕ್ಕೆ ತಡವಾಗಿ ಆಗಮಿಸಿತು. ಆದ್ದರಿಂದ ಅದರ ಪರಿಣಾಮವನ್ನು ಅಕ್ಟೋಬರ್-ನವೆಂಬರ್‌ನಲ್ಲಿಯೂ ಕಾಣಬಹುದು ಎಂದು ವರದಿಯಲ್ಲಿ ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ದೇಶದ ವಿವಿಧೆಡೆ ಮಳೆಯಾಗುತ್ತಿದ್ದು, ಇದರ ಪರಿಣಾಮ ವಿಶ್ವಕಪ್ ಮೇಲೂ ಕಾಣುತ್ತಿದೆ. ಗುವಾಹಟಿಯಲ್ಲಿ ಭಾರತದ ಪಂದ್ಯ ನಡೆಯದಿದ್ದರೆ, ತಿರುವನಂತಪುರಂನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ರದ್ದುಗೊಳಿಸಲಾಗಿದೆ. ಇದಕ್ಕೂ ಮೊದಲು ಭಾರತ-ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲೂ ಮಳೆ ಕಾಣಿಸಿಕೊಂಡಿತ್ತು.
ಟೂರ್ನಿಯಲ್ಲಿ ಮುಂದೆ ಏನಾಗಲಿದೆ?
ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ಗಮನಿಸಿದರೆ, ಅಕ್ಟೋಬರ್ 3 ಮತ್ತು 5 ರ ನಂತರ ದೇಶದಲ್ಲಿ ಕಡಿಮೆ ಮಳೆಯಾಗಲಿದೆ. ಅದರಲ್ಲೂ ಕೆಲವು ಸ್ಥಳಗಳಲ್ಲಿ ಮಾತ್ರ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಅಲ್ಲದೆ ಈಗಾಗಲೇ ಮುಂಗಾರು ಮುಗಿಯುವ ಹಂತಕ್ಕೆ ಬಂದಿದೆ. ಆದ್ದರಿಂದ ಕೆಲವು ಪಂದ್ಯಗಳಿಗೆ ಹೊರತುಪಡಿಸಿದರೆ ಮುಂದಿನ ದಿನಗಳಲ್ಲಿ ವಿಶ್ವಕಪ್ಗೆ ಮಳೆ ಕಾಟ ಕೊಡುವ ಸಂಭವ ತೀರ ಕಡಿಮೆ. ಆದರೆ ಮೊದಲೆರಡು ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಟ್ರೇಲರ್ ಆತಂಕವನ್ನು ಹೆಚ್ಚಿಸಿದೆ. ಹೀಗಿರುವಾಗ ಪ್ರಮುಖ ಟೂರ್ನಿಯಲ್ಲಿ ಮುಂದೇನಾಗುತ್ತದೋ ಎಂಬುದನ್ನು ಕಾದು ನೋಡಬೇಕಿದೆ.
ಮೀಸಲು ದಿನವಿಲ್ಲ
ವಾಸ್ತವವಾಗಿ, ಪ್ರಮುಖ ವಿಷಯವೆಂದರೆ ವಿಶ್ವಕಪ್‌ನಂತಹ ಪ್ರಮುಖ ಪಂದ್ಯಾವಳಿಗಳಲ್ಲಿ, ಲೀಗ್ ಪಂದ್ಯಗಳಿಗೆ ಮೀಸಲು ದಿನದ ಯಾವುದೇ ಸೌಲಭ್ಯವಿಲ್ಲ. ಮೀಸಲು ದಿನವು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮಾತ್ರ ಸೀಮಿತ. ಅಂತಹ ಪರಿಸ್ಥಿತಿಯಲ್ಲಿ, ರೌಂಡ್ ರಾಬಿನ್ ಸುತ್ತಿನಲ್ಲಿ ಮಳೆಯಿಂದ ಪಂದ್ಯ ರದ್ದಾದರೆ ತಂಡಗಳಿಗೆ ತಲಾ ಒಂದು ಅಂಕವನ್ನು ಹಂಚಲಾಗುತ್ತದೆ. ಆದರೆ ನಾಕೌಟ್ ಪಂದ್ಯಗಳಲ್ಲಿ, ಮೀಸಲು ದಿನದ ಸೌಲಭ್ಯ ಲಭ್ಯವಿದ್ದು, ಡಿಎಲ್ಎಸ್ ನಿಯಮವನ್ನು ಬಳಸಿಕೊಂಡು ಪಂದ್ಯ ವಿಜೇತರನ್ನು ನಿರ್ಧರಿಸಲಾಗುತ್ತದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ