ದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೊಚ್ಚಲ ಆವೃತ್ತಿಯ ಖೋ-ಖೋ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ಮತ್ತು ಪುರುಷರ ತಂಡಗಳಿಂದ ಪ್ರಬಲ ಆಟ ಕಂಡು ಬರುತ್ತಿದೆ. ಭಾರತದ ವನಿತೆಯರ ಖೋ-ಖೋ ತಂಡ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 175-18 ಅಂತರದ ಐತಿಹಾಸಿಕ ಜಯ ಸಾಧಿಸಿತ್ತು. ಇದೀಗ ತನ್ನ ಎರಡನೇ ಪಂದ್ಯದಲ್ಲಿ ಇರಾನ್ ವಿರುದ್ಧವೂ ಏಕಪಕ್ಷೀಯವಾಗಿ ಗೆಲುವು ದಾಖಲಿಸಿದೆ. ಸತತ 2 ಗೆಲುವಿನೊಂದಿಗೆ ಇದೀಗ ಕ್ವಾರ್ಟರ್ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಇರಾನ್ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ ಆಟವಾಡಿದ ಭಾರತ ಮಹಿಳಾ ತಂಡ ಎದುರಾಳಿ ತಂಡದ ವಿರುದ್ಧ ಇಡೀ ಪಂದ್ಯದಲ್ಲಿ ಪಾರುಪತ್ಯ ಸಾಧಿಸಿತು. ಅಂತಿಮವಾಗಿ ಪಂದ್ಯವನ್ನು ಭಾರತ ಮಹಿಳಾ ಖೋ-ಖೋ ತಂಡ 100-16 ಅಂತರದಿಂದ ಜಯ ಸಾಧಿಸಿತು. ಸತತ ಎರಡನೇ ಪಂದ್ಯದಲ್ಲೂ 100 ಅಂಕಗಳ ಗಡಿ ಮುಟ್ಟುವಲ್ಲಿ ಯಶಸ್ವಿಯಾಯಿತು. ತಂಡದ ಪರ ಅಶ್ವಿನಿ ಮತ್ತು ಮೀನು ಅದ್ಭುತ ಆಟ ಪ್ರದರ್ಶಿಸಿದರು.
ಈ ಪಂದ್ಯದಲ್ಲಿ ಟೀಂ ಇಂಡಿಯಾ ಪರ ವಜೀರ್ ನಿರ್ಮಲಾ, ಕ್ಯಾಪ್ಟನ್ ಪ್ರಿಯಾಂಕಾ ಇಂಗ್ಲೆ, ನಿರ್ಮಲಾ ಭಾಟಿ ಮತ್ತು ನಸ್ರೀನ್ ಉತ್ತಮ ಪ್ರದರ್ಶನ ನೀಡಿದ್ದು, ಈ ಮೂಲಕ ಸತತ ಎರಡನೇ ಗೆಲುವನ್ನು ಸಾಧಿಸುವಲ್ಲಿ ಯಶಸ್ವಿಯಾದರು. ಈ ಪಂದ್ಯದಲ್ಲಿ ಮೊಬಿನಾ ಪಂದ್ಯದ ಅತ್ಯುತ್ತಮ ದಾಳಿಗಾರ್ತಿಯಾಗಿ ಆಯ್ಕೆಯಾದರೆ, ಇದೇ ವೇಳೆ ಪ್ರಿಯಾಂಕಾ ಇಂಗ್ಲೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಮಹಿಳೆಯರ ಸ್ಪರ್ಧೆಯಲ್ಲಿ ಒಟ್ಟು 19 ತಂಡಗಳು ಆಡುತ್ತಿದ್ದು, ಟೀಂ ಇಂಡಿಯಾ ಈಗ ಗ್ರೂಪ್ ಹಂತದಲ್ಲಿ ತನ್ನ ಕೊನೆಯ ಪಂದ್ಯವನ್ನು ಮಲೇಷ್ಯಾ ವಿರುದ್ಧ ಆಡಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಜನವರಿ 16 ರಂದು ಸಂಜೆ 7 ಗಂಟೆಗೆ ನಡೆಯಲಿದೆ. ಸದ್ಯ ಟೀಂ ಇಂಡಿಯಾ 2 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಗುಂಪು ಹಂತದ ನಂತರ ಜನವರಿ 17ರಿಂದ ಪ್ಲೇಆಫ್ ಪಂದ್ಯಗಳು ಆರಂಭವಾಗಲಿವೆ. ಫೈನಲ್ ಪಂದ್ಯ ಜನವರಿ 19 ರಂದು ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ