- Kannada News Photo gallery Cricket photos IPL 2026: RCB suffers big blow as Josh Hazlewood out of opening match vs SRH
IPL 2026: ಆರ್ಸಿಬಿಗೆ ಆರಂಭಿಕ ಆಘಾತ; ಮೊದಲ ಪಂದ್ಯದಲ್ಲಿ ಅಡಲ್ಲ ಸ್ಟಾರ್ ಪ್ಲೇಯರ್
RCB's IPL 2026 Opener: ಐಪಿಎಲ್ 2026 ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಆರ್ಸಿಬಿ ಹಾಗೂ ಸನ್ರೈಸರ್ಸ್ ನಡುವೆ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಆರ್ಸಿಬಿಗೆ ಪ್ರಮುಖ ವೇಗಿ ಜೋಶ್ ಹೇಜಲ್ವುಡ್ ಗಾಯದ ಕಾರಣದಿಂದ ಉದ್ಘಾಟನಾ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೇಜಲ್ವುಡ್ ಕಳೆದ ಆವೃತ್ತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಅವರ ಅನುಪಸ್ಥಿತಿಯು ತಂಡದ ಬೌಲಿಂಗ್ ವಿಭಾಗಕ್ಕೆ ದೊಡ್ಡ ನಷ್ಟವಾಗಿದೆ.
Updated on: Mar 27, 2026 | 6:26 PM

2026 ರ ಐಪಿಎಲ್ ಮಾರ್ಚ್ 28 ರಂದು ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ಪ್ರಾರಂಭವಾಗಲಿದೆ. ಆದಾಗ್ಯೂ ಆರ್ಸಿಬಿಗೆ ಆರಂಭಿಕ ಆಘಾತ ಎದುರಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಜೋಶ್ ಹೇಜಲ್ವುಡ್ ಆರಂಭಿಕ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ತಂಡದ ಕೋಚ್ ಆಂಡಿ ಫ್ಲವರ್ ಖಚಿತ ಮಾಹಿತಿ ನೀಡಿದ್ದಾರೆ. ಗಾಯದ ನಡುವೆಯೂ ಆರ್ಸಿಬಿ ಪಾಳಯವನ್ನು ಸೇರಿಕೊಂಡಿರುವ ಹೇಜಲ್ವುಡ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಫಿಟ್ನೆಸ್ ಸಮಸ್ಯೆಗಳಿಂದಾಗಿ ಅವರು ನಾಳೆಯ ಪಂದ್ಯವನ್ನು ಆಡುವುದಿಲ್ಲ ಎಂದು ಆಂಡಿ ಫ್ಲವರ್ ಹೇಳಿದ್ದಾರೆ.

ಹೇಜಲ್ವುಡ್ ಬಹಳ ದಿನಗಳಿಂದ ಗಾಯದಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಅವರು ಆಶಸ್ ಸರಣಿಯನ್ನು ಮಾತ್ರವಲ್ಲದೆ ಟಿ20 ವಿಶ್ವಕಪ್ನಲ್ಲೂ ಭಾಗವಹಿಸಲು ಸಾಧ್ಯವಾಗಿಲ್ಲ. ನವೆಂಬರ್ 2025 ರಿಂದ ಕ್ರಿಕೆಟ್ನಿಂದ ಹೊರಗುಳಿದಿರುವ ಹೇಜಲ್ವುಡ್, ಮಂಡಿರಜ್ಜು ಮತ್ತು ಅಕಿಲೀಸ್ ಸ್ನಾಯುರಜ್ಜು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ಆರ್ಸಿಬಿಯ ಬೌಲಿಂಗ್ ವಿಭಾಗದಲ್ಲಿ ಹೇಜಲ್ವುಡ್ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಅನುಪಸ್ಥಿತಿಯಲ್ಲಿ, ತಂಡವು ಇತರ ವೇಗದ ಬೌಲರ್ಗಳನ್ನು ಹೆಚ್ಚು ಅವಲಂಬಿಸಬೇಕಾಗುತ್ತದೆ. ಕಳೆದ ಆವೃತ್ತಿಯಲ್ಲಿ ಹೇಜಲ್ವುಡ್ 12 ಪಂದ್ಯಗಳನ್ನು ಆಡಿ 22 ವಿಕೆಟ್ಗಳನ್ನು ಪಡೆದಿದ್ದರು. ಅವರ ಎಕಾನಮಿ ದರ 8.77 ಆಗಿತ್ತು, ಇದು ಇತರ ಬೌಲರ್ಗಳಿಗೆ ಹೋಲಿಸಿದರೆ ಸಾಕಷ್ಟು ಮಿತವ್ಯಯಕಾರಿಯಾಗಿತ್ತು.

ಆರ್ಸಿಬಿ ಪೂರ್ಣ ತಂಡ: ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ರಜತ್ ಪಾಟಿದಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ವೆಂಕಟೇಶ್ ಅಯ್ಯರ್, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾಣ್, ಜೋಶ್ ಹೇಜಲ್ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಅಭಿನಂದನ್ ಸಿಂಗ್, ಜಾಕೋಬ್ ಡಫಿ, ಯಶ್ ದಯಾಲ್
