ಯುವ ಬೌಲರ್ಗಳ ಆಕ್ರಮಣಕ್ಕೆ ದಂಗಾದ ರಾಯಲ್ಸ್ಗೆ ಮೊದಲ ಸೋಲು
ಯುವ ಬೌಲರ್ಗಳಾದ ಕಮ್ಲೇಶ್ ನಾಗರಕೋಟಿ ಮತ್ತು ಶಿವಮ್ ಮಾವಿ ಅವರ ಕರಾರುವಾಕ್ ಮತ್ತು ಅಷ್ಟೇ ಮೊನಚಿನ ದಾಳಿಗೆ ತತ್ತರಿಸಿದ ಇದುವರೆಗಿನ ಅಜೇಯ ರಾಜಸ್ತಾನ್ ರಾಯಲ್ಸ್, ಗೆಲುವಿನ ಹಾದಿಯನ್ನು ಕಂಡುಕೊಳ್ಳುತ್ತಿರುವ ಕೊಲ್ಕತಾ ನೈಟ್ ರೈಡರ್ಸ್ಗೆ ಸುಲಭವಾಗಿ 37ರನ್ಗಳಿಂದ ಸೋತಿತು. ರಾಯಲ್ಸ್ ಇನ್ನಿಂಗ್ಸ್ ನಲ್ಲಿ ಚೇತರಿಸಿಕೊಳ್ಳಲಾಗದ ಪೆಟ್ಟುಗಳನ್ನು ನೀಡಿದ ಇವರಿಬ್ಬರು ತಲಾ 2 ವಿಕೆಟ್ ಪಡೆದರು. ಔಟ್ಫೀಲ್ಡನಲ್ಲೂ ಮಿಂಚಿದ ನಾಗರಕೋಟಿ, ಜೊಫ್ರಾ ಆರ್ಚರ್ ಅವರ ನೀಡಿದ ಕ್ಯಾಚನ್ನು ಅಮೋಘವಾಗಿ ಹಿಡಿದರು. ರಿಯಾನ್ ಪರಾಗ್ರನ್ನು ಔಟ್ ಮಾಡಲು ಶುಭ್ಮನ್ ಗಿಲ್ ಹಿಡಿದ […]
ಯುವ ಬೌಲರ್ಗಳಾದ ಕಮ್ಲೇಶ್ ನಾಗರಕೋಟಿ ಮತ್ತು ಶಿವಮ್ ಮಾವಿ ಅವರ ಕರಾರುವಾಕ್ ಮತ್ತು ಅಷ್ಟೇ ಮೊನಚಿನ ದಾಳಿಗೆ ತತ್ತರಿಸಿದ ಇದುವರೆಗಿನ ಅಜೇಯ ರಾಜಸ್ತಾನ್ ರಾಯಲ್ಸ್, ಗೆಲುವಿನ ಹಾದಿಯನ್ನು ಕಂಡುಕೊಳ್ಳುತ್ತಿರುವ ಕೊಲ್ಕತಾ ನೈಟ್ ರೈಡರ್ಸ್ಗೆ ಸುಲಭವಾಗಿ 37ರನ್ಗಳಿಂದ ಸೋತಿತು. ರಾಯಲ್ಸ್ ಇನ್ನಿಂಗ್ಸ್ ನಲ್ಲಿ ಚೇತರಿಸಿಕೊಳ್ಳಲಾಗದ ಪೆಟ್ಟುಗಳನ್ನು ನೀಡಿದ ಇವರಿಬ್ಬರು ತಲಾ 2 ವಿಕೆಟ್ ಪಡೆದರು. ಔಟ್ಫೀಲ್ಡನಲ್ಲೂ ಮಿಂಚಿದ ನಾಗರಕೋಟಿ, ಜೊಫ್ರಾ ಆರ್ಚರ್ ಅವರ ನೀಡಿದ ಕ್ಯಾಚನ್ನು ಅಮೋಘವಾಗಿ ಹಿಡಿದರು. ರಿಯಾನ್ ಪರಾಗ್ರನ್ನು ಔಟ್ ಮಾಡಲು ಶುಭ್ಮನ್ ಗಿಲ್ ಹಿಡಿದ ಕ್ಯಾಚ್ ಸಹ ಅಷ್ಟೇ ಅದ್ಭುತವಾಗಿತ್ತು.
ಮತ್ತೊಮ್ಮೆ ಶ್ರೇಷ್ಠಮಟ್ಟದ ಬೌಲಿಂಗ್ ಪ್ರದರ್ಶನ ನೀಡಿದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ 2 ವಿಕೆಟ್ ಪಡೆದರು. ರಾಯಲ್ಸ್ ಇನ್ನಿಂಗ್ಸ್ನ ಅಂತಿಮ ಹಂತದಲ್ಲಿ ಬ್ಯಾಟ್ ಬೀಸಿ 36 ಎಸೆತಗಳಲ್ಲಿ ಔಟಾಗದೆ 54 ರನ್ (2X4 3X6) ಬಾರಿಸಿದ ಸ್ಯಾಮ್ ಕರನ್ ಟೀಮಿಗೆ ಅತ್ಯಧಿಕ ರನ್ ಗಳಿಸಿದ ಗೌರವಕ್ಕೆ ಪಾತ್ರರಾದರು.
ಕೇವಲ 30 ರನ್ಗಳಾಗುವಷ್ಟರಲ್ಲಿ ಟೀಮಿನ ಪ್ರಮುಖ ಮತ್ತು ಇನ್ಫಾರ್ಮ್ ಆಟಗಾರರಾದ ಸ್ಟೀವೆನ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಕಳೆದುಕೊಂಡಾಗಲೇ ರಾಯಲ್ಸ್ನ ಸೋಲು ಹೆಚ್ಚು ಕಡಿಮೆ ನಿಶ್ಚಿತವಾಗಿತ್ತು. ಸ್ಮಿತ್ 3 ರನ್ ಗಳಿಸಿದರೆ ಸಂಜು ಕೇವಲ 8 ರನ್ಗಳ ಕಾಣಿಕೆ ನೀಡಿದರು. ಅವರ ನಂತರ ಕ್ರೀಸಿಗೆ ಬಂದ ರಾಬಿನ್ ಉತ್ತಪ್ಪ, ರಿಯಾನ್ ಪರಾಗ್ ಬಂದಷ್ಟೇ ವೇಗದಲ್ಲಿ ಮರಳಿದರು. ಸತತವಾಗಿ ಫೇಲಾಗುತ್ತಿರುವ ಉತ್ತಪ್ಪಗೆ ಮುಂದಿನ ಎನಕೌಂಟರ್ಗಳಲ್ಲಿ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಲಿದೆ.
ಇದಕ್ಕೆ ಮೊದಲು ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್ ಅವರಿಂದ ಬ್ಯಾಟಿಂಗ್ಗೆ ಕಳಿಸಲ್ಪಟ್ಟ ಕೊಲ್ಕತಾಗೆ ಉತ್ತಮ ಆರಂಭವೇನೂ ಸಿಗಲಿಲ್ಲ. ಮತ್ತೊಮ್ಮೆ ಬ್ಯಾಟ್ನಿಂದ ಬಾಲನ್ನು ಕನೆಕ್ಟ್ ಮಾಡಲು ಪದೇಪದೆ ವಿಫಲರಾದ ಸುನಿಲ್ ನರೈನ್ ಬ್ಯಾಟ್ ಬದಲಾಯಿಸುವ ನಿರ್ಧಾರ ಮಾಡಿ ಒಂದು ಸಿಕ್ಸ್ರ್ ಮತ್ತು ಬೌಂಡರಿಯನ್ನು ಬಾರಿಸುವಲ್ಲಷ್ಟೇ ಸಫಲರಾದರು. ಆದರೆ ತನ್ನ ಉತ್ತಮ ಫಾರ್ಮನ್ನು ಮುಂದುವರಿಸಿದ ಶುಭ್ಮನ್ ಗಿಲ್ ಆಕರ್ಷಕ 47 ರನ್ (34 5X4 1X6) ಬಾರಿಸಿ ಜೊಫ್ರಾ ಆರ್ಚರ್ಗೆ ವಿಕೆಟ್ ಒಪ್ಪಿಸಿದರು.
ಮೂರನೆ ಕ್ರಮಾಂಕದಲ್ಲಿ ಆಡಲು ಬರುತ್ತಿರುವ ನೀತಿಶ್ ರಾಣಾ ದೊಡ್ಡ ಇನ್ನಿಂಗ್ಸ್ ಆಡುವ ಭರವಸೆ ಮೂಡಿಸುತ್ತಿದ್ದಂತೆಯೇ ಔಟಾಗಿ ನಿರಾಶೆಗೊಳಿಸುತ್ತಿದ್ದಾರೆ. ಇಂದು ರಾಣಾ 17 ಎಸೆತಗಳಲ್ಲಿ (2X4 1X6) 24 ರನ್ ಬಾರಿಸಿದರು. ನಾಯಕ ಕಾರ್ತೀಕ್, ಪವರ್ ಹಿಟ್ಟರ್ ಆಂದ್ರೆ ರಸ್ಸೆಲ್ರನ್ನು ಮೇಲಿನ ಕ್ರಮಾಂಕದಲ್ಲಿ ಆಡಿಸಲು ನಿರ್ಧರಿಸಿದ್ದು ಸ್ವಲ್ಪಮಟ್ಟಿನ ಯಶ ನೀಡಿತು. ಪಾಶವೀ ಶಕ್ತಿ ಪ್ರಯೋಗಿಸಿ ಹೊಡೆತಗಳನ್ನಾಡುವ ವಿಂಡೀಸ್ ದೈತ್ಯ ಮೂರು ಬಾರಿ ಬಾಲನ್ನು ಮೈದಾನದಾಚೆ ಕಳಿಸಿ 24 (14 ಎಸೆತ) ರನ್ ಚಚ್ಚಿದರು.
ಇವತ್ತಿನ ಪಂದ್ಯದಲ್ಲೂ ಸ್ಕೋರ್ ಮಾಡಲು ವಿಫಲರಾದ ಕಾರ್ತೀಕ್, ಕೆಕೆಆರ್ ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿರಬಹುದು. ಅಯಾನ್ ಮೊರ್ಗನ್ ಮಾತ್ರ ಪುನಃ ಮಿಂಚಿ 23 ಎಸೆತಗಳಲ್ಲಿ ಅಜೇಯ 34 (1X4 2X6) ಬಾರಿಸಿದರು. ಉತ್ಕೃಷ್ಟ ಬೌಲಿಂಗ್ ಆಕ್ರಮಣ ನಡೆಸಿದ ಆರ್ಚರ್ ತಮ್ಮ 4 ಓವರ್ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಪಡೆದರು. ಅಂಕಿತ್ ರಜಪೂತ್, ಜಯದೇವ್ ಉನಾಡ್ಕಟ್, ಸ್ಯಾಮ್ ಕರನ್ ಮತ್ತು ತವಾಟಿಯಾ ತಲಾ ಒಂದೊಂದು ವಿಕೆಟ್ ಪಡೆದರೆ, ತುಂಬಾ ದುಬಾರಿಯಾದ ಕನ್ನಡಿಗ ಶ್ರೇಯಸ್ ಗೊಪಾಲ್ ತಮ್ಮ ಪಾಲಿನ ಕೋಟಾದಲ್ಲಿ 43 ರನ್ ಕೊಟ್ಟರು.