ಜ್ಯೋತಿರಾದಿತ್ಯ ಸಿಂಧಿಯಾರನ್ನು ಭೇಟಿಯಾದ ನಾರ್ತ್‌ಈಸ್ಟ್ ಯುನೈಟೆಡ್ ಕ್ಲಬ್ ಮಾಲೀಕ ಜಾನ್ ಅಬ್ರಾಹಂ

John Abraham Meets Jyotiraditya Scindia: ಇಂಡಿಯನ್ ಸೂಪರ್ ಲೀಗ್‌ನ ನಾರ್ತ್‌ಈಸ್ಟ್ ಯುನೈಟೆಡ್ ತಂಡದ ಮಾಲೀಕ ಜಾನ್ ಅಬ್ರಹಾಂ ಮತ್ತು ಸಿಇಒ ಮಂದರ್ ತಮ್ಹಾನೆ ಅವರು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯಲ್ಲಿ, ತಂಡದ ಜರ್ಸಿಯನ್ನು ಸಿಂಧಿಯಾ ಅವರಿಗೆ ಉಡುಗೊರೆಯಾಗಿ ನೀಡಲಾಗಿದೆ. ಸಿಂಧಿಯಾ ಅವರು ಭಾರತೀಯ ಫುಟ್ಬಾಲ್‌ನ ಬೆಳವಣಿಗೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು ನಾರ್ತ್‌ಈಸ್ಟ್ ಯುನೈಟೆಡ್‌ನ ಯಶಸ್ಸಿಗೆ ಶುಭ ಹಾರೈಸಿದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾರನ್ನು ಭೇಟಿಯಾದ ನಾರ್ತ್‌ಈಸ್ಟ್ ಯುನೈಟೆಡ್ ಕ್ಲಬ್ ಮಾಲೀಕ ಜಾನ್ ಅಬ್ರಾಹಂ
Jyotiraditya Scindia

Updated on: Jun 18, 2025 | 5:29 PM

ಇಂಡಿಯನ್ ಸೂಪರ್ ಲೀಗ್​ನ (Indian Super League) ಪ್ರಮುಖ ಕ್ಲಬ್​ಗಳಲ್ಲಿ ಒಂದಾದ ನಾರ್ತ್‌ಈಸ್ಟ್ ಯುನೈಟೆಡ್ ಕ್ಲಬ್​ನ ಮಾಲೀಕರಾದ ಬಾಲಿವುಡ್​ನ ಜನಪ್ರಿಯ ನಟ ಜಾನ್ ಅಬ್ರಾಹಂ (John Abraham) ಹಾಗೂ ಕ್ಲಬ್​ನ ಸಿಇಒ ಮಂದರ್ ತಮ್ಹಾನೆ ಅವರು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಅವರನ್ನು ಇಂದು ಅವರ ಕಚೇರಿಯಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಸಿಂಧಿಯಾ ಅವರಿಗೆ ತಂಡದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಲಾಗಿದ್ದು, ಜೆರ್ಸಿಯ ಮೇಲೆ ನಂ.1 ಎಂದು ನಮೂದಿಸಲಾಗಿದೆ. ಉಭಯರು ಭೇಟಿಯಾದ ವಿಚಾರವನ್ನು ಸಿಂಧಿಯಾ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

ಸಿಂಧಿಯಾರನ್ನು ಬೇಟಿಯಾದ ಅಬ್ರಾಹಂ

ಇಬ್ಬರ ಭೇಟಿಯ ಬಳಿಕ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಸಿಂಧಿಯಾ, ‘ಭಾರತದ ಕ್ರೀಡಾ ಶಕ್ತಿ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿರುವ ಈಶಾನ್ಯದ ರಾಜ್ಯಗಳಲ್ಲಿ ಕ್ರೀಡೆಗಳ ಬಗ್ಗೆ ಆಳವಾದ ಉತ್ಸಾಹ ಮತ್ತು ಯುವ ಪ್ರತಿಭೆಗಳನ್ನು ಹುಡುಕುವ, ರೂಪಿಸುವ ಹಾಗೂ ಬೆಂಬಲಿಸುವ ಬಯಕೆಯನ್ನು ಹಂಚಿಕೊಳ್ಳುವ ವ್ಯಕ್ತಿಯನ್ನು ಭೇಟಿಯಾಗುವುದು ಯಾವಾಗಲೂ ಸಂತೋಷಕರವಾಗಿರುತ್ತದೆ.

ಜಾನ್ ಅಬ್ರಾಹಂ ಅವರಿಗೆ ಫುಟ್ಬಾಲ್‌ ಮೇಲಿರುವ ಅದಮ್ಯ ಉತ್ಸಾಹ ಮತ್ತು ಭಾರತದಲ್ಲಿ ಮೆಸ್ಸಿ ಅಥವಾ ರೊನಾಲ್ಡೊರಂತಹ ಆಟಗಾರರು ಉದಯಿಸುವುದನ್ನು ನೋಡುವ ಅವರ ಕನಸು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಭಾರತೀಯ ಫುಟ್ಬಾಲ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರು ಮತ್ತು ನಾರ್ತ್‌ಈಸ್ಟ್ ಯುನೈಟೆಡ್ ತಂಡವು ಉತ್ತಮ ಯಶಸ್ಸನ್ನು ಪಡೆಯಬೇಕೆಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ನಾರ್ತ್‌ಈಸ್ಟ್ ಯುನೈಟೆಡ್ ಕ್ಲಬ್

ಇಂಡಿಯನ್ ಸೂಪರ್ ಲೀಗ್ ಆರಂಭವಾದ ಮೊದಲ ಸೀಸನ್​ನಿಂದಲೂ ಅಂದರೆ 2014 ರಿಂದಲೂ ಈ ಲೀಗ್​ನಲ್ಲಿ ಭಾಗವಹಿಸುತ್ತಿರುವ ನಾರ್ತ್‌ಈಸ್ಟ್ ಯುನೈಟೆಡ್ ಕ್ಲಬ್ ತಂಡದಲ್ಲಿ ಅನೇಕ ಸ್ಟಾರ್ ಆಟಗಾರರಿದ್ದಾರೆ. ಇನ್ನು ಕಳೆದ ಆವೃತ್ತಿಯಲ್ಲಿ ಅಂದರೆ 2024- 25 ರ ಸೀಸನ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ನಾರ್ತ್‌ಈಸ್ಟ್ ಯುನೈಟೆಡ್ ಕ್ಲಬ್ ಆಡಿದ 24 ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, 6 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಉಳಿದಂತೆ 8 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಒಟ್ಟಾರೆ 38 ಅಂಕಗಳೊಂದಿಗೆ ತಂಡವು ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Wed, 18 June 25