
ಜಪಾನ್‌ನ ಟೋಕಿಯೊದಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ (World Championships in Tokyo) ಭಾರತಕ್ಕೆ ಬುಧವಾರ ಮಿಶ್ರ ದಿನವಾಗಿತ್ತು. ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ (Commonwealth Games champion Lakshya Sen) ಸುಲಭ ಗೆಲುವಿನೊಂದಿಗೆ ಮುಂದಿನ ಸುತ್ತಿಗೆ ಮುನ್ನಡೆದರೆ, ಕಳೆದ ಬಾರಿ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್ (Kidambi Srikanth) ಎರಡನೇ ಸುತ್ತಿನಲ್ಲೇ ಸೋಲನುಭವಿಸಿದ್ದಾರೆ. ವಿಶೇಷವೆಂದರೆ ಈ ಇಬ್ಬರೂ ಆಟಗಾರರು ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎದುರುಬದುರು ಸೆಣಸಾಟ ನೆಡೆಸಿ ಪದಕ ಗೆದ್ದಿದ್ದರು. ಲಕ್ಷ್ಯ ಸೇನ್, ಸ್ಪೇನ್‌ನ ಲೂಯಿಸ್ ಪೆನಾಲ್ವರ್ ವಿರುದ್ಧ ನೇರ ಗೇಮ್ ಜಯಗಳಿಸುವ ಮೂಲಕ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್‌ಗೆ ಪ್ರಯಾಣ ಬೆಳೆಸಿದರು. ಆದಾಗ್ಯೂ, ಕಳೆದ ಆವೃತ್ತಿಯ ಬೆಳ್ಳಿ ಪದಕ ವಿಜೇತ ಕಿಡಂಬಿ ಶ್ರೀಕಾಂತ್, ನೇರ ಗೇಮ್‌ಗಳಲ್ಲಿ ಚೀನಾದ ಜಾವೊ ಜುನ್ ಪೆಂಗ್ ವಿರುದ್ಧ ಸೋಲನುಭವಿಸಿದರು.
ಪ್ರೀ ಕ್ವಾರ್ಟರ್ ಫೈನಲ್‌ಗೆ ಲಕ್ಷ್ಯ ಸೇನ್
ಕಳೆದ ವರ್ಷದ ಕಂಚಿನ ಪದಕ ವಿಜೇತ ಲಕ್ಷ್ಯ ಸೇನ್, ಸ್ಪೇನ್‌ನ ಲೂಯಿಸ್ ಪೀವರ್ ಅವರನ್ನು 72 ನಿಮಿಷಗಳಲ್ಲಿ 21-17, 21-10 ರಿಂದ ಸೋಲಿಸಿ ಗೆಲುವು ದಾಖಲಿಸಿದರು. ಒಂದು ಹಂತದಲ್ಲಿ 3-4 ರಿಂದ ಹಿನ್ನಡೆಯಲ್ಲಿದ್ದ ಒಂಬತ್ತನೇ ಶ್ರೇಯಾಂಕದ ಸೇನ್ ಆರು ಅಂಕಗಳ ಮುನ್ನಡೆ ಪಡೆದು ನಂತರ 13-7 ರಿಂದ ಮುನ್ನಡೆ ಸಾಧಿಸಿದರು. ಮೊದಲ ಗೇಮ್ ಅನ್ನು ಆರಾಮವಾಗಿ ಗೆಲ್ಲುವ ಮೂಲಕ ಸೇನ್ ಮುನ್ನಡೆ ಸಾಧಿಸಿದರು.
ನಂತರ ಸ್ಪ್ಯಾನಿಷ್ ಶಟ್ಲರ್‌ನ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಿದ ಸೇನ್ ಎರಡನೇ ಗೇಮ್ ಅನ್ನು ದೊಡ್ಡ ಅಂತರದಿಂದ ಗೆದ್ದರು. ಎರಡನೇ ಗೇಮ್‌ನಲ್ಲಿ, ಮೊದಲ ಆರು ಪಾಯಿಂಟ್‌ಗಳನ್ನು ಇಬ್ಬರು ಆಟಗಾರರ ನಡುವೆ ಹಂಚಿಕೊಂಡರು. ಆದರೆ 21 ವರ್ಷದ ಭಾರತೀಯ ಆಟಗಾರ ತನ್ನ ಶ್ರೇಷ್ಠ ಆಟದಿಂದಾಗಿ ಎದುರಾಳಿ ಮೇಲೆ ಸವಾರಿ ನಡೆಸಿದರು.
ಶ್ರೀಕಾಂತ್ಗೆ ಸೋಲು
ಇಲ್ಲಿಯೂ ಹೋರಾಟ ಮುಂದುವರಿಸಿದ ಕಿಡಂಬಿ ಶ್ರೀಕಾಂತ್ ತಮ್ಮ ಆಟದಲ್ಲಿ ಹಲವಾರು ತಪ್ಪುಗಳನ್ನು ಮಾಡಿದರು. ಇದರಿಂದಾಗಿ ಅವರು ತಮ್ಮ ಕೆಳಗಿನ ಶ್ರೇಯಾಂಕದ ಝೌ ಜುನ್ ಪೆಂಗ್ ವಿರುದ್ಧ 11-21, 15-21 ರಿಂದ ಸೋಲನುಭವಿಸಬೇಕಾಯಿತು. ಕೇವಲ 34 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಶ್ರೀಕಾಂತ್ ಲಯದಲ್ಲಿ ಕಾಣಿಸಲೇ ಇಲ್ಲ. ಮೊದಲ ಗೇಮ್‌ನಲ್ಲಿ ಪೆಂಗ್ 12 ನಿಮಿಷದಲ್ಲಿ ಜಯ ಸಾಧಿಸಿದರೆ, ಎರಡನೇ ಗೇಮ್‌ನ ಒಂದು ಹಂತದಲ್ಲಿ, ಅವರು 16.14 ರಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ ಕಿಡಂಬಿ ಮಾಡಿದ ಸರಳ ತಪ್ಪುಗಳ ಭಾರವನ್ನು ಅವರೇ ಹೊರಬೇಕಾಯಿತು. ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತ ಮತ್ತು ಪಂದ್ಯಾವಳಿಯ 12 ನೇ ಶ್ರೇಯಾಂಕದ ಶ್ರೀಕಾಂತ್ ಅವರು ಐರ್ಲೆಂಡ್ನ ನಾಟ್ ನ್ಗುಯೆನ್ ವಿರುದ್ಧ 22-20 21-19 ಗೆಲುವು ದಾಖಲಿಸಲು ಶ್ರಮಿಸಬೇಕಾಯಿತು.
ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿಗೂ ಸೋಲು
ಏತನ್ಮಧ್ಯೆ, ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತೆ ಎ ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ ಮಾಲ್ಡೀವ್ಸ್‌ನ ಅಮಿನಾಥ್ ನಬಿಹಾ ಅಬ್ದುಲ್ ರಜಾಕ್ ಮತ್ತು ಫಾತಿಮತ್ ನಬಾಹಾ ಅಬ್ದುಲ್ ರಜಾಕ್ ಅವರನ್ನು 21-7, 21-9 ರಿಂದ ಸೋಲಿಸಿ ಮಹಿಳೆಯರ ಡಬಲ್ಸ್ ಎರಡನೇ ಸುತ್ತಿಗೆ ಪ್ರವೇಶಿಸಿದ್ದರು. ಆದರೆ ಎರಡನೇ ಸುತ್ತಿನಲ್ಲಿ ಪೊನ್ನಪ್ಪ ಮತ್ತು ಸಿಕ್ಕಿ ಅವರನ್ನು ಅಗ್ರ ಶ್ರೇಯಾಂಕದ ಚೀನಾದ ಚೆನ್ ಕ್ವಿಂಗ್ ಚೆನ್ ಮತ್ತು ಜಿಯಾ ಯಿ ಫ್ಯಾನ್ 21-15, 21-10 ರಿಂದ 42 ನಿಮಿಷಗಳಲ್ಲಿ ಸೋಲಿಸಿ, ಈ ಜೋಡಿಯ ಪ್ರಯಾಣವನ್ನು ಇಲ್ಲಿಗೆ ಕೊನೆಗೊಳಿಸಿದರು. ಶ್ರೇಯಾಂಕ ರಹಿತ ಜೋಡಿ ಅರ್ಜುನ್ ಮತ್ತು ಕಪಿಲಾ ಎಂಟನೇ ಶ್ರೇಯಾಂಕದ ಕಿಮ್ ಆಸ್ಟ್ರೋಪ್ ಮತ್ತು ಡೆನ್ಮಾರ್ಕ್‌ನ ಆಂಡರ್ಸ್ ಸ್ಕರೂಪ್ ರಾಸ್ಮುಸ್ಸೆನ್ ಅವರನ್ನು 21-17, 21-16 ಸೆಟ್‌ಗಳಿಂದ ಸೋಲಿಸಿ ಮುಂದಿನ ಸುತ್ತಿಗೆ ಎಂಟ್ರಿಕೊಟ್ಟಿದ್ದಾರೆ.
Published On - 3:18 pm, Wed, 24 August 22