ಸ್ವಿಟ್ಜರ್ಲೆಂಡ್‌ನ ಲೂಝನ್ನಲ್ಲಿ ನಡೆದ ಡೈಮಂಡ್ ಲೀಗ್ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 89.45 ಮೀಟರ್ ಭರ್ಜಿ ಎಸೆದು ಬೆಳ್ಳಿ ಪದಕ ಗೆದ್ದಿದ್ದ ನೀರಜ್ ಈ ಬಾರಿ 89.49 ಮೀಟರ್ ದೂರಕ್ಕೆ ಎಸೆಯುವಲ್ಲಿ ಯಶಸ್ವಿಯಾದರು. ಇದಾಗ್ಯೂ ತಮ್ಮ ಬಹುಕಾಲ ಕನಸು 90 ಮೀಟರ್ ಮುಟ್ಟುವಲ್ಲಿ ವಿಫಲರಾಗಿದ್ದಾರೆ.
ಇನ್ನು ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದ 26ರ ಹರೆಯದ ಗ್ರೆನಡಾದ ಅ್ಯಂಡರ್ಸನ್ ಪೀಟರ್ಸ್ ಅವರು 90.81 ಮೀಟರ್ ದೂರಕ್ಕೆ ಎಸೆಯುವ ಮೂಲಕ ಅಗ್ರಸ್ಥಾನ ಪಡೆದರು. ಹಾಗೆಯೇ ನೀರಜ್ ಚೋಪ್ರಾ ದ್ವಿತೀಯ ಸ್ಥಾನ ಪಡೆದರೆ, ಜರ್ಮನಿಯ ಜೂಲಿಯನ್ ವೆಬರ್ 87.08 ಮೀಟರ್ ಎಸೆದು ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.
ವಿಶೇಷ ಎಂದರೆ 89.49 ಮೀಟರ್ ದೂರಕ್ಕೆ ಎಸೆಯುವ ಮೂಲಕ ನೀರಜ್ ಚೋಪ್ರಾ ಈ ಸೀಸನ್ನ ಬೆಸ್ಟ್ ಥ್ರೋ ಎಸೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ 90 ಮೀಟರ್ನ ಅಸುಪಾಸು ತಲುಪಿರುವ ಭಾರತೀಯ ತಾರೆ ಮುಂಬರುವ ದಿನಗಳಲ್ಲಿ ಹೊಸ ಮೈಲುಗಲ್ಲನ್ನು ದಾಟುವ ವಿಶ್ವಾಸ ಮೂಡಿಸಿದ್ದಾರೆ.
2022 ರಲ್ಲಿ ನಡೆದ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ 89.94 ಮೀಟರ್ ದೂರಕ್ಕೆ ಎಸೆದಿದ್ದರು. ಇದು ಅವರು ಕೆರಿಯರ್ ಬೆಸ್ಟ್ ಥ್ರೋ ಆಗಿದೆ. ಇದೀಗ ಮತ್ತೊಮ್ಮೆ 89 ಮೀಟರ್ಗೂ ಅಧಿಕ ದೂರಕ್ಕೆ ಎಸೆದು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಡೈಮಂಡ್ ಲೀಗ್ನಲ್ಲಿ ನೀರಜ್ ಚೋಪ್ರಾ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಮೊದಲ ಎಸೆತದಲ್ಲಿ ಕೇವಲ 82.10 ದೂರಕ್ಕೆ ಎಸೆಯಲಷ್ಟೇ ಶಕ್ತರಾಗಿದ್ದರು. ಅಲ್ಲದೆ ಐದನೇ ಎಸೆತದವರೆಗೆ ಅವರು 86 ಮೀಟರ್ ದೂರವನ್ನು ಕ್ರಮಿಸಿರಲಿಲ್ಲ. ಆದರೆ ನಿರ್ಣಾಯಕವಾಗಿದ್ದ ಕೊನೆಯ ಪ್ರಯತ್ನದಲ್ಲಿ ಭರ್ಜಿಯನ್ನು 89.49 ಮೀಟರ್ ದೂರಕ್ಕೆ ತಲುಪಿಸಿ ದ್ವಿತೀಯ ಸ್ಥಾನ ಪಡೆಯುವಲ್ಲಿ ಸಫಲರಾದರು.
ಡೈಮಂಡ್ ಲೀಗ್ನಲ್ಲಿ 90.61 ಮೀಟರ್ ದೂರಕ್ಕೆ ಎಸೆಯುವ ಮೂಲಕ ಅಗ್ರಸ್ಥಾನ ಪಡೆದಿರುವ ಅ್ಯಂಡರ್ಸನ್ ಪೀಟರ್ಸ್ ಹೊಸ ದಾಖಲೆ ಬರೆದಿದ್ದಾರೆ. ಈ ಲೀಗ್ನಲ್ಲಿ ಈ 2015 ರಲ್ಲಿ ಕೆಶೋರ್ನ್ ವಾಲ್ಕಾಟ್ 90.16 ಮೀ. ದೂರಕ್ಕೆ ಭರ್ಜಿ ಎಸೆದು ದಾಖಲೆ ನಿರ್ಮಿಸಿದ್ದರು. ಇದೀಗ 90.61 ಮೀಟರ್ನೊಂದಿಗೆ ಪೀಟರ್ಸ್ ಹೊಸ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.