ಭಾರತ ಮತ್ತು ಶ್ರೀಲಂಕಾ ನಡುವೆ ಮೂರು-ಪಂದ್ಯಗಳ ಒಡಿಐ ಸರಣಿ ನಾಳೆ (ರವಿವಾರ) ಆರಂಭವಾಗಲಿದ್ದು ದೆಹಲಿ ಎಡಚ ಶಿಖರ್ ಧವನ್ ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತ ಸೀನಿಯರ್ ಟೀಮು ಇಂಗ್ಲೆಂಡ್ ಪ್ರವಾಸದಲ್ಲಿರುವುದರಿಂದ ಪ್ರಮುಖ ಆಟಗಾರರಿಲ್ಲದ ಮತ್ತೊಂದು ತಂಡವನ್ನು ದ್ವೀಪರಾಷ್ಟ್ರಕ್ಕೆ ಕಳಿಸಲಾಗಿದೆ. ಇಂಗ್ಲೆಂಡ್ ವಿರುದ್ಧ ಸರಣಿ ಆರಂಭಗೊಳ್ಳಲು ಇನ್ನು ಎರಡು ವಾರಗಳಿಗಿಂತ ಹೆಚ್ಚು ಸಮಯವಿರುವುದರಿಂದ ಎಲ್ಲರ ಕಣ್ಣು ಲಂಕಾ ಸರಣಿ ಮೇಲಿದೆ. ಸೀನಿಯರ್ ಟೀಮಿಗೆ ಕೇವಲ ಸೀಮಿತ ಓವರ್ಗಳ ಕ್ರಿಕೆಟ್ಗೆ ಮಾತ್ರ ಆಯ್ಕೆಯಾಗುತ್ತಿರುವ ಧವನ್ಗೆ ತಮ್ಮಲ್ಲಿ ಇನ್ನೂ ಸಾಮರ್ಥ್ಯ ಅಡಗಿಲ್ಲ ಅಂತ ತೋರಿಸಲು ಇದು ಉತ್ತಮ ಅವಕಾಶ. ಆದರೆ ಗಮನಿಸಬೇಕಿರುವ ಅಂಶವೆಂದರೆ, ಆರಂಭ ಆಟಗಾರರನ ಸ್ಥಾನಕ್ಕೆ ಯುವ ಆಟಗಾರರ ದಂಡೇ ಲಗ್ಗೆಯಿಟ್ಟಿದೆ.
ಒಬ್ಬ ಬ್ಯಾಟ್ಸ್ಮನ್ ಆಗಿ ಧವನ್ ಈ ಸರಣಿಯಲ್ಲಿ ಹಲವು ಸಾಧನೆಗಳನ್ನು ಮಾಡುವ ಅವಕಾಶ ಹೊಂದಿರುವುದು ಸತ್ಯ. ನಾಳೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಅವರು 23 ರನ್ಗಳಿಸಿದರೆ, ಈ ಆವೃತ್ತಿಯಲ್ಲಿ 6,000 ರನ್ ಗಳಿಸಿದ 10 ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಅವರು ಅತಿ ವೇಗದಲ್ಲಿ 6,000 ರನ್ ಪೂರೈಸಿ ಎರಡನೇ ಆಟಗಾರರ ಎನಿಸಿಕೊಳ್ಳಲಿದ್ದಾರೆ.
ಭಾರತದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಅವರ ದಾಖಲೆಯನ್ನು ಉತ್ತಮ ಪಡಿಸುವ ಅವಕಾಶವೂ ಧವನ್ಗಿದೆ. ಗಂಗೂಲಿ 147 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದರೆ, ಧವನ್ಗೆ ನಾಳೆಯದ್ದು 140 ನೇ ಇನ್ನಿಂಗ್ಸ್ ಆಗಲಿದೆ. ಅಂದಹಾಗೆ, ಟೀಮ್ ಇಂಡಿಯಾ ನಾಯಕ ಕೊಹ್ಲಿ ಕೇವಲ 136 ನೇ ಇನ್ನಿಂಗ್ಸ್ನಲ್ಲಿ 6,000 ರನ್ ಗಡಿ ದಾಟಿದರು.
ಒಟ್ಟಾರೆಯಾಗಿ ಅಂದರೆ ವಿಶ್ವದ ಬೇರೆ ಬ್ಯಾಟ್ಸ್ಮನ್ಗಳ ದಾಖಲೆಗಳನ್ನು ಸಹ ಲೆಕ್ಕಕ್ಕೆ ತೆಗದುಕೊಂಡರೆ, ಧವನ್ ಅತಿ ವೇಗವಾಗಿ 6,000 ರನ್ ಪೂರೈಸಿದ ವಿಶ್ವದ ನಾಲ್ಕನೇ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದ್ದಾರೆ. ದಕ್ಷಿಣ ಆಫ್ರಿಕಾದ ಹಶೀಮ್ ಅಮ್ಲಾ 123, ಕೊಹ್ಲಿ 136 ಮತ್ತು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ 139 ಇನ್ನಿಂಗ್ಸ್ಗಳಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.
ನಾಳಿನ ಪಂದ್ಯದಲ್ಲಿ ಧವನ್ ಬೇರೆ ದಾಖಲೆಗಳನ್ನು ಮಾಡುವ ಅವಕಾಶವನ್ನೂ ಹೊಂದಿದ್ದಾರೆ.
36ನೇ ವಯಸ್ಸಿನಲ್ಲಿ ನಾಯಕತ್ವಕ್ಕೆ ಪಾದಾರ್ಪಣೆ ಮಾಡುವ ಮೂಲಕ ಒಡಿಐ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಅತಿ ಹಿರಿಯ ನಾಯಕನೆಂಬ ಖ್ಯಾತಿಗೆ ಅವರು ಪಾತ್ರರಾಗಲಿದ್ದಾರೆ.
ಒಂದು ದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿದ 25 ನೇ ಆಟಗಾರ ಧವನ್ ಆಗಲಿದ್ದಾರೆ
ನಾಳೆ ಅವರು 17 ರನ್ ಗಳಿಸಿದರೆ ಒಡಿಐಗಳಲ್ಲಿ ಶ್ರೀಲಂಕಾ ವಿರುದ್ಧ 1000 ರನ್ ಬಾರಿಸಿದ ಹಿರಿಮೆಗೆ ಪಾತ್ರರಾಗಲಿದ್ದಾರೆ. ಈ ದೇಶದ ವಿರುದ್ಧ ಅತಿ ವೇಗವಾಗಿ ಈ ದಾಖಲೆ ಮಾಡಿದ ದಾಖಲೆಯೂ ಧವನ್ ಹೆಸರಿಗೆ ಸೇರಲಿದೆ.
ಧವನ್ ನಾಳೆ 35 ರನ್ ಗಳಿಸಿದರೆ, 10,000 ಅಂತರರಾಷ್ಟ್ರೀಯ ರನ್ ಪೂರೈಸಿದ ಭಾರತದ 14 ನೇ ಆಟಗಾರನಾಗಲಿದ್ದಾರೆ.
ಇದನ್ನೂ ಓದಿ: India vs Sri lanka: ಹಾರ್ದಿಕ್-ಧವನ್ ಅಲ್ಲ: ಲಂಕಾ ಸರಣಿಯಲ್ಲಿ ಟೀಮ್ ಇಂಡಿಯಾದ ಗೇಮ್ ಚೇಂಜರ್ ಈತನಂತೆ!
Published On - 8:35 am, Sun, 18 July 21