ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷ ನರಿಂದರ್ ಬಾತ್ರಾ (Narinder Batra) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಐಒಎಗೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ 65 ವರ್ಷದ ಬಾತ್ರಾ ಅವರು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಕೌನ್ಸಿಲ್ ಸದಸ್ಯ ಸ್ಥಾನದಿಂದಲೂ ಕೆಳಗಿಳಿದಿದ್ದಾರೆ. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಅಂತರರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಹೆಚ್) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಅಂದರೆ ನಿಮಿಷಗಳ ಅಂತರದಲ್ಲಿ ನರಿಂದರ್ ಬಾತ್ರಾ ಕ್ರೀಡಾ ಕ್ಷೇತ್ರದ ಮೂರು ಪ್ರಮುಖ ಸ್ಥಾನಗಳಿಂದ ಕೆಳಗಿಳಿದಿದ್ದಾರೆ.
ವೈಯಕ್ತಿಕ ಕಾರಣಗಳಿಂದಾಗಿ, ನಾನು 2017 ರಲ್ಲಿ ಆಯ್ಕೆಯಾದ ಅಧ್ಯಕ್ಷ ಸ್ಥಾನಕ್ಕೆ ನನ್ನ ರಾಜೀನಾಮೆಯನ್ನು ಸಲ್ಲಿಸುತ್ತೇನೆ. ನಿಮ್ಮ ಬೆಂಬಲ ಮತ್ತು ಮಾರ್ಗದರ್ಶನಕ್ಕಾಗಿ ಧನ್ಯವಾದಗಳು ಎಂದು ರಾಜೀನಾಮೆ ಪತ್ರದಲ್ಲಿ ಬಾತ್ರಾ ಉಲ್ಲೇಖಿಸಿದ್ದಾರೆ. ಇದಾಗ್ಯೂ ಏಕಾಏಕಿ ಮೂರು ಪ್ರಮುಖ ಹುದ್ದೆಗಳಿಂದ ಕೆಳಗಿಳಿಯಲು ಅಸಲಿ ಕಾರಣವೇನು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ಕಳೆದ ಕೆಲ ತಿಂಗಳಿಂದ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು.
ಏಕೆಂದರೆ ಕಳೆದ ತಿಂಗಳಷ್ಟೇ ನರೀಂದರ್ ಬಾತ್ರಾ ಅವರಿಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ನಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸದಂತೆ ದೆಹಲಿ ಹೈಕೋರ್ಟ್ ಸೂಚಿಸಿತ್ತು. ಅಲ್ಲದೆ ತಮ್ಮ ಉನ್ನತ ಹುದ್ದೆಯನ್ನು ತ್ಯಜಿಸುವಂತೆ ಆದೇಶಿಸಲಾಗಿತ್ತು. ಇದಾಗ್ಯೂ ಬಾತ್ರಾ ತಮ್ಮ ಸ್ಥಾನದಲ್ಲೇ ಮುಂದುವರೆದಿದ್ದರು.
2016 ರಲ್ಲಿ ಅಂತರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್‌ಐಹೆಚ್) ಮುಖ್ಯಸ್ಥರಾಗಿದ್ದ ಬಾತ್ರಾ ಕಳೆದ ವರ್ಷ ಎರಡನೇ ಅವಧಿಗೆ ಆಯ್ಕೆಯಾಗಿದ್ದರು. ಆದರೆ ಪ್ರಮುಖ ಹುದ್ದೆಗೇರಲು ಬಾತ್ರಾ ಚುನಾವಣೆಯಲ್ಲಿ ಅಕ್ರಮಗಳು ಮತ್ತು ಸುಳ್ಳು ಆಶ್ವಾಸನೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಹಾಗೆಯೇ ಹಾಕಿ ಇಂಡಿಯಾದ ಫಂಡ್ನಿಂದ 35 ಲಕ್ಷ ರೂ. ಅನ್ನು ಬಾತ್ರಾ ವೈಯಕ್ತಿಕ ಪ್ರಯೋಜನಗಳಿಗಾಗಿ ಖರ್ಚು ಮಾಡಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಅವರ ಪದಚ್ಯುತಿಗೆ ಕೆಲ ಸದಸ್ಯರು ಕೂಡ ಆಗ್ರಹಿಸಿದ್ದರು. ಇದಾಗ್ಯೂ ಬಾತ್ರಾ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಲು ಮುಂದಾಗಿರಲಿಲ್ಲ.
ಹೀಗಾಗಿ ಒಲಿಂಪಿಕ್ ಅಸೋಸಿಯೇಷನ್ ಹಾಗೂ ಹಾಕಿ ಫೆಡರೇಷನ್ನ ಕೆಲ ಸದಸ್ಯರು ಕೋರ್ಟ್ ಮೊರೆ ಹೋಗಿದ್ದರು. ಒಲಿಂಪಿಯನ್ ಮತ್ತು ಹಾಕಿ ವಿಶ್ವಕಪ್ ವಿಜೇತ ತಂಡದ ಆಟಗಾರ ಅಸ್ಲಾಂ ಶೇರ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಕಳೆದ ತಿಂಗಳು ಬಾತ್ರಾ ಅವರಿಗೆ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸದಂತೆ ಸೂಚಿಸಿತ್ತು. ಅಲ್ಲದೆ 65 ವರ್ಷದ ಬಾತ್ರಾ ಅವರ ಲೈಫ್ ಮೆಂಬರ್ ಹುದ್ದೆಯನ್ನು ಸಹ ದೆಹಲಿ ಹೈಕೋರ್ಟ್ ರದ್ದುಗೊಳಿಸಿತ್ತು.
ಅಂದರೆ ಲೈಫ್ ಟೈಮ್ ಮೆಂಬರ್ ಆಯ್ಕೆಯ ಮೂಲಕ 65ನೇ ವಯಸ್ಸಿನಲ್ಲೂ ಕ್ರೀಡಾ ಕ್ಷೇತ್ರದ ಪ್ರಮುಖ ಹುದ್ದೆಯಲ್ಲಿ ಮುಂದುವರೆಯಲು ಬಾತ್ರಾ ಬಯಸಿದ್ದರು ಎನ್ನಲಾಗಿದೆ. ಆದರೆ ಇತ್ತ ಹೈಕೋರ್ಟ್ ತೀರ್ಪು ನರಿಂದರ್ ಬಾತ್ರಾ ವಿರುದ್ದ ಬಂದ ಹಿನ್ನೆಲೆಯಲ್ಲಿ ಇದೀಗ ಮೂರು ಪ್ರತ್ಯೇಕ ಪತ್ರಗಳ ಮೂಲಕ ಕ್ರಮವಾಗಿ IOA, IOC ಮತ್ತು FIH ನ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
Published On - 1:44 pm, Mon, 18 July 22