ಐಪಿಎಲ್ 2021 ಆವೃತ್ತಿಯ ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ, ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಗೆಲುವು ಕಂಡಿತು. ಸೋಲಿನ ಸುಳಿಯಲ್ಲಿ ಸಿಲುಕಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿ, ಮುಂಬೈ ಇಂಡಿಯನ್ಸ್ ಗೆಲುವಿನ ನಗೆ ಬೀರಿತು. ಈ ವೇಳೆ ಮುಂಬೈ ಇಂಡಿಯನ್ಸ್ ಗೆಲುವಿನ ಜೊತೆಗೆ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದ ಮತ್ತೊಂದು ವಿಚಾರ ನಡೆಯಿತು. ರೋಹಿತ್ ಪಡೆಯ ಉತ್ತಮ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಪತ್ನಿಯ ಜೊತೆಗೆ ಸಮಯ ಕಳೆಯುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದುಮಾಡಿತು.
ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದ ಬಳಿಕ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿ ದೇವಿಶಾ ಶೆಟ್ಟಿಗೆ ಸಾಮಾಜಿಕ ಅಂತರ ಪಾಲಿಸಿಕೊಂಡು ಮುತ್ತಿಟ್ಟರು. ದೇವಿಶಾ ಗ್ಲಾಸ್ ಶೀಟ್ ಹಿಂಬಾಗದಲ್ಲಿ, ಸ್ಟಾಂಡ್ ಬಳಿ ನಿಂತಿದ್ದರು. ಪಂದ್ಯದ ಬಳಿಕ ಮೈದಾನದ ಸ್ಟಾಂಡ್ ಬಳಿ ತೆರಳಿದ ಸೂರ್ಯಕುಮಾರ್ ಯಾದವ್ ದೇವಿಶಾಗೆ ಗ್ಲಾಸ್ ಶೀಟ್ ಹೊರಭಾಗದಿಂದಲೇ ಸಿಹಿಮುತ್ತು ನೀಡಿದರು. ಈ ವಿಶೇಷ ಸಂದರ್ಭವನ್ನು ಮುಂಬೈ ಇಂಡಿಯನ್ಸ್ ಟ್ವಿಟರ್ ಖಾತೆ ಹಂಚಿಕೊಂಡಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯಾಗಿತ್ತು.
ಕೊರೊನಾ ಸಾಂಕ್ರಾಮಿಕ ಸಂಕಷ್ಟದ ನಡುವೆ ಐಪಿಎಲ್ 2021 ಸರಣಿ ನಡೆಯುತ್ತಿದ್ದು, ಆಟಗಾರರು ಬಯೋ ಬಬಲ್ ನಿಯಮಾನುಸಾರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಆಟಗಾರರು ಹಾಗೂ ಸಿಬ್ಬಂದಿ ವರ್ಗದವರು ತಮ್ಮ ಕುಟುಂಬದೊಂದಿಗೆ ಪ್ರಯಾಣ ಬೆಳೆಸಲು ಫ್ರಾಂಚೈಸಿ ಅನುವು ಮಾಡಿಕೊಟ್ಟಿದೆ.
ಭಾರತ ತಂಡದ ಮಾಜಿ ವೇಗಿ ಜಹೀರ್ ಖಾನ್ ಪತ್ನಿ ಸಾಗರಿಕಾ ಘಟ್ಗೆ ಕೂಡ ಈ ಚಿತ್ರವನ್ನು ಹಂಚಿಕೊಂಡಿದ್ದರು. ಸಾಗರಿಕಾ ಹಂಚಿಕೊಂಡಿದ್ದ ಸ್ಟೋರಿಯನ್ನು ಸೂರ್ಯಕುಮಾರ್ ಯಾದವ್ ರಿಶೇರ್ ಮಾಡಿ ಸಂಭ್ರಮಿಸಿದ್ದರು. ಗುರುವಾರದ ಆಟದಲ್ಲಿ ಸೂರ್ಯಕುಮಾರ್ ಯಾದವ್ ಸಣ್ಣ ಮೊತ್ತ ಕಲೆಹಾಕಿದರೂ ವೇಗದ ಆಟ ಆಡಿದ್ದರು. 10 ಬಾಲ್ಗೆ 16 ರನ್ ಗಳಿಸಿ ಕ್ರಿಸ್ ಮಾರಿಸ್ಗೆ ವಿಕೆಟ್ ಒಪ್ಪಿಸಿದ್ದರು.
ಈ ಪಂದ್ಯದ ಬಳಿಕ ಮುಂಬೈ ಇಂಡಿಯನ್ಸ್ ತಂಡ 6 ಅಂಕಗಳನ್ನು ಹೊಂದಿ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿತ್ತು. ಇಂದು (ಮೇ 1) ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 27ನೇ ಪಂದ್ಯವನ್ನು ದೆಹಲಿ ಕ್ರಿಕೆಟ್ ಮೈದಾನದಲ್ಲಿ ಆಡಲಿದೆ. ಐಪಿಎಲ್ ಸರಣಿಯ 27ನೇ ಪಂದ್ಯದ, ಎರಡು ಚಾಂಪಿಯನ್ ತಂಡಗಳ ನಡುವಿನ ಹಣಾಹಣಿಯ ಫಲಿತಾಂಶ ಏನಾಗಬಹುದು ಎಂದು ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ.
MI vs RR Match 24 Result, IPL 2021: ಮುಂಬೈಗೆ ಸುಲಭ ತುತ್ತಾದ ರಾಜಸ್ಥಾನ್, ಸೋಲಿನ ಸುಳಿಯಿಂದ ಹೊರಬಂದ ರೋಹಿತ್ ಪಡೆ
(IPL 2021 Suryakumar Yadav kisses his wife Devisha after match between MI RR maintaining Social Distance See Pic)
Published On - 3:38 pm, Sat, 1 May 21