
ಅರ್ಜೆಂಟೀನಾದ ಫುಟ್ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ (Lionel Messi) ಬರೋಬ್ಬರಿ 14 ವರ್ಷಗಳ ನಂತರ ಭಾರತಕ್ಕೆ ಬರುತ್ತಿದ್ದಾರೆ. ಡಿಸೆಂಬರ್ 13 ರಿಂದ 15 ರವರೆಗೆ ಭಾರತದಲ್ಲಿರುವ ಮೆಸ್ಸಿ ಒಟ್ಟು ಮೂರು ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ದೊಡ್ಡ ಸುದ್ದಿಯೆಂದರೆ ಈ ಕಾಲ್ಚೆಂಡಿನ ಚತುರ, ಭಾರತದ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ (Sachin Tendulkar), ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಸಹ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಮೆಸ್ಸಿ ಈ ಮೂವರು ಲೆಜೆಂಡರಿ ಆಟಗಾರರೊಂದಿಗೆ ಕ್ರಿಕೆಟ್ ಪಂದ್ಯವನ್ನು ಆಡಲಿದ್ದು, ಈ ಪಂದ್ಯವು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
ಮೇಲೆ ಹೇಳಿದಂತೆ ಮೆಸ್ಸಿ 3 ದಿನಗಳ ಕಾಲ ಭಾರತದಲ್ಲಿ ಉಳಿಯಲಿದ್ದು ವರದಿಗಳ ಪ್ರಕಾರ, ಲಿಯೋನೆಲ್ ಮೆಸ್ಸಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 7 ಆಟಗಾರರ ಕ್ರಿಕೆಟ್ ಪಂದ್ಯವನ್ನು ಆಡಲಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಈ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ. ಡಿಸೆಂಬರ್ 13 ರಿಂದ 15 ರವರೆಗೆ ಅವರು ಕೋಲ್ಕತ್ತಾ, ದೆಹಲಿ ಮತ್ತು ಮುಂಬೈಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಡಿಸೆಂಬರ್ 14 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಮೆಸ್ಸಿ ಭಾಗವಹಿಸಲಿದ್ದಾರೆ.
ಆ ಬಳಿಕ ಮೆಸ್ಸಿ ಕೋಲ್ಕತ್ತಾಗೆ ಭೇಟಿ ನೀಡಲಿದ್ದು, ಈಡನ್ ಗಾರ್ಡನ್ಸ್‌ನಲ್ಲಿ ಅವರನ್ನು ಸನ್ಮಾನಿಸಲಾಗುವುದು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಕೋಲ್ಕತ್ತಾ ಭೇಟಿಯ ಸಮಯದಲ್ಲಿ, ಮೆಸ್ಸಿ ಮಕ್ಕಳಿಗಾಗಿ ಫುಟ್ಬಾಲ್ ಕಾರ್ಯಾಗಾರವನ್ನು ಆಯೋಜಿಸಲಿದ್ದಾರೆ. ಇದೇ ವೇಳೆ ಮೆಸ್ಸಿ ಗೌರವಾರ್ಥವಾಗಿ ‘ಗೋಟ್ ಕಪ್’ ಪಂದ್ಯಾವಳಿಯನ್ನು ಸಹ ಆಯೋಜಿಸಲಾಗುವುದು.
ವಾಸ್ತವವಾಗಿ ಮೆಸ್ಸಿ ಭಾರತಕ್ಕೆ ಬರುವ ವಿಚಾರವನ್ನು ಜೂನ್ 6 ರಂದು ಕೇರಳದ ಕ್ರೀಡಾ ಸಚಿವರು ಬಹಿರಂಗಪಡಿಸಿದ್ದರು. ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾದ ಫುಟ್ಬಾಲ್ ತಂಡವು ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಸ್ನೇಹಪರ ಪಂದ್ಯವನ್ನು ಆಡಲು ಕೇರಳಕ್ಕೆ ಭೇಟಿ ನೀಡಲಿದೆ. ಈ ಬಗ್ಗೆ ನಾವು ಕೇರಳ ಸರ್ಕಾರಕ್ಕೆ ತಿಳಿಸಿದ್ದೇವೆ. ಈ ಪಂದ್ಯವು ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರೀಡಾ ಸಚಿವರು ಹೇಳಿಕೆ ನೀಡಿದ್ದರು.
ಭಾರತಕ್ಕೆ ಬರಲಿದ್ದಾರೆ ಲಿಯೋನೆಲ್ ಮೆಸ್ಸಿ..! ಕೇರಳದಲ್ಲಿ ಫುಟ್ಬಾಲ್ ಪಂದ್ಯವನ್ನಾಡಲಿದೆ ಅರ್ಜೆಂಟೀನಾ ತಂಡ
ಲಿಯೋನೆಲ್ ಮೆಸ್ಸಿ ಈ ಹಿಂದೆ 2011 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ವೆನೆಜುವೆಲಾ ವಿರುದ್ಧ ಸೌಹಾರ್ದ ಪಂದ್ಯವನ್ನು ಆಡಿದ್ದರು. ಈಗ 14 ವರ್ಷಗಳ ನಂತರ ಅವರು ಮತ್ತೊಮ್ಮೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Fri, 1 August 25