
ಭಾರತದ ಸ್ಟಾರ್ ಬಾಕ್ಸರ್ ಮೇರಿ ಕೋಮ್ ಅವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಅಲ್ಲದೆ ಮೇರಿ ಕೋಮ್ ತಮ್ಮ ಪತಿ ಕರುಂಗ್ ಓನ್ಲರ್ ಅವರಿಂದ ವಿಚ್ಛೇದನ ಪಡೆದಿದ್ದಾರೆ ಎಂಬ ವದಂತಿಯೂ ಕೇಳಿಬಂದಿತ್ತು. ಆದರೆ ಈ ಬಗ್ಗೆ ಮೇರಿ ಕೋಮ್ ಎಲ್ಲಿಯೂ ಸ್ಪಷ್ಟನೆ ನೀಡಿರಲಿಲ್ಲ. ಆದರೆ ಇಂದು ಅಂದರೆ ಏಪ್ರಿಲ್ 30 ರ ಬುಧವಾರದಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸುದೀರ್ಘವಾದ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಮೇರಿ ಕೋಮ್, ತಮ್ಮ ವಿಚ್ಛೇದನವನ್ನು ಘೋಷಿಸಿದ್ದಾರೆ.
ಬಾಕ್ಸರ್ ಮೇರಿ ಕೋಮ್ ಹಾಗೂ ಕರುಂಗ್ ಓನ್ಲರ್ ಇಬ್ಬರೂ 2005 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಆದರೀಗ ಮೇರಿ ಕೋಕ್ ತನ್ನ ಪತಿ ಓನ್ಲರ್ ಜೊತೆಗಿನ 20 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದ್ದಾರೆ. ಒಂದೆಡೆ 42 ವರ್ಷದ ಬಾಕ್ಸಿಂಗ್ ರಾಣಿ ಮೇರಿ ಕೋಮ್ ಬೇರೊಬ್ಬರೊಂದಿಗೆ ಸಂಬಂಧ ಹೊಂದಿದ್ದ್ದು, ಈ ಕಾರಣಕ್ಕಾಗಿಯೇ ವಿಚ್ಛೇದನವಾಗಿದೆ ಎಂದು ಹೇಳಲಾಗುತ್ತಿದ್ದರೆ, ಮತ್ತೊಂದೆಡೆ 2022 ರ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ ಅವರ ಪತಿ ಓನ್ಲರ್ ಸೋತ ನಂತರ ಇಬ್ಬರ ನಡುವಿನ ಸಂಬಂಧ ಹಳಸಲಾರಂಭಿಸಿತು. ಮೇರಿ ಕೋಮ್ ಅವರಿಗೆ ಇಷ್ಟವಿಲ್ಲದಿದ್ದರೂ ಅವರ ಪತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅಲ್ಲದೆ ದಂಪತಿಗಳು ಚುನಾವಣಾ ಪ್ರಚಾರಕ್ಕಾಗಿ 2-3 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದರು. ಇದರ ಹೊರತಾಗಿಯೂ ಓನ್ಲರ್ ಸೋತ ನಂತರ ಹಣಕಾಸಿನ ವಿಚಾರವಾಗಿ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎಂದು ಹೇಳಲಾಗುತ್ತಿದೆ.
To Whom It May Concern pic.twitter.com/AhY9zM9ccG
— Dr. M C Mary Kom OLY (@MangteC) April 30, 2025
ಮೇಲೆ ಹೇಳಿದಂತೆ ಮೇರಿ ಕೋಮ್, ತಮ್ಮ ಫೌಂಡೇಶನ್‌ನ ಅಧ್ಯಕ್ಷರಾಗಿರುವ ಹಿತೇಶ್ ಚೌಧರಿ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಇದೀಗ ಮೇರಿ ಕೋಮ್ ಈ ಎಲ್ಲಾ ವಿಷಯಗಳ ಬಗ್ಗೆ ಮೌನ ಮುರಿದಿದ್ದು, ‘ನಾನು ಹಿತೇಶ್ ಚೌಧರಿ ಅಥವಾ ಬೇರೆ ಯಾರೊಂದಿಗಾದರೂ ಡೇಟಿಂಗ್ ಮಾಡುತ್ತಿದ್ದೇನೆ ಎಂಬ ವದಂತಿಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ಸುಳ್ಳು. ನೀಡಿರುವ ನಿರ್ದೇಶನಗಳನ್ನು ಪಾಲಿಸದಿದ್ದರೆ, ಮಾನನಷ್ಟ ಮತ್ತು ಗೌಪ್ಯತೆ ಕಾನೂನುಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೇರಿ ಕೋಮ್ ಎಚ್ಚರಿಸಿದ್ದಾರೆ.
ಮೇರಿ ಕೋಮ್ ಭಾರತದ ಅತ್ಯಂತ ಯಶಸ್ವಿ ಮಹಿಳಾ ಬಾಕ್ಸರ್ಗಳಲ್ಲಿ ಮೊದಲಿಗರಾಗಿದ್ದಾರೆ. 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಮೇರಿ ಕೋಮ್, ಇಲ್ಲಿಯವರೆಗೆ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 6 ಚಿನ್ನದ ಪದಕಗಳು ಸೇರಿದಂತೆ ಒಟ್ಟು 8 ಪದಕಗಳನ್ನು ಗೆದ್ದಿದ್ದಾರೆ. ವಿಶೇಷವೆಂದರೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 6 ಚಿನ್ನದ ಪದಕಗಳನ್ನು ಗೆದ್ದ ವಿಶ್ವದ ಏಕೈಕ ಮಹಿಳಾ ಬಾಕ್ಸರ್ ಮೇರಿ ಕೋಮ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:32 pm, Wed, 30 April 25