ಕಳೆದ ವರ್ಷ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದೇಶಕ್ಕಾಗಿ ಎರಡು ಕಂಚಿನ ಪದಕಗಳನ್ನು ಗೆದ್ದುಕೊಟ್ಟಿದ್ದ ಮಹಿಳಾ ಶೂಟರ್ ಮನು ಭಾಕರ್ ಅವರನ್ನು ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರೊಂದಿಗೆ ವಿಶ್ವ ಚೆಸ್ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದ 18 ವರ್ಷದ ಚೆಸ್ ಚತುರ ಡಿ ಗುಕೇಶ್ ಹಾಗೂ ಭಾರತದ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ಯಾರಾಲಿಂಪಿಯನ್ ಪ್ರವೀಣ್ ಕುಮಾರ್ ಕೂಡ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜನವರಿ 17 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ವಿಶೇಷವಾಗಿ ಆಯೋಜಿಸಲಾಗುವ ಸಮಾರಂಭದಲ್ಲಿ ಈ ನಾಲ್ವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ವಾಸ್ತವವಾಗಿ, ಆರಂಭದಲ್ಲಿ ಖೇಲ್ ರತ್ನ ಪ್ರಶಸ್ತಿಗೆ ಮನು ಭಾಕರ್ ಅವರ ಹೆಸರನ್ನು ಪರಿಗಣಿಸಿಲ್ಲ ಎಂಬ ಸುದ್ದಿ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಇದರಿಂದಾಗಿ ತೀರ ಅಸಮಾಧಾನಗೊಂಡಿದ್ದ ಮನು ಭಾಕರ್ ಅವರ ತಂದೆ ಯಾರೂ ಕೂಡ ನಿಮ್ಮ ಮಕ್ಕಳನ್ನು ಕ್ರೀಡೆಗೆ ಪ್ರೋತ್ಸಾಹಿಸಬೇಡಿ, ನಾವು ಅರ್ಜಿ ಸಲ್ಲಿಸಿದ್ದರೂ ಅದನ್ನು ಕಡೆಗಣಿಸಲಾಗಿದೆ ಎಂದಿದ್ದರು. ಇತ್ತ ತಾಳ್ಮೆಯ ಉತ್ತರ ನೀಡಿದ್ದ ಮನು, ನನ್ನ ಅರ್ಜಿ ಸಲ್ಲಿಕೆಯಲ್ಲಿ ಲೋಪ ದೋಷಗಳಾಗಿರಬೇಕು. ಆದಾಗ್ಯೂ ನನ್ನನ್ನು ಈ ಪ್ರಶಸ್ತಿಗೆ ಪರಿಗಣಿಸುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದರು. ಇದೀಗ ಅವರ ನಂಬಿಕೆಯಂತೆ ಒಲಿಂಪಿಕ್ಸ್ ಪದಕ ವಿಜೇತೆಯನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮನು ಭಾಕರ್, ಕಳೆದ ವರ್ಷ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮತ್ತು 25 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕ ಗೆದ್ದಿದ್ದರು. ಇದಲ್ಲದೆ ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
Ministry of Youth Affairs and Sports announces the Khel Ratna Award for Olympic double medalist Manu Bhaker, Chess World Champion Gukesh D, Hockey team Captain Harmanpreet Singh, and Paralympic Gold medallist Praveen Kumar. pic.twitter.com/VD54E0EtEk
— ANI (@ANI) January 2, 2025
ಕಳೆದ ಡಿಸೆಂಬರ್ 12 ರಂದು ಸಿಂಗಾಪುರದಲ್ಲಿ ನಡೆದಿದ್ದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಚಾಂಪಿಯನ್ ಕಿರೀಟ ತೊಟ್ಟಿದ್ದ ಡಿ ಗುಕೇಶ್ ಅವರಿಗೂ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕೇವಲ 18 ನೇ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್ ಗೆಲ್ಲುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದ ಗುಕೇಶ್ ಇದೀಗ ದೇಶದ ಅತಿದೊಡ್ಡ ಕ್ರೀಡಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮನು ಭಾಕರ್ ಹಾಗೂ ಡಿ ಗುಕೇಶ್ ಅಲ್ಲದೆ ಹರ್ಮನ್‌ಪ್ರೀತ್ ಸಿಂಗ್ ಮತ್ತು ಪ್ರವೀಣ್ ಕುಮಾರ್ ಕೂಡ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ. ಪ್ರಸ್ತುತ ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರ ನಾಯಕತ್ವದಲ್ಲಿ ಭಾರತ ತಂಡ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತ್ತು. ಹಾಗೆಯೇ ಕಳೆದ ವರ್ಷ ನಡೆದಿದ್ದ ಪ್ಯಾರಾಲಿಂಪಿಕ್ಸ್ನಲ್ಲಿ ಹೈಜಂಪ್ ಟಿ64 ಸ್ಪರ್ಧೆಯಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದ ಪ್ರವೀಣ್ ಕುಮಾರ್ ಅವರಿಗೂ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Thu, 2 January 25