ಕರೆಂಟ್ ಶಾಕ್ನಿಂದ ಅಂಗವೈಕಲ್ಯ; ತಮ್ಮದೇ ದಾಖಲೆ ಮುರಿದು ಒಲಿಂಪಿಕ್ಸ್‌ಗೆ ಟಿಕೆಟ್ ಪಡೆದ ದೇವೇಂದ್ರ ಝಾಜಾರಿಯಾ
. ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಟ್ರಯಲ್ಸ್‌ನಲ್ಲಿ ದೇವೇಂದ್ರ ತಮ್ಮದೇ ಆದ 63.97 ಮೀಟರ್ ವಿಶ್ವ ದಾಖಲೆಯನ್ನು ಮುರಿದರು. ಬುಧವಾರ ಅವರು 65.71 ಮೀಟರ್ ಜಾವೆಲಿನ್ ಎಸೆದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು.
ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ದೇವೇಂದ್ರ ಝಾಜಾರಿಯಾ ಬುಧವಾರ ತಮ್ಮದೆ ದಾಖಲೆ ಮುರಿದು ಟೋಕಿಯೊಗೆ ಟಿಕೆಟ್ ಖಚಿತಪಡಿಸಿಕೊಂಡಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ತಮ್ಮದೇ ಆದ ವಿಶ್ವ ದಾಖಲೆಯನ್ನು ಮುರಿದು ಚಿನ್ನದ ಪದಕದ ಹ್ಯಾಟ್ರಿಕ್ ಪೂರ್ಣಗೊಳಿಸಲು ಕಣ್ಣಿಟ್ಟಿದ್ದಾರೆ. ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಆಟಗಾರ 40 ವರ್ಷದ ವಯಸ್ಸಿನ ಝಾಜಾರಿಯಾ. ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಟ್ರಯಲ್ಸ್‌ನಲ್ಲಿ ದೇವೇಂದ್ರ ತಮ್ಮದೇ ಆದ 63.97 ಮೀಟರ್ ವಿಶ್ವ ದಾಖಲೆಯನ್ನು ಮುರಿದರು. ಬುಧವಾರ ಅವರು 65.71 ಮೀಟರ್ ಜಾವೆಲಿನ್ ಎಸೆದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಇದು ಮೂರನೇ ಬಾರಿಗೆ ದೇವೇಂದ್ರ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಕ್ಯಾನ್ಸರ್ನಿಂದ ತಂದೆ ಸಾವು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕ್ಯಾನ್ಸರ್ನಿಂದ ತಂದೆಯನ್ನು ಕಳೆದುಕೊಂಡ ನಂತರ ದೇವೇಂದ್ರ ಧೃತಿಗೆಡದೆ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ತಂದೆ ನಿಧನದ ಬಳಿಕ ದೇವೇಂದ್ರ ಅವರು ತಮ್ಮ ಕುಟುಂಬದ ಯಾವುದೇ ವ್ಯಕ್ತಿಯನ್ನು ಭೇಟಿ ಮಾಡಿಲ್ಲ ಮತ್ತು ನಿರಂತರವಾಗಿ ತರಬೇತಿ ಪಡೆಯುತ್ತಿದ್ದಾರೆ. ತಾಯಿಯ ಬೆಂಬಲ ನನಗೆ ಇಷ್ಟು ಧೈರ್ಯ ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾದೊಂದಿಗಿನ ಸಂಭಾಷಣೆಯಲ್ಲಿ ಅವರು, ಇದು ಎಲ್ಲಾ ಭಾವೋದ್ರೇಕದ ವಿಷಯ ಎಂದು ನಾನು ಭಾವಿಸುತ್ತೇನೆ. ನೀವು ಉತ್ತಮವಾಗಿ ತರಬೇತಿ ನೀಡಿದರೆ ಮತ್ತು ಉತ್ತಮ ಸ್ಥಿತಿಯಲ್ಲಿದ್ದರೆ ವಯಸ್ಸು ಅಪ್ರಸ್ತುತವಾಗುತ್ತದೆ. ಕಳೆದ ಅಕ್ಟೋಬರ್‌ನಿಂದ ನಾನು ಮನೆಗೆ ಹೋಗಿಲ್ಲ. ನಾನು ತರಬೇತಿಯತ್ತ ಗಮನ ಹರಿಸಬೇಕೆಂದು ನನ್ನ ತಾಯಿ ಬಯಸುತ್ತಾರೆ. ನನ್ನ ತಂದೆಯ ನಿಧನದ ನಂತರ ನಾನು ಬಲಶಾಲಿಯಾಗಿದ್ದೇನೆ. ಟೋಕಿಯೊಗೆ ಹೋಗುವ ಮೊದಲು ನಾನು ಕುಟುಂಬವನ್ನು ಭೇಟಿ ಮಾಡಲು ಹೋಗುತ್ತೇನೆ ಎಂದು ತಮ್ಮ ಅಭಿಪ್ರಾಯವನ್ನು ಹೊರಹಾಕಿದರು.
ಕರೆಂಟ್ ಶಾಕ್ನಿಂದ ಅಂಗವೈಕಲ್ಯ ದೇವೇಂದ್ರ ಹೇಳುವಂತೆ 1989 ರಲ್ಲಿ ಅಪಘಾತವು ತನ್ನ ಜೀವನವನ್ನು ಬದಲಿಸಿದಾಗ ಅವರಿಗೆ ಎಂಟು ವರ್ಷ. ಒಂದು ದಿನ ಅವರು ಮರ ಏರಲು ಪ್ರಯತ್ನಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಕರೆಂಟ್ಗೆ ಸಿಕ್ಕಿಹಾಕಿಕೊಂಡರು. ವೈದ್ಯರು ಉತ್ತಮವಾಗಿ ಚಿಕಿತ್ಸೆ ನೀಡಿದರು. ಅಂತಿಮವಾಗಿ ಎಡಗೈಯನ್ನು ಕತ್ತರಿಸಬೇಕಾಯಿತು. ಅದರೆ ಇದರಿಂದ ಹತಾಶರಾಗದ ದೇವೇಂದ್ರ ಪರಿಸ್ಥಿತಿಯ ವಿರುದ್ಧ ಹೋರಾಡಲು ನಿರ್ಧರಿಸಿದರು. ತನ್ನ ಶಾಲಾ ಶಿಕ್ಷಣದ ಜೊತೆಗೆ, ಒಂದು ಕೈಯಿಂದ ಜಾವೆಲಿನ್ ಎತ್ತಿಕೊಂಡು ಕ್ರೀಡಾ ಜಗತ್ತಿನಲ್ಲಿ ಸಾಧನೆ ಮಾಡಲು ಪ್ರಾರಂಭಿಸಿದರು. ಕೋಚ್ ಆರ್.ಡಿ.ಸಿಂಗ್ ಇವರ ಪ್ರತಿಭೆಯನ್ನು ಪೋಷಿಸಿದರು. ಅದರ ಫಲವಾಗಿ ದೇವೇಂದ್ರ ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದಿದ್ದಾರೆ.