ಮೆಸ್ಸಿ vs ಎಂಬಾಪೆ: ಫುಟ್​ಬಾಲ್ ಪ್ರೇಮಿಗಳ ಡ್ರೀಮ್ ಫೈನಲ್ ಲೆಕ್ಕಾಚಾರ!

FIFA World Cup 2026: ಒಂದೆಡೆ ಸೌತ್ ಅಮೆರಿಕದ ಅರ್ಜೆಂಟೀನಾ, ಮತ್ತೊಂದೆಡೆ ಯುರೋಪಿನ ಸ್ಪೇನ್, ಫ್ರಾನ್ಸ್ ಮತ್ತು ಇಂಗ್ಲೆಂಡ್. ಈ ನಾಲ್ಕು ತಂಡಗಳು ಈಗ ಫಿಫಾ ವಿಶ್ವಕಪ್ 2026ರ ಸೆಮಿಫೈನಲ್ ಮಹಾಸಮರದಲ್ಲಿ ಮುಖಾಮುಖಿಯಾಗಲು ಸಜ್ಜಾಗಿ ನಿಂತಿವೆ. ಇದು ಕೇವಲ ನಾಲ್ಕು ದೇಶಗಳ ನಡುವಿನ ಹೋರಾಟವಲ್ಲ, ಬದಲಾಗಿ ಸೌತ್ ಅಮೆರಿಕಾ ಮತ್ತು ಯುರೋಪಿಯನ್ ಪಡೆಗಳ ನಡುವಿನ ಮಹಾಯುದ್ಧವಾಗಿ ಬಿಂಬಿತವಾಗಿದೆ.

ಮೆಸ್ಸಿ vs ಎಂಬಾಪೆ: ಫುಟ್​ಬಾಲ್ ಪ್ರೇಮಿಗಳ ಡ್ರೀಮ್ ಫೈನಲ್ ಲೆಕ್ಕಾಚಾರ!
Lionel Messi Vs Kylian Mbappe
Image Credit source: Espn

Updated on: Jul 13, 2026 | 2:59 PM

ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯಂತ ರೋಮಾಂಚಕ ಘಟ್ಟವೊಂದಕ್ಕೆ ಜಾಗತಿಕ ಕ್ರೀಡಾಂಗಣ ಸಾಕ್ಷಿಯಾಗುತ್ತಿದೆ. ವಿಶ್ವದ ಅತ್ಯಂತ ಬಲಿಷ್ಠ ಹಾಗೂ ಅಗ್ರ ಶ್ರೇಯಾಂಕದ ನಾಲ್ಕು ತಂಡಗಳಾದ ಫ್ರಾನ್ಸ್, ಸ್ಪೇನ್, ಇಂಗ್ಲೆಂಡ್ ಮತ್ತು ಅರ್ಜೆಂಟಿನಾ ಫಿಫಾ ವಿಶ್ವಕಪ್​ 2026ರ ಸೆಮಿಫೈನಲ್ ಮಹಾಸಮರದಲ್ಲಿ ಮುಖಾಮುಖಿಯಾಗಲು ಸಜ್ಜಾಗಿ ನಿಂತಿವೆ.

4 ತಂಡಗಳ ಸಜ್ಜಾಗುವಿಕೆಯ ಬೆನ್ನಲ್ಲೇ ಫುಟ್​ಬಾಲ್ ಪ್ರೇಮಿಗಳು ಡ್ರೀಮ್ ಫೈನಲ್ ಲೆಕ್ಕಾಚಾರದಲ್ಲಿದ್ದಾರೆ. ಅಂದರೆ ಬಹುತೇಕರು ಫ್ರಾನ್ಸ್ ಮತ್ತು ಅರ್ಜೆಂಟೀನಾ ತಂಡಗಳ ನಡುವಣ ಫೈನಲ್ ಪಂದ್ಯವನ್ನು ಎದುರು ನೋಡುತ್ತಿದ್ದಾರೆ. ಆದರೆ ಅತ್ತ ಯುರೋಪಿಯನ್ ಪಡೆಗಳಾದ ಸ್ಪೇನ್ ಮತ್ತು ಇಂಗ್ಲೆಂಡ್ ಹೊಂದಿರುವ ರಣತಂತ್ರಗಳು, ‘ಎಂಬಾಪೆ vs ಮೆಸ್ಸಿ’ ಮುಖಾಮುಖಿಯ ಆ ಡ್ರೀಮ್ ಫೈನಲ್ ಕನಸನ್ನು ಭಂಗಗೊಳಿಸಲು ಸಜ್ಜಾಗಿವೆ.

ಮೆಸ್ಸಿ vs ಎಂಬಾಪೆ:

ಫುಟ್​ಬಾಲ್ ಪ್ರೇಮಿಗಳು ಫೈನಲ್​ ಮ್ಯಾಚ್​ನಲ್ಲಿ ಎಂಬಾಪೆ ಹಾಗೂ ಮೆಸ್ಸಿ ಮುಖಾಮುಖಿಯಾಗಬೇಕೆಂದು ಬಯಸಲು ಮುಖ್ಯ ಕಾರಣ ಗೋಲ್ಡನ್ ಬೂಟ್ ರೇಸ್. ಇದರ ಜೊತೆಗೆ ವಿಶ್ವ ದಾಖಲೆ. ಹಾಗೆಯೇ ಕಳೆದ ಬಾರಿಯ ಪ್ರತಿಕಾರ.

  • ಎಂಬಾಪೆ ಮತ್ತು ಮೆಸ್ಸಿ ಇಬ್ಬರೂ ತಲಾ 8 ಗೋಲು ಗಳಿಸಿ ಗೋಲ್ಡನ್ ಬೂಟ್ ರೇಸ್‌ನಲ್ಲಿ ಜಂಟಿಯಾಗಿ ಮುಂಚೂಣಿಯಲ್ಲಿದ್ದಾರೆ.
  • ವಿಶ್ವಕಪ್ ಇತಿಹಾಸದ ಒಟ್ಟು ಗೋಲುಗಳ ಪಟ್ಟಿಯಲ್ಲಿ ಮೆಸ್ಸಿ 21 ಗೋಲು ಗಳಿಸಿದ್ದರೆ, ಯುವ ತಾರೆ ಎಂಬಾಪೆ ಈಗಾಗಲೇ 20 ಗೋಲು ಗಳಿಸಿ ಮೆಸ್ಸಿಯ ಸನಿಹಕ್ಕೆ ಬಂದಿದ್ದಾರೆ.
  • 2022ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾ ತಂಡವು ಫ್ರಾನ್ಸ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಅಂತರದಿಂದ ಜಯಗಳಿಸಿ ವಿಶ್ವಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.

ಅಂದರೆ ಈ ಇಬ್ಬರು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾದರೆ ಗೋಲ್ಡನ್ ಬೂಟ್ ಪೈಪೋಟಿ ಮುಂದುವರೆಯಲಿದೆ. ಹಾಗೆಯೇ ಮೆಸ್ಸಿಯ ವಿಶ್ವ ದಾಖಲೆಯನ್ನು ಮುರಿಯುವ ಅವಕಾಶ ಎಂಬಾಪೆಗೆ ದೊರೆಯಲಿದೆ. ಇದರ ಜೊತೆ ಫ್ರಾನ್ಸ್ ತಂಡಕ್ಕೆ ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಳ್ಳಲು ಅವಕಾಶ ಕೂಡ ದೊರೆಯಲಿದೆ.

ಈ ಮೂರು ಪ್ರಮುಖ ಕಾರಣಗಳಿಂದಾಗಿ ಈ ಬಾರಿಯ ಫೈನಲ್ ಪಂದ್ಯವು ಮತ್ತಷ್ಟು ರೋಚಕವಾಗಲಿದೆ ಎಂಬುದು ಅಭಿಮಾನಿಗಳ ಅಂಬೋಣ. ಇದೇ ಕಾರಣಕ್ಕಾಗಿ ಜಗತ್ತಿನಾದ್ಯಂತ ಇರುವ ಫುಟ್​ಬಾಲ್ ಪ್ರೇಮಿಗಳು ಈ ‘ಡ್ರೀಮ್ ಫೈನಲ್’ ಮಹಾಸಮರವನ್ನು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.”

ದೈತ್ಯರ ನಡುವಣ ಬಲಾಬಲ:

ಸೆಮಿಫೈನಲ್ 1: ಫ್ರಾನ್ಸ್ vs ಸ್ಪೇನ್:

  • ಫ್ರಾನ್ಸ್ ಆಟದ ಶೈಲಿ (ವೇಗ ಮತ್ತು ಕೌಂಟರ್ ಅಟ್ಯಾಕ್): ಈ ಬಾರಿಯ ವಿಶ್ವಕಪ್​ನಲ್ಲಿ ಫ್ರಾನ್ಸ್ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿದೆ. ತಂಡದ ಶಕ್ತಿ ಇರುವುದು ಕೌಂಟರ್ ಅಟ್ಯಾಕ್‌ನಲ್ಲಿ. ಮಿಡ್ ಫೀಲ್ಡರ್​ಗಳಿಂದ ಚೆಂಡನ್ನು ಪಡೆದು ಏಕಾಏಕಿ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಎಂಬಾಪೆ, ಒಲಿಸೆ, ಡೆಂಬೆಲೆ ಫ್ರಾನ್ಸ್​ ತಂಡದ ಬಹುದೊಡ್ಡ ಶಕ್ತಿ.
  • ಸ್ಪೇನ್ ಆಟದ ಶೈಲಿ (ಟಿಕಿ-ಟಾಕಾ ತಂತ್ರ): ಸ್ಪೇನ್ ಸಾಂಪ್ರದಾಯಿಕ ‘ಟಿಕಿ-ಟಾಕಾ’ (ಕೇವಲ ಪಾಸ್‌ಗಳ ನಿಯಂತ್ರಣ) ತಂತ್ರದೊಂದಿಗೆ ಕಣಕ್ಕಿಳಿಯುತ್ತಿದೆ. ಇದರ ಜೊತೆಗೆ ನಾಕೌಟ್ ಹಂತದಲ್ಲಿ ಅತ್ಯಂತ ವೇಗದ ಮತ್ತು ಆಕ್ರಮಣಕಾರಿ ಶೈಲಿಯನ್ನು ಸಹ ಪ್ರದರ್ಶಿಸಿದೆ. ಹೀಗಾಗಿ ನಿರ್ಣಾಯಕ ಹಂತದಲ್ಲಿ ಟಿಕಿ-ಟಾಕಾ ಜೊತೆ ಸ್ಪೇನ್ ಪಡೆಯಿಂದ ಅದರಲ್ಲೂ ಯಮಾಲ್, ಟೊರೆಸ್ ಕಡೆಯಿಂದ ಕೌಂಟರ್ ಅಟ್ಯಾಕ್ ನಿರೀಕ್ಷಿಸಬಹುದು.

ಸೆಮಿಫೈನಲ್ 2: ಅರ್ಜೆಂಟಿನಾ vs ಇಂಗ್ಲೆಂಡ್:

  • ಅರ್ಜೆಂಟಿನಾ ಆಟದ ಶೈಲಿ (ಅಟ್ಯಾಕಿಂಗ್ ಮತ್ತು ಮೆಸ್ಸಿ ಮ್ಯಾಜಿಕ್): ಹಾಲಿ ಚಾಂಪಿಯನ್ ಅರ್ಜೆಂಟಿನಾ ಪ್ರತಿ ಪಂದ್ಯದಲ್ಲೂ ಅತ್ಯುತ್ತಮ ಹೋರಾಟದ ಗುಣ ಪ್ರದರ್ಶಿಸಿದೆ. ಇಡೀ ತಂಡ ಲಿಯೋನೆಲ್ ಮೆಸ್ಸಿಯ ಇಚ್ಛಾಶಕ್ತಿಯ ಮೇಲೆ ಸಾಗುತ್ತದೆ. ಮೆಸ್ಸಿ ಕೇವಲ ಗೋಲು ಹೊಡೆಯುವುದಲ್ಲದೆ, ಇತರೆ ಆಟಗಾರರಿಗೆ ಅದ್ಭುತ ಅವಕಾಶಗಳನ್ನು  ಸೃಷ್ಟಿಸಿಕೊಡುತ್ತಾರೆ. ಇದು ಅರ್ಜೆಂಟೀನಾ ತಂಡದ ಶಕ್ತಿಯಾಗಿ ಕಾಣಿಸಿಕೊಂಡಿದೆ.
  • ಇಂಗ್ಲೆಂಡ್ ಆಟದ ಶೈಲಿ (ರಕ್ಷಣಾತ್ಮಕತೆ ಮತ್ತು ಅಟ್ಯಾಕಿಂಗ್): ಇಂಗ್ಲೆಂಡ್ ಕ್ವಾರ್ಟರ್ ಫೈನಲ್‌ನಲ್ಲಿ ನಾರ್ವೆಯನ್ನು ಹೆಚ್ಚುವರಿ ಸಮಯದಲ್ಲಿ ಮಣಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದೆ. ಇಂಗ್ಲೆಂಡ್ ಈ ಬಾರಿ ಅತ್ಯಂತ ಶಿಸ್ತುಬದ್ಧ ರಕ್ಷಣಾ ಆಟವನ್ನು ಪ್ರದರ್ಶಿಸಿದೆ. ಇದರ ಜೊತೆ  ಜೂಡ್ ಬೆಲಿಂಗ್‌ಹ್ಯಾಮ್ ಮತ್ತು ಹ್ಯಾರಿ ಕೇನ್ ಅವರ ಕೌಂಟರ್ ಅಟ್ಯಾಕ್ ತಂಡದ ಶಕ್ತಿ ಎನ್ನಬಹುದು.

ಡ್ರೀಮ್ ಫೈನಲ್ ಲೆಕ್ಕಾಚಾರ!

ಫುಟ್​ಬಾಲ್ ಪ್ರೇಮಿಗಳ ಡ್ರೀಮ್ ಫೈನಲ್ ನಡೆಯಬೇಕಿದ್ದರೆ ಮುಂದಿನ ಪಂದ್ಯಗಳಲ್ಲಿ ಮೆಸ್ಸಿ ಪಡೆ ಮತ್ತು ಎಂಬಾಪೆ ಬಳಗ ಗೆಲ್ಲಬೇಕು. ಅಂದರೆ ಫ್ರಾನ್ಸ್ ತಂಡವು ಸ್ಪೇನ್‌ನ ಟಿಕಾ-ಟಾಕಾ ತಂತ್ರಕ್ಕೆ ಪತಿತಂತ್ರ ರೂಪಿಸಿ ಪಂದ್ಯ ಜಯ ಸಾಧಿಸಬೇಕು.  ಮತ್ತೊಂದೆಡೆ ಅರ್ಜೆಂಟಿನಾ ತಂಡವು ಇಂಗ್ಲೆಂಡ್‌ನ ಕಠಿಣ ರಕ್ಷಣಾ ಕೋಟೆಯನ್ನು ಭೇದಿಸಿ ಗೆಲುವು ದಾಖಲಿಸಿದೆ.

ಅಂದರೆ ಸೆಮಿಫೈನಲ್​ನಲ್ಲಿ ಇಂಗ್ಲೆಂಡ್ ಹಾಗೂ ಸ್ಪೇನ್ ತಂಡಗಳು ಸೋತರೆ ಮಾತ್ರ ಎಂಬಾಪೆ vs ಮೆಸ್ಸಿ ನಡುವಣ  ಡ್ರೀಮ್ ಫೈನಲ್ ವೀಕ್ಷಿಸುವ ಅವಕಾಶ ಫುಟ್​ಬಾಲ್​ ಪ್ರೇಮಿಗಳಿಗೆ ದೊರೆಯಲಿದೆ.

ಇದನ್ನೂ ಓದಿ: ಬ್ರಿಟಿಷ್ ಪ್ರಜೆಯಾಗಿ ಕೆರಿಯರ್ ಆರಂಭಿಸಿದ ಅಮೀರ್

ಹೀಗಾದಲ್ಲಿ, ಕಳೆದ 2022ರ ಫಿಫಾ ವಿಶ್ವಕಪ್ ಫೈನಲ್‌ನಂತೆ ಮತ್ತೊಮ್ಮೆ ಇಬ್ಬರು ಸಾರ್ವಕಾಲಿಕ ಶ್ರೇಷ್ಠ ಆಟಗಾರರ ನಡುವಿನ ‘ಮಹಾ ಕದನ’ಕ್ಕೆ ಕ್ರೀಡಾಲೋಕ ಸಾಕ್ಷಿಯಾಗಲಿದೆ.

ಸೆಮಿಫೈನಲ್ ಪಂದ್ಯಗಳ ವೇಳಾಪಟ್ಟಿ:

ಪಂದ್ಯ ದಿನಾಂಕ ಮುಖಾಮುಖಿ ಕ್ರೀಡಾಂಗಣ ಸಮಯ (IST)
ಸೆಮಿಫೈನಲ್ 1 15 ಜುಲೈ 2026 ಫ್ರಾನ್ಸ್ vs ಸ್ಪೇನ್ ಎಟಿ ಅ್ಯಂಡ್ ಟಿ ಸ್ಟೇಡಿಯಂ (ಡಲ್ಲಾಸ್) ಮಧ್ಯರಾತ್ರಿ 12:30 AM
ಸೆಮಿಫೈನಲ್ 2 16 ಜುಲೈ 2026 ಇಂಗ್ಲೆಂಡ್ vs ಅರ್ಜೆಂಟೀನಾ ಮರ್ಸಿಡಿಸ್-ಬೆಂಝ್ ಸ್ಟೇಡಿಯಂ (ಅಟ್ಲಾಂಟಾ) ಮಧ್ಯರಾತ್ರಿ 12:30 AM

ಫೈನಲ್ ಪಂದ್ಯ ಯಾವಾಗ?

ಎರಡು ಸೆಮಿಫೈನಲ್ ಪಂದ್ಯಗಳಲ್ಲಿ ಜಯಶಾಲಿಯಾಗುವ ತಂಡಗಳು ಜುಲೈ 19, 2026 ರಂದು ನ್ಯೂಜೆರ್ಸಿಯ ಪ್ರಸಿದ್ಧ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಭವ್ಯ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ.

 

Follow Us