ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರರಾದ ಪಿವಿ ಸಿಂಧು ಮತ್ತು ಲಕ್ಷ್ಯ ಸೇನ್ (PV Sindhu and Lakshya Sen) ಹೊಸ ವರ್ಷವನ್ನು ಸೋಲಿನೊಂದಿಗೆ ಆರಂಭಿಸಿದ್ದಾರೆ. ಪ್ರಸ್ತುತ ಮಲೇಷ್ಯಾದಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್ (Malaysia Open) ಸೂಪರ್ 1000 ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋತು, ಈ ಇಬ್ಬರೂ ಸ್ಟಾರ್ ಶೆಟ್ಲರ್ಸ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಅವರನ್ನು ಮಾಜಿ ಒಲಿಂಪಿಕ್ ಚಾಂಪಿಯನ್ ಕರೋಲಿನಾ ಮರಿನ್ ಸೋಲಿಸಿದರೆ, ದೇಶವಾಸಿ ಲಕ್ಷ್ಯಸೇನ್ ಅವರನ್ನು ಸೋಲಿಸಿದ ಎಚ್.ಎಸ್.ಪ್ರಣಯ್ ಮುಂದಿನ ಸುತ್ತಿಗೆ ಎಂಟ್ರಿಕೊಟ್ಟಿದ್ದಾರೆ. ಆದರೆ, ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwik Sairaj Ranki Reddy and Chirag Shetty) ಜೋಡಿ ಮಾತ್ರ ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಇತ್ತ ಮತ್ತೊಬ್ಬ ಸ್ಟಾರ್ ಶೆಟ್ಲರ್ ಸೈನಾ ನೆಹ್ವಾಲ್ (Saina Nehwal) ಕೂಡ ಟೂರ್ನಿಯ ಮೊದಲ ದಿನವೇ ಮೊದಲ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಕಳೆದ ವರ್ಷ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದ ಸಿಂಧು ಬರೋಬ್ಬರಿ ಐದು ತಿಂಗಳವರೆಗೆ ಕೋರ್ಟ್‌ನಿಂದ ದೂರ ಉಳಿದಿದ್ದರು. ಇದೀಗ ಇಂಜುರಿಯಿಂದ ಚೇತರಿಸಿಕೊಂಡು ಟೂರ್ನಿಗೆ ಎಂಟ್ರಿಯಾಗಿದ್ದ ಸಿಂಧು ಮೊದಲ ಸುತ್ತಿನಿಂದಲೇ ಹೊರಬಿದ್ದಿದ್ದಾರೆ. 59 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು ಮರಿನ್ ವಿರುದ್ಧ 12-21,21-10,15-21 ಅಂತರದಲ್ಲಿ ಸೋತರು. ದಾಖಲೆಯ 15ನೇ ಬಾರಿಗೆ ಮುಖಾಮುಖಿಯಾರುವ ಈ ಇಬ್ಬರ ನಡುವಿನ ಕಾಳಗದಲ್ಲಿ 10ರಲ್ಲಿ ಮರಿನ್ ಗೆದ್ದಿದ್ದರೆ, ಸಿಂಧು ಐದರಲ್ಲಿ ಜಯ ಸಾಧಿಸಿದ್ದಾರೆ. ಇನ್ನು ಮತ್ತೊಂದು ಪಂದ್ಯದಲ್ಲಿ ಕೊರಿಯಾ ಜೋಡಿಯನ್ನು ಎದುರಿಸಿದ್ದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಸಾಕಷ್ಟು ಪ್ರಾಬಲ್ಯ ತೋರಿ ಈ ಪಂದ್ಯವನ್ನು 16-21, 13-21 ಅಂತರದಲ್ಲಿ ಗೆದ್ದು ಮುಂದಿನ ಸುತ್ತಿಗೆ ಲಗ್ಗೆ ಇಟ್ಟರು.
PV Sindhu: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಸಿಂಧು ವಿಶ್ವ ಚಾಂಪಿಯನ್ಶಿಪ್ನಿಂದ ಔಟ್..!
ಫಾರ್ಮ್‌ನಲ್ಲಿರುವ ಎಚ್‌ಎಸ್ ಪ್ರಣಯ್ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದಲ್ಲದೆ, ರೋಚಕ ಮುಖಾಮುಖಿಯಲ್ಲಿ ದೇಶವಾಸಿ ಲಕ್ಷ್ಯ ಸೇನ್ ಅವರನ್ನು ಸೋಲಿಸಿದರು. ಕಳೆದ ವರ್ಷ ವಿಶ್ವ ರ‍್ಯಾಂಕಿಂಗ್‌ನಲ್ಲಿ ಎಂಟನೇ ಸ್ಥಾನದಲ್ಲಿದ್ದ ಪ್ರಣಯ್, 10ನೇ ಶ್ರೇಯಾಂಕದ ಸೇನ್ ವಿರುದ್ಧ 22-24, 21-12, 21-18 ಸೆಟ್‌ಗಳಿಂದ ಜಯ ಸಾಧಿಸಿದರು. ಪ್ರಣಯ್ ಮತ್ತು ಸೇನ್ ಕಳೆದ ವರ್ಷದಲ್ಲಿ ಐದು ಬಾರಿ ಮುಖಾಮುಖಿಯಾಗಿದ್ದು, ಸೇನ್ 3-2 ರಿಂದ ಮುನ್ನಡೆ ಸಾಧಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:44 pm, Wed, 11 January 23