Rishabh Pant: ವಿಶೇಷ ಉಡುಗೊರೆಯನ್ನು ಮಾಜಿ ಕೋಚ್ಗೆ ನೀಡಿದ ಪಂತ್
Ravi Shastri: ಗೆಲುವಿನ ಶ್ರೇಯಸ್ಸನ್ನು ಬೌಲರ್ ಗೆ ಸಲ್ಲಿಸಿದ ರಿಷಭ್ ಪಂತ್, ಪಿಚ್ ಬ್ಯಾಟ್ ಮಾಡಲು ಉತ್ತಮವಾಗಿತ್ತು. ಇದಾಗ್ಯೂ ನಮ್ಮ ಬೌಲರ್‌ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು.
ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ (India vs England) ತಂಡವನ್ನು ಸೋಲಿಸಿ ಭಾರತ ತಂಡವು 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಟೀಮ್ ಇಂಡಿಯಾದ ಈ ಗೆಲುವಿನಲ್ಲಿ ರಿಷಬ್ ಪಂತ್ (Rishabh Pant) ಪ್ರಮುಖ ಪಾತ್ರ ವಹಿಸಿದ್ದರು. 125 ರನ್ ಗಳ ಅಜೇಯ ಇನಿಂಗ್ಸ್ ಆಡಿದ್ದ ಪಂತ್ ತಂಡಕ್ಕೆ ಸುಲಭ ಜಯ ತಂದುಕೊಟ್ಟಿದ್ದರು. ಅಲ್ಲದೆ ನಿರೀಕ್ಷೆಯಂತೆ ರಿಷಭ್ ಪಂತ್ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಕೂಡ ಲಭಿಸಿದೆ. ಪ್ರಶಸ್ತಿ ಮೊತ್ತದೊಂದಿಗೆ ಶಾಂಪೇನ್ ಪಡೆದ ಬಾಟಲಿಯನ್ನು ಪಂತ್ ಡ್ರೆಸ್ಸಿಂಗ್ ರೂಮ್ ಗೆ ತೆಗೆದುಕೊಂಡು ಹೋಗಿರಲಿಲ್ಲ ಎಂಬುದು ವಿಶೇಷ.
ಹೌದು, ತನಗೆ ಸಿಕ್ಕ ಶಾಂಪೇನ್ ಬಾಟಲ್ ಅನ್ನು ರಿಷಭ್ ಪಂತ್ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಅವರಿಗೆ ನೀಡಿದ್ದಾರೆ. ಡ್ರೆಸ್ಸಿಂಗ್ ರೂಮ್ ಗೆ ತೆರಳುವ ಮುನ್ನ ಮೈದಾನದಲ್ಲಿ ಕಾಮೇಂಟೇಟರ್ ಆಗಿ ಕಾಣಿಸಿಕೊಂಡಿದ್ದ ಶಾಸ್ತ್ರಿಯನ್ನು ಭೇಟಿ ಮಾಡಿದ ಪಂತ್ ಅವರನ್ನು ತಬ್ಬಿಕೊಂಡರು. ಅಲ್ಲದೆ ಇಬ್ಬರೂ ಸ್ವಲ್ಪ ಹೊತ್ತು ಕುಶಲೋಪರಿ ನಡೆಸಿದರು.
ಆ ಬಳಿಕ ಶಾಂಪೇನ್ ಬಾಟಲಿಯನ್ನು ಶಾಸ್ತ್ರಿ ಅವರಿಗೆ ನೀಡುವ ಮೂಲಕ ರಿಷಭ್ ಪಂತ್ ತೆರಳಿದರು. ಇತ್ತ ಸ್ಟೇಡಿಯಂನಲ್ಲಿ ಕುಳಿತಿದ್ದ ಪ್ರೇಕ್ಷಕರು ಕೂಡ ಈ ಕ್ಷಣವನ್ನು ಆನಂದಿಸಿದರು. ಅಲ್ಲದೆ ಪಂತ್ ಶಾಂಪೇನ್ ಬಾಟಲಿಯನ್ನು ನೀಡುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಘಾತ ಮುಗಿಲು ಮುಟ್ಟಿತ್ತು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Pant offering his champagne to Ravi Shastri#INDvENG #OldTrafford #Pant #TeamIndia pic.twitter.com/n9HguNNuID
— Tejesh R. Salian (@tejrsalian) July 17, 2022
ಇನ್ನು ಈ ಪಂದ್ಯದ ಬಳಿಕ ಮಾತನಾಡಿದ ಪಂತ್, ಈ ಇನಿಂಗ್ಸ್ ಅನ್ನು ನಾನು ನನ್ನ ಜೀವನದುದ್ದಕ್ಕೂ ನೆನಪಿಟ್ಟುಕೊಳ್ಳುತ್ತೇನೆ. ತಂಡವು ಒತ್ತಡದಲ್ಲಿರುವಾಗ ಮತ್ತು ಈ ರೀತಿಯಾಗಿ ಬ್ಯಾಟ್ ಮಾಡುವುದು ಒಳ್ಳೆಯದು. ನಾನು ಯಾವಾಗಲೂ ಬಿರುಸಿನ ಬ್ಯಾಟಿಂಗ್ ಮಾಡಬೇಕೆಂದು ಯೋಚಿಸಿದ್ದೆ. ಹೀಗಾಗಿ ಉತ್ತಮ ಇನಿಂಗ್ಸ್ ಮೂಡಿಬಂತು. ಇನ್ನು ನಾನು ಯಾವಾಗಲೂ ಇಂಗ್ಲೆಂಡ್‌ನಲ್ಲಿ ಆಡುವುದನ್ನು ಆನಂದಿಸುತ್ತೇನೆ ಎಂದು ಪಂತ್ ಹೇಳಿದರು.
ಇನ್ನು ಗೆಲುವಿನ ಶ್ರೇಯಸ್ಸನ್ನು ಬೌಲರ್ ಗೆ ಸಲ್ಲಿಸಿದ ರಿಷಭ್ ಪಂತ್, ಪಿಚ್ ಬ್ಯಾಟ್ ಮಾಡಲು ಉತ್ತಮವಾಗಿತ್ತು. ಇದಾಗ್ಯೂ ನಮ್ಮ ಬೌಲರ್‌ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. ಇಂಗ್ಲೆಂಡ್ ಅನ್ನು ಕಡಿಮೆ ಸ್ಕೋರ್‌ಗೆ ನಿರ್ಬಂಧಿಸಿದ್ದರು. ಕೇವಲ ಮೂರನೇ ಪಂದ್ಯದಲ್ಲಿ ಮಾತ್ರವಲ್ಲದೆ ಸರಣಿಯುದ್ದಕ್ಕೂ ನಮ್ಮ ಬೌಲಿಂಗ್ ಉತ್ತಮವಾಗಿತ್ತು ಎಂದು ರಿಷಭ್ ಪಂತ್ ಬೌಲರ್ ಗಳ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Published On - 1:55 pm, Mon, 18 July 22