
ಹರ್ಯಾಣದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರ ಅಜ್ಜಿ ಹಾಗೂ ಚಿಕ್ಕಪ್ಪ ಮೃತಪಟ್ಟಿದ್ದಾರೆ. ಮಹೇಂದ್ರಗಢ ಬೈಪಾಸ್ ರಸ್ತೆಯಲ್ಲಿ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಬ್ರೆಝ ಕಾರು ಬಂದು ಡಿಕ್ಕಿ ಹೊಡೆದಿದ್ದು, ಈ ಡಿಕ್ಕಿಯ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಷ್ಟರಲ್ಲಾಗಲೇ ಬ್ರೆಝ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮನು ಭಾಕರ್ ಅವರ ಚಿಕ್ಕಪ್ಪ ಯುದ್ಧವೀರ್ ಸಿಂಗ್ ಮತ್ತು ಅಜ್ಜಿ ಸಾವಿತ್ರಿ ದೇವಿ ಅವರು ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಮಹೇಂದರ್‌ಗಢ ಬೈಪಾಸ್ ರಸ್ತೆಯ ಕಡೆಯಿಂದ ಬ್ರೆಝ ಕಾರು ಬಂದಿದೆ. ವರದಿಗಳ ಪ್ರಕಾರ, ರಾಂಗ್ ಸೈಡ್‌ನಿಂದ ವೇಗವಾಗಿ ಬಂದ ಬ್ರೆಝ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಕಾರಿನ ವೇಗದ ರಭಸಕ್ಕೆ ಗಾಳಿಯಲ್ಲಿ ಹಾರಿದ ಇಬ್ಬರು ತಕ್ಷಣವೇ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮನು ಭಾಕರ್ ಅವರ ಚಿಕ್ಕಪ್ಪ ಯುಧವೀರ್ ಸಿಂಗ್ ರೋಡ್‌ವೇಸ್‌ನಲ್ಲಿ ಚಾಲಕರಾಗಿದ್ದರು. ಅವರ ಮನೆ ಮಹೇಂದ್ರಗಢ ಬೈಪಾಸ್‌ನಲ್ಲಿದೆ. ಬೆಳಗ್ಗೆ ಸ್ಕೂಟಿಯಲ್ಲಿ ಕರ್ತವ್ಯಕ್ಕೆ ತೆರಳಿದ್ದರು. ಅಜ್ಜಿ ಸಾವಿತ್ರಿ ದೇವಿಯು ಲೋಹರು ಚೌಕ್‌ನಲ್ಲಿರುವ ತನ್ನ ಕಿರಿಯ ಮಗನ ಮನೆಗೆ ಹೋಗಬೇಕಾಗಿತ್ತು. ಹೀಗಾಗಿ ಅವರು ಸಹ ಜೊತೆಗೆ ತೆರಳಿದ್ದರು.
ಇಬ್ಬರೂ ಕಲಿಯಾಣ ತಿರುವಿನಲ್ಲಿ ಬರುವಷ್ಟರಲ್ಲಿ ಎದುರಿನಿಂದ ಬ್ರೆಝ ಕಾರು ಬರುತ್ತಿರುವುದು ಕಾಣಿಸಿದೆ. ಕಾರು ರಾಂಗ್ ಸೈಡ್ ನಿಂದ ಬಂದಿದ್ದರಿಂದ ಏನೂ ಮಾಡಲು ಸಾಧ್ಯವಾಗಿರಲಿಲ್ಲ. ವಿಧಿಯಾಟ ಕಾರು ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಘಟನಾ ಸ್ಥಳದಲ್ಲಿದ್ದವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಒಂದೇ ಒಲಿಂಪಿಕ್ಸ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಕ್ಕೆ ಸ್ಪೂರ್ತಿ ಅವರ ಅಜ್ಜಿಯಾಗಿತ್ತು.
ಇದನ್ನೂ ಓದಿ: Champions Trophy 2025: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕೊನೆಯ ಜೊತೆಯಾಟ
ಸಾವಿತ್ರಿ ದೇವಿ ಕೂಡ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು. ಅಲ್ಲದೆ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದಿದ್ದರು. ಈ ಸ್ಪೂರ್ತಿಯಲ್ಲೇ ಬೆಳೆದ ಮನು ಭಾಕರ್ ಕೆಲ ದಿನಗಳ ಹಿಂದೆಯಷ್ಟೇ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದರು. ಈ ಖುಷಿಯ ಬೆನ್ನಲ್ಲೇ ಇದೀಗ ಇಡೀ ಕುಟುಂಬದಲ್ಲಿ ದುಃಖ ಆವರಿಸಿರುವುದು ಮಾತ್ರ ವಿಪರ್ಯಾಸ.