Musa Yamak Death: ಸ್ಪರ್ಧೆ ಜಾರಿಯಲ್ಲಿರುವಾಗಲೇ ಎದುರಾಳಿಯ ಪ್ರಹಾರಕ್ಕೆ ಕುಸಿದು ಪ್ರಾಣ ಬಿಟ್ಟ ಬಾಕ್ಸರ್ ಸೋಲರಿಯದ ಸರದಾರನಾಗಿದ್ದರು!

Musa Yamak Death: ಸ್ಪರ್ಧೆ ಜಾರಿಯಲ್ಲಿರುವಾಗಲೇ ಎದುರಾಳಿಯ ಪ್ರಹಾರಕ್ಕೆ ಕುಸಿದು ಪ್ರಾಣ ಬಿಟ್ಟ ಬಾಕ್ಸರ್ ಸೋಲರಿಯದ ಸರದಾರನಾಗಿದ್ದರು!
ಮೂಸಾ ಯಮಕ್, ನತದೃಷ್ಟ ಬಾಕ್ಸರ್

2017 ರಿಂದ ವೃತ್ತಿಪರ ಬಾಕ್ಸರ್ ಅಗಿ ಗುರುತಿಸಿಕೊಂಡಿದ್ದ 38-ವರ್ಷ ವಯಸ್ಸಿನ ಮೂಸಾ ಇದುವೆರೆಗೆ ಅಜೇಯರಾಗಿದ್ದರು ಮತ್ತು ದುರದುಷ್ಟಕರ ಘಟನೆ ನಡೆದಾಗ ವಂಡೆರಾ ವಿರುದ್ಧ 84-ಕೆಜಿ ವಿಭಾಗದಲ್ಲಿ ಸೆಣಸುತ್ತಿದ್ದರು.

TV9kannada Web Team

| Edited By: Arun Belly

May 19, 2022 | 7:49 PM

ಒಬ್ಬ ವೃತ್ತಿಪರ ಬಾಕ್ಸರ್ ಫೈಟ್ ನಡೆಯುವಾಗ ರಿಂಗ್ ನಲ್ಲಿ ಸಾಯುವುದು ವಿರಳಾತಿ ವಿರಳ ಸಂದರ್ಭಗಳಲ್ಲಿ ಜರುಗಿದೆ. ಟರ್ಕಿ-ಜರ್ಮನ್ (Turkish-German) ಮೂಲದ ಬಾಕ್ಸರ್ ಮೂಸಾ ಯಮಕ್ (Musa Yamak) ಜರ್ಮನಿಯ ಮ್ಯೂನಿಕ್ ನಗರದಲ್ಲಿ ಉಗಾಂಡಾದ ಪ್ರತಿಸ್ಪರ್ಧಿ ಹಂಜಾ ವಂಡೆರಾ (Hamza Wandera) ಜೊತೆ ಸೆಣಸುವಾಗ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾರೆ. ಮೂಸಾ ಹೃದಯ ಬಡಿತ ಇದ್ದಕ್ಕಿದ್ದಂತೆ ನಿಂತು, ಉಸಿರುಗಟ್ಟಿದ್ದು ಬಾಕ್ಸರ್ ನ ಅಕಾಲಿಕ ಮರಣಕ್ಕೆ ಕಾರಣವೆಂದು ಹೇಳಲಾಗಿದೆ. ವಿಶ್ವ ಬಾಕ್ಸಿಂಗ್ ಫೆಡೆರೇಶನ್ ಅಯೋಜಿಸುವ ಹಲವಾರು ಚಾಂಪಿಯನ್ ಶಿಪ್ ಗಳನ್ನು ಗೆದ್ದಿದ್ದ ಮೂಸಾ, ಮೂರನೇ ಸುತ್ತಿನಲ್ಲಿ ಉಗಾಂಡಾದ ವಂಡೆರಾ ಅವರ ಒಂದು ಬಲವಾದ ಪ್ರಹಾರಕ್ಕೆ ಕುಸಿದುಬಿದ್ದರು. ಅದಾದ ಬಳಿಕ ಮೂಸಾ ನಾಲ್ಕನೇ ಸುತ್ತಿಗಾಗಿ ಎದ್ದು ನಿಂತರಾರದರೂ ರಿಂಗ್ ಬಾರಿಸುವ ಮೊದಲೇ ಮತ್ತೊಮ್ಮೆ ಕುಸಿದು ಬಿದ್ದರು.

ಬೌಟ್ ನಡೆಯುತ್ತಿದ್ದ ಸ್ಥಳದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಕೂಡಲೇ ಅವರನ್ನು ಸುತ್ತವರೆದು ಪ್ರಥಮ ಚಿಕಿತ್ಸೆ ನೀಡಿ ಉಸಿರಾಟದ ಪ್ರಕ್ರಿಯೆ ಪುನರ್ ಸ್ಥಾಪಿಸಲು ಪ್ರಯತ್ನಿಸಿದರು. ಬಳಿಕ ಅವರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತಾದರೂ ಅವರನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಹೃದಯಾಘಾತದಿಂದ ಮೂಸಾ ಮರಣ ಹೊಂದಿದ್ದಾರೆಂದು ಘೋಷಿಸಿದರು.

ಮೂಸಾ ಎರಡನೇ ಸಲ ನೆಲಕ್ಕೆ ಕುಸಿಯುತ್ತಿದ್ದಂತೆಯೇ ಸ್ಪರ್ಧೆ ನಡೆಯುತ್ತಿದ್ದ ಅರೇನಾದಲ್ಲಿ ದೊಂಬಿಯಂಥ ವಾತಾವರಣ ಸೃಷ್ಟಿಯಾಗಿತ್ತು.

‘ಭಾವೋದ್ರೇಕಕ್ಕೆ ಒಳಗಾಗಿದ್ದ ಮೂಸಾ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳು ವೈದ್ಯಕೀಯ ಸಿಬ್ಬಂದಿ ಮೇಲೆ ದಾಳಿ ನಡೆಸಲು ಮುಂದಾಗಿದ್ದರು. ಸಿಬ್ಬಂದಿಯ ರಕ್ಷಣೆಗಾಗಿ ನಾವು ಸಾಕಷ್ಟು ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆವು. ವೈದ್ಯಕೀಯ ಸಿಬ್ಬಂದಿ ನಿರಾತಂಕದಿಂದ ಕೆಲಸ ಮಾಡಲು ಸಾಧ್ಯವಾಗುವ ಹಾಗೆ ಅವರ ಸುತ್ತ ಭದ್ರತಾ ಸಿಬ್ಬಂದಿಯ ಕಾರಿಡಾರ್ ನಿರ್ಮಿಸಲಾಯಿತು,’ ಎಂದು ಮ್ಯೂನಿಕ್ ಪೊಲೀಸ್ ವ್ಯವಸ್ಥೆಯ ಒಬ್ಬ ವಕ್ತಾರ ಹೇಳಿದರು.

2017 ರಿಂದ ವೃತ್ತಿಪರ ಬಾಕ್ಸರ್ ಅಗಿ ಗುರುತಿಸಿಕೊಂಡಿದ್ದ 38-ವರ್ಷ ವಯಸ್ಸಿನ ಮೂಸಾ ಇದುವೆರೆಗೆ ಅಜೇಯರಾಗಿದ್ದರು ಮತ್ತು ದುರದುಷ್ಟಕರ ಘಟನೆ ನಡೆದಾಗ ವಂಡೆರಾ ವಿರುದ್ಧ 84-ಕೆಜಿ ವಿಭಾಗದಲ್ಲಿ ಸೆಣಸುತ್ತಿದ್ದರು.

‘ಮೂಸಾ ಮೇಲೆ ದೇವರ ದಯೆ ಇಲ್ಲದೆ ಹೋಯಿತು. ಅವರ ಕುಟುಂಬ ಮತ್ತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ,’ ಎಂದು ಟರ್ಕಿಷ್ ಅಧಿಕಾರಿ ಹಸನ್ ತುರಾನ್ ಹೇಳಿದ್ದಾರೆ.

ಟರ್ಕಿಯ ಅಲುಕ್ರಾ ಪ್ರಾಂತ್ಯದಲ್ಲಿ ಜನಿಸಿದ್ದ ಮೂಸಾ 75 ಪಂದ್ಯಗಳಲ್ಲಿ ಆಜೇಯಾರಾಗಿದ್ದರು. ಡಬ್ಲ್ಯೂ ಬಿ ಎಫ್ ಮತ್ತು ಜಿಬಿಯು ಚಾಂಪಿಯನ್ ಶಿಪ್ ಗಳನ್ನು ಗೆಲ್ಲುವುದರ ಜೊತೆಗೆ ಮೂಸಾ, ಏಷ್ಯಾ-ಯೂರೋಪ್ ಲೈಟ್ ಹೆವಿವೇಟ್ ಚಾಂಪಿಯನ್ ಕೂಡ ಆಗಿದ್ದರು. ಇಸ್ತಾನಬುಲ್ ನಲ್ಲಿ ನಡೆದ 2019 ಯೂರೋಪಿಯನ್ ಚಾಂಪಿಯನ್ ಶಿಪ್ ಗೆದ್ದ ಬಳಿಕ ಮೂಸಾ ಅವರನ್ನು ಜರ್ಮನಿಯ ಅತ್ಯಂತ ಅನುಭವಿ ಬಾಕ್ಸರ್ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು.

ಆರಡಿ ಎತ್ತರದ ಮೂಸಾ ತಮ್ಮ ವೈಯಕ್ತಿಕ ಬದುಕನ್ನು ಖಾಸಗಿಯಾಗೇ ಇಟ್ಟುಕೊಂಡಿದ್ದರು. ಅದು ಸರಿ, ರಿಂಗ್ ನಲ್ಲಿ ಉಂಟಾದ ಹೃದಯಾಘಾತ ಅವರನ್ನು ಬಾಕ್ಸಿಂಗ್ ವಿಶ್ವದಿಂದ ಕಸಿದುಕೊಂಡಿದ್ದು ಮಾತ್ರ ದೊಡ್ಡ ದುರಂತ.

ಇದನ್ನೂ ಓದಿ:  ಭಾರತದಿಂದ ಜಮೈಕಾಕ್ಕೆ ಕ್ರಿಕೆಟ್ ಕಿಟ್ ಉಡುಗೊರೆ: ಇದೊಂದು ಹೆಮ್ಮೆಯ ಕ್ಷಣ ಎಂದ ಜಮೈಕಾ ಕ್ರಿಕೆಟ್ ಮುಖ್ಯಸ್ಥ

Follow us on

Most Read Stories

Click on your DTH Provider to Add TV9 Kannada