ಪೂರ್ವ ತಯಾರಿ ಇಲ್ಲದೇ ಭಾರತ ಡಬ್ಲ್ಯೂಟಿಸಿ ಫೈನಲ್ ಆಡಿದ್ದು ಭಾರೀ ಪ್ರಮಾದಕರ: ಅಲಸ್ಟೇರ್ ಕುಕ್
ಎರಡು ತಂಡಗಳ ಸಿದ್ಧತೆ ಬಗ್ಗೆ ನೋಡುವುದಾದರೆ ನ್ಯೂಜಿಲೆಂಡ್ ತಂಡದ ತಯಾರಿ ಬಹಳ ಚೆನ್ನಾಗಿತ್ತು, ಯಾಕೆಂದರೆ ಸೌತಾಂಪ್ಟನ್ನಲ್ಲಿ ಡಬ್ಲ್ಯೂಟಿಸಿ ಅರಂಭವಾಗುವ ಕೇವಲ ಒಂದು ವಾರ ಮೊದಲು ನ್ಯೂಜಿಲೆಂಡ್ ಟೆಸ್ಟ್ ಸರಣಿ ಆಡಿತ್ತು ಎಂದು ಕುಕ್ ಹೇಳಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (ಡಬ್ಲ್ಯೂಟಿಸಿ) ಪೈನಲ್ ಪಂದ್ಯಕ್ಕೆ ಮೊದಲು ಭಾರತಕ್ಕೆ ಅಭ್ಯಾಸ ಪಂದ್ಯಗಳನ್ನು ಆಡಲು ಅವಕಾಶ ಸಿಗದೆ ಹೋಗಿದ್ದೇ ಮುಳುವಾಯಿತು ಎಂದು ಇಂಗ್ಲೆಂಡ್ನ ಮಾಜಿ ಆರಂಭ ಆಟಗಾರ ಅಲಸ್ಟೇರ್ ಕುಕ್ ಹೇಳಿದ್ದಾರೆ. ಅದಕ್ಕೆ ತದ್ವಿರುದ್ಧವಾಗಿ, ಇಂಗ್ಲೆಂಡ್ ವಿರುದ್ಧ 2-ಪಂದ್ಯಗಳ ಟೆಸ್ಟ್ ಸರಣಿ ಆಡಿದ ನ್ಯೂಜಿಲೆಂಡ್ ಭರ್ಜರಿ ತಯಾರಿಯೊಂದಿಗೆ ಕಣಕ್ಕಿಳಿಯಿತು ಎಂದು ಲೆಜೆಂಡರಿ ಬ್ಯಾಟ್ಸ್ಮನ್ ಹೇಳಿದ್ದಾರೆ. ಎರಡು ತಂಡಗಳ ಸಿದ್ಧತೆ ಬಗ್ಗೆ ನೋಡುವುದಾದರೆ ನ್ಯೂಜಿಲೆಂಡ್ ತಂಡದ ತಯಾರಿ ಬಹಳ ಚೆನ್ನಾಗಿತ್ತು, ಯಾಕೆಂದರೆ ಸೌತಾಂಪ್ಟನ್ನಲ್ಲಿ ಡಬ್ಲ್ಯೂಟಿಸಿ ಅರಂಭವಾಗುವ ಕೇವಲ ಒಂದು ವಾರ ಮೊದಲು ನ್ಯೂಜಿಲೆಂಡ್ ಟೆಸ್ಟ್ ಸರಣಿ ಆಡಿತ್ತು ಎಂದು ಕುಕ್ ಹೇಳಿದ್ದಾರೆ.
‘ಡಬ್ಲ್ಯೂಟಿಸಿ ಪಂದ್ಯಕ್ಕೆ ಮೊದಲು ನಾನು ಅದನ್ನು ಕಿವೀಸ್ ತಂಡ ಗೆಲ್ಲಲಿದೆ ಎಂದು ಹೇಳಿದ್ದರ ಹಿಂದೆ ಇದೇ ಕಾರಣವಿತ್ತು. ನ್ಯೂಜಿಲೆಂಡ್ ಮ್ಯಾಚ್ ತಯಾರಿಯೊಂದಿಗೆ ಮೈದಾನ ಪ್ರವೇಶಿಸಿತ್ತು. ಇಂಗ್ಲೆಂಡ್ ವಿರುದ್ಧ ಆಡಿದ ಆ ಎರಡು ಟೆಸ್ಟ್ ಪಂದ್ಯಗಳು ಪರಿಪೂರ್ಣ ಸಿದ್ಧತೆಯಾಗಿದ್ದವು,’ ಎಂದು ಕುಕ್ ಅವರು ಬಿಬಿಸಿಯ ಟಫರ್ ಮತ್ತು ವಾನ್ ಪಾಡ್ಕಾಸ್ಟ್ನಲ್ಲಿ ಹೇಳಿದರು.
ಅದಕ್ಕೆ ತದ್ವಿರುದ್ಧವಾಗಿ ಭಾರತ ಹೆಚ್ಚು ಕಡಿಮೆ ಮೂರು ಮೂರು ತಿಂಗಳ ನಂತರ ಟೆಸ್ಟ್ ಮ್ಯಾಚ್ ಒಂದನ್ನು ಆಡುತಿತ್ತು. ಡಬ್ಲ್ಯೂಟಿಸಿ ಪಂದ್ಯಕ್ಕೆ ಮೊದಲು ಅವರು ಕೆಂಪು ಚೆಂಡಿನೊಂದಿಗೆ ಆಡಿದ ಪಂದ್ಯಗಳೆಂದರೆ ತಮ್ಮ ತಂಡದ ಸದಸ್ಯರ ನಡುವೆ ಎರಡು ಟೀಮುಗಳನ್ನು ಮಾಡಿಕೊಂಡು ಆಡಿದ್ದು. ಟೆಸ್ಟ್ ಮ್ಯಾಚ್ ಒಂದರ ತೀವ್ರತೆ ಮತ್ತು ಗಾಂಭೀರ್ಯತೆ ಅಂಥ ಪಂದ್ಯಗಳಲ್ಲಿ ಇರುವುದಿಲ್ಲ ಎಂದು ಕುಕ್ ಹೇಳಿದ್ದಾರೆ.
‘ಅಂತರ್ ತಂಡ ಪಂದ್ಯಗಳು ಅಡುವ ಉದ್ದೇಶ ಸರಿಯಲ್ಲ ಅಂತ ನಾನು ಹೇಳಲಾರೆ ಆದರೆ ಅಂಥ ಪಂದ್ಯಗಳಲ್ಲಿ ಟೆಸ್ಟ್ ಪಂದ್ಯಗಳಲ್ಲಿನ ತೀವ್ರತೆ ಇರೋದಿಲ್ಲ. ಮೊದಲ ಗಂಟೆಯ ಆಟ ಚೆನ್ನಾಗಿರಬಹುದು ಆದರೆ, ಆಟ ಮುಂದಕ್ಕೆ ಸಾಗಿದ ಹಾಗೆ ಆ ತೀವ್ರತೆ ಕಡಿಮೆಯಾಗುತ್ತದೆ. ಭಾರತಕ್ಕೆ ಮುಳುವಾಗಿದ್ದು ಅದೇ,’ ಎಂದು ಕುಕ್ ಹೇಳಿದ್ದಾರೆ.
ನ್ಯೂಜಿಲೆಂಡ್ ಸೀಮ್ ಬೌಲಿಂಗ್ ಎದುರು ಭಾರತದ ಬ್ಯಾಟ್ಸ್ಮನ್ಗಳಲ್ಲಿ ಅಭ್ಯಾಸದ ಕೊರತೆ ಎದ್ದು ಕಂಡಿತು. ಮೊದಲ ಇನ್ನಿಂಗ್ಸ್ನಲ್ಲಿ ಅವರು 217 ರನ್ಗಳ ಮೊತ್ತಕ್ಕೆ ಔಟಾದರು, ಎರಡನೇ ಇನ್ನಿಂಗ್ಸ್ ನಲ್ಲಿ ಅವರು ಮತ್ತೂ ಕೆಟ್ಟ ಆಟವಾಡಿ ಕೇವಲ 170 ರನ್ ಗಳಿಸಿದರು.
ಡಬ್ಲ್ಯೂಟಿಸಿ ಪಂದ್ಯದಲ್ಲಿ ಭಾರತ ಎಸಗಿದ ಮತ್ತೊಂದು ದೊಡ್ಡ ಪ್ರಮಾದವೆಂದರೆ, ಪಂದ್ಯಕ್ಕೆ ಮಳೆ ಕಾಟ ಎದುರಾಗುವ ವಿಷಯ ಗೊತ್ತಿದ್ದರೂ ಇಬ್ಬರು ಸ್ಪೆಷಲಿಸ್ಟ್ ಸ್ಪಿನ್ನರ್ಗಳನ್ನು ಆಡಿಸಿದ್ದು ಎಂದು ಕುಕ್ ಹೇಳಿದ್ದಾರೆ. ಪಂದ್ಯದಲ್ಲಿ ಆಡುವ 11 ಸದಸ್ಯರ ಹೆಸರಗಳನ್ನು ಒಂದು ದಿನ ಮೊದಲೇ ಪ್ರಕಟಿಸಿ, ಮೊದಲ ದಿನದಾಟ ಮಳೆಗೆ ಅಹುತಿಯಾದರೂ ಟೀಮಿನಲ್ಲಿ ಬದಲಾವಣೆ ಮಾಡುವ ಗೋಜಿಗೆ ಭಾರತ ಹೋಗಲಿಲ್ಲ ಎಂದು ಅವರು ಹೇಳಿದ್ದಾರೆ.
ಪಂದ್ಯ ಶುರುವಾಗುವ ಒಂದು ದಿನದ ಮೊದಲೇ ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ ಆಡುವ ಎಲೆವೆನ್ ಘೋಷಣೆ ಮಾಡಿದ್ದು ಅವರ ಅತಿಯಾದ ಆತ್ಮ ವಿಶ್ವಾಸವನ್ನು ತೋರುತ್ತದೆ. ಪಂದ್ಯ ನಡೆಯುವಾಗ ಮಳೆ ಬರುತ್ತದೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಸ್ಪಿನ್ನರ್ಗಳು ಹೆಚ್ಚು ಪ್ರಭಾವ ಬೀರಲಾರರು ಅನ್ನೋದು ಅವರ ಗಮನಕ್ಕೆ ಬಾರದೆ ಹೋಗಿದ್ದು ದುರದೃಷ್ಟಕರ. ಭಾರತದ ಸ್ಪಿನ್ನರ್ಗಳು ನಿಸ್ಸಂದೇಹವಾಗಿ ವಿಶ್ವ ದರ್ಜೆಯ ಬೌಲರ್ಗಳು ನಿಜ, ಆದರೆ ಆ ಪಿಚ್ ಅವರಿಗೆ ನೆರವು ನೀಡುವಂಥಾದ್ದಾಗಿರಲಿಲ್ಲ,’ ಎಂದು ಕುಕ್ ಹೇಳಿದ್ದಾರೆ.
ಇದನ್ನೂ ಓದಿ: WTC Final: ಸೋತಾಗ ತಂಡ ಸರಿಯಿಲ್ಲ ಎಂದ ವಿರಾಟ್! ಬಳಿಕ ನಾವೆಲ್ಲಾ ಒಂದೇ ಕುಟುಂಬ ಎಂದ ಕೊಹ್ಲಿ