GPBL 2023 ರಲ್ಲಿ ಭಾಗವಹಿಸಲು ಆಟಗಾರರಿಗೆ ಅನುಮತಿ ನೀಡಿದ ಕರ್ನಾಟಕ ಹೈಕೋರ್ಟ್

Grand Prix Badminton League: ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್​ನ ಮೊದಲ ಸೀಸನ್​ನಲ್ಲಿ ಮಂಡ್ಯ ಬುಲ್ಸ್ ತಂಡದ ವಿರುದ್ಧ ಕೆಜಿಎಫ್ ವುಲ್ವ್ಸ್ 7-2 ಅಂತರದಿಂದ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

GPBL 2023 ರಲ್ಲಿ ಭಾಗವಹಿಸಲು ಆಟಗಾರರಿಗೆ ಅನುಮತಿ ನೀಡಿದ ಕರ್ನಾಟಕ ಹೈಕೋರ್ಟ್
GBPL 2023
Follow us
| Updated By: ಝಾಹಿರ್ ಯೂಸುಫ್

Updated on: Jul 24, 2023 | 4:20 PM

ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದಲ್ಲಿ (BAI)​ ನೋಂದಾಯಿತು ಆಟಗಾರರಿಗೆ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್ (Grand Prix Badminton League) ನಲ್ಲಿ ಭಾಗವಹಿಸಲು ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ. ಈ ಹಿಂದೆ ಬಿಎಐನಲ್ಲಿ ನೋಂದಾಯಿತರಾಗಿರುವ ಆಟಗಾರರಿಗೆ ಗ್ರ್ಯಾಂಡ್ ಪಿಕ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಆಯೋಜಕರ ಪರ ಇದೀಗ ಹೈಕೋರ್ಟ್ ತೀರ್ಪು ನೀಡಿದೆ. ಇದರೊಂದಿಗೆ ಈ ವರ್ಷ ನಡೆಯಲಿರುವ 2ನೇ ಸೀಸನ್​ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್​ನಲ್ಲಿ ಪ್ರಮುಖ ಆಟಗಾರರು ಕಾಣಿಸಿಕೊಳ್ಳುವುದು ಖಚಿತವಾಗಿದೆ.

ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) 2023ರ ಏಪ್ರಿಲ್ 10 ಮತ್ತು 2023ರ ಜುಲೈ 5ರಂದು ಹೊರಡಿಸಿದ್ದ ಸುತ್ತೋಲೆಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಕರ್ನಾಟಕ ಹೈಕೋರ್ಟ್ ಜುಲೈ 21ರಂದು ತಡೆಯಾಜ್ಞೆ ನೀಡಿದೆ. ಅಲ್ಲದೆ ಬಿಎಐ ನೋಂದಾಯಿತ ಆಟಗಾರರಿಗೆ ಜಿಪಿಬಿಎಲ್ ಸೀಸನ್ 2 ರಲ್ಲಿ ಭಾಗವಹಿಸಲು ನ್ಯಾಯಾಲಯ ಅನುಮತಿ ನೀಡಿದೆ. ಅಲ್ಲದೆ ಆಟಗಾರರು, ತರಬೇತುದಾರರು, ತಾಂತ್ರಿಕ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಬಿಎಐಗೆ ಆದೇಶಿಸಿದೆ.

ಮುಂದಿನ ತಿಂಗಳು ನಡೆಯಲಿರುವ 2ನೇ ಸೀಸನ್ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್ (ಜಿಪಿಬಿಎಲ್) ಗಾಗಿ ಈಗಾಗಲೇ 56 ಅಂತಾರಾಷ್ಟ್ರೀಯ ಆಟಗಾರರು ಸೇರಿದಂತೆ 450 ಕ್ಕೂ ಹೆಚ್ಚು ಬ್ಯಾಡ್ಮಿಂಟನ್ ತಾರೆಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಹಿಂದೆ ಬಿಎಐ ನಿರ್ಬಂಧ ಹೇರಿದ್ದರಿಂದ ಭಾರತದ ಕೆಲ ಸ್ಟಾರ್ ಬ್ಯಾಡಿಂಟನ್ ತಾರೆಗಳು ಲೀಗ್​ನಲ್ಲಿ ಭಾಗವಹಿಸುವುದು ಅನುಮಾನ ಎನ್ನಲಾಗಿತ್ತು. ಆದರೀಗ ಹೈಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಎಲ್ಲಾ ಆಟಗಾರರು ಕಾಣಿಸಿಕೊಳ್ಳುವುದು ಖಚಿತವಾಗಿದೆ.

ಈ ಹಿಂದೆ ಇ-ಮೇಲ್ ಗಳು, ನೋಂದಾಯಿತ ಪತ್ರಗಳು, ಫೋನ್ ಕರೆಗಳು ಮತ್ತು ಮೊಬೈಲ್ ಸಂದೇಶಗಳ ಮೂಲಕ ಜಿಪಿಬಿಎಲ್​ನಲ್ಲಿನ ಆಟಗಾರರ ಭಾಗವಹಿಸುವಿಕೆಯ ಬಗ್ಗೆ ಸ್ಪಷ್ಟತೆಯನ್ನು ಕೋರಿ ಕಳೆದ ಒಂದು ವರ್ಷದಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್ ಆಯೋಜಕರು 40 ಕ್ಕೂ ಹೆಚ್ಚು ಬಾರಿ ಬಿಎಐ ಅನ್ನು ಸಂಪರ್ಕಿಸಿದೆ. ಆದರೆ, ಯಾವುದೇ ಸ್ಪಷ್ಟ ಉತ್ತರ ನೀಡಿರಲಿಲ್ಲ.

ಇತ್ತ ಬಿಎಐ ಆಟಗಾರರ ಮೇಲೆ ಹೇರಿದ್ದ ನಿರ್ಬಂಧದಿಂದಾಗಿ, ಅವರು ಕೂಡ ಟೂರ್ನಿಯಲ್ಲಿ ಭಾಗವಹಿಸುವಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಲೀಗ್ ಆರಂಭವಾಗಲು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇರುವಾಗ, ನ್ಯಾಯಾಲಯದ ಮೊರೆ ಹೋಗುವುದು ಬಿಟ್ಟು ನಮಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಜಿಪಿಬಿಎಲ್ ಲೀಗ್ ಆಯುಕ್ತ ಪ್ರಶಾಂತ್ ರೆಡ್ಡಿ ತಿಳಿಸಿದ್ದಾರೆ.

ಭಾರತದ ಸಂವಿಧಾನದ 14 ಮತ್ತು 19 ನೇ ವಿಧಿಯಲ್ಲಿ ಪ್ರತಿಪಾದಿಸಿರುವಂತೆ ಬ್ಯಾಡ್ಮಿಂಟನ್ ಆಟಗಾರರ ಮೂಲಭೂತ ಹಕ್ಕುಗಳನ್ನು ಕರ್ನಾಟಕ ಹೈಕೋರ್ಟ್ ತೀರ್ಪು ಎತ್ತಿ ಹಿಡಿದಿದೆ. ಖಾಸಗಿ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಆಟಗಾರರ ಹಕ್ಕನ್ನು ಎತ್ತಿಹಿಡಿದ ಡಬ್ಲ್ಯೂಪಿ (ಸಿ) 3469/2017 ಮತ್ತು ಸಿಎಂ ಸಂಖ್ಯೆ 15209/2017 ರಲ್ಲಿ ದೆಹಲಿ ಹೈಕೋರ್ಟ್ ಹೊರಡಿಸಿದ ಆಗಸ್ಟ್ 24, 2017 ರ ಆದೇಶದ ಪೂರ್ವನಿದರ್ಶನವನ್ನು ಗೌರವಾನ್ವಿತ ನ್ಯಾಯಾಲಯ ಉಲ್ಲೇಖಿಸಿದೆ. ಈ ಮೂಲಕ ಬಿಎಐನಲ್ಲಿ ನೋಂದಾಯಿತರಾಗಿರುವ ಆಟಗಾರರ ಹಕ್ಕುಗಳನ್ನು ಗೌರವಿಸಿ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್​ನಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ.

ಇದೀಗ ಹೈಕೋರ್ಟ್ ತೀರ್ಪು ನಮ್ಮ ಪರವಾಗಿ ಬಂದಿರುವುದಕ್ಕೆ ನಮಗೆ ಸಂತೋಷವಾಗಿದ್ದರೂ, ದೇಶದಲ್ಲಿ ಬ್ಯಾಡ್ಮಿಂಟನ್ ಅನ್ನು ಉತ್ತೇಜಿಸಲು ಒಟ್ಟಾಗಿ ಕೆಲಸ ಮಾಡಲು ನಾವು ಇನ್ನೂ ಬಿಎಐ ಜೊತೆ ಕೈಜೋಡಿಸಲಿದ್ದೇವೆ. ಬಿಎಐ ಬ್ಯಾಡ್ಮಿಂಟನ್​ನ ಆಡಳಿತ ಮಂಡಳಿಯಾಗಿದ್ದರೂ, ಅವರು ಮುಖ್ಯವಾಗಿ ಭಾರತವನ್ನು ಪ್ರತಿನಿಧಿಸಲು ಆಟಗಾರರನ್ನು ಆಯ್ಕೆ ಮಾಡುವತ್ತ ಗಮನ ಹರಿಸುತ್ತಾರೆ. ಇದು ಹತ್ತಾರು ಮಹತ್ವಾಕಾಂಕ್ಷೆಯ ಬ್ಯಾಡ್ಮಿಂಟನ್ ಆಟಗಾರರು ಭಾರತೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾದರೂ, ಅವರನ್ನು ಗುರುತಿಸುವಲ್ಲಿ ಇಂತಹ ಲೀಗ್​ಗಳು ಸಹಕಾರಿಯಾಗುತ್ತಿದೆ.

“ನಾವು ಕ್ರೀಡೆಯನ್ನು ಉತ್ತೇಜಿಸಲು ಮತ್ತು ಆಟಗಾರರಿಗೆ ಆರ್ಥಿಕವಾಗಿ ಸಹಾಯ ಮಾಡಲು ಬಯಸುತ್ತೇವೆ. ಇದರಿಂದ ಅವರು ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ವಾಸ್ತವವಾಗಿ, ಅಂತಿಮ ಪಟ್ಟಿಯಲ್ಲಿರುವ ಆಟಗಾರರಿಗೆ ನಾವು ಕನಿಷ್ಠ ಖಾತರಿಯನ್ನು ಘೋಷಿಸಿದ್ದೇವೆ ಎಂದು ಪ್ರಶಾಂತ್ ತಿಳಿಸಿದರು.

ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್​ನ ಮೊದಲ ಸೀಸನ್​ನಲ್ಲಿ ಕರ್ನಾಟಕದ ಅಗ್ರ ಆಟಗಾರರಾದ ಪಿ.ವಿ.ಸಿಂಧು, ಕಿಡಂಬಿ ಶ್ರೀಕಾಂತ್, ಅಶ್ವಿನಿ ಪೊನ್ನಪ್ಪ, ಸಾಯಿ ಪ್ರಣೀತ್, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಎಚ್.ಎಸ್.ಪ್ರಣಯ್, ಚಿರಾಗ್ ಶೆಟ್ಟಿ ಮತ್ತು ಜ್ವಾಲಾ ಗುಟ್ಟಾ ಮಾರ್ಗದರ್ಶನ ನೀಡಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಟಗಾರರ ಭಾಗವಹಿಸುವಿಕೆಯೊಂದಿಗೆ, ಎರಡನೇ ಸೀಸನ್​ನಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: GPBL: ಕನಿಷ್ಠ ವೇತನ ಖಾತರಿಪಡಿಸಿದ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್

ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್ ಸೀಸನ್ 2 ಯಾವಾಗ ಶುರು?

ಬ್ಯಾಡ್ಮಿಂಟನ್ ತಾರೆಗಳ ನಡುವಿನ ರಾಕೆಟ್ ಕದನ ಆಗಸ್ಟ್ ತಿಂಗಳಲ್ಲಿ ನಡೆಯಲಿದೆ. ಈ ಬಾರಿ 8 ತಂಡಗಳ ಬದಲಾಗಿ ಒಟ್ಟು 10 ಟೀಮ್​ಗಳು ಕಣಕ್ಕಿಳಿಯಲಿವೆ. ಅದರಂತೆ ಬೆಂಗಳೂರು, ದೆಹಲಿ, ಚೆನ್ನೈ, ಹೈದರಾಬಾದ್, ಲಕ್ನೋ, ಪುಣೆ, ನಾರ್ತ್ ಈಸ್ಟ್, ಮುಂಬೈ, ರಾಯ್‌ಪುರ ಮತ್ತು ಕೊಚ್ಚಿ ನಗರಗಳ ತಂಡಗಳನ್ನು ಪ್ರತಿನಿಧಿಸಿ ಆಟಗಾರರು ಸ್ಪರ್ಧಿಸಲಿದ್ದಾರೆ. ಇದರಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸುವ ತಂಡವು 1 ಕೋಟಿ ರೂ. ನಗದು ಬಹುಮಾನ ಪಡೆಯಲಿದೆ.

ಚೊಚ್ಚಲ ಚಾಂಪಿಯನ್ ಯಾರು?

ಕರ್ನಾಟಕವನ್ನು ಕೇಂದ್ರೀಕರಿಸಿ ಆಯೋಜಿಸಲಾಗಿದ್ದ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್​ನ ಮೊದಲ ಸೀಸನ್​ನಲ್ಲಿ ಮಂಡ್ಯ ಬುಲ್ಸ್ ತಂಡದ ವಿರುದ್ಧ ಕೆಜಿಎಫ್ ವುಲ್ವ್ಸ್ 7-2 ಅಂತರದಿಂದ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ವಿಶೇಷ ಎಂದರೆ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕೆಜಿಎಫ್ ವುಲ್ವ್ಸ್ ತಂಡದ ಮೆಂಟರ್​ ಆಗಿ ಕಾರ್ಯ ನಿರ್ವಹಿಸಿದ್ದರು. ಇದೀಗ 2ನೇ ಸೀಸನ್​ನಲ್ಲೂ ಪಿವಿ ಸಿಂಧು ಕೆಜಿಎಫ್ ವುಲ್ವ್ಸ್ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.