ಇದೇ ಮೇ 11ರಿಂದ 22 ರ ವರೆಗೆ ಮಣಿಪುರದ ಇಂಫಾಲ್‍ನಲ್ಲಿ ನಡೆಯುವ ಮಹಿಳೆಯರ 12ನೇ ಹಾಕಿ (Hockey) ಇಂಡಿಯಾ ಸಬ್ ಜೂನಿಯರ್ಸ್ ನ್ಯಾಷನಲ್ ಟೂರ್ನಿಗೆ ಹಾಸನ(Hassan) ಜಿಲ್ಲೆಯ ಏಳು ಆಟಗಾರ್ತಿಯರು ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕದ ಆಯ್ಕೆಯಾದ ತಂಡದಲ್ಲಿ ಹಾಸನ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ತರಬೇತಿ ಪಡೆಯುತ್ತಿರುವ ಆಟಗಾರರಾದ ಹರ್ಷಿತಾ, ಮೇಘಾವತಿ, ಯಮುನಾ, ಸುಪ್ರಿತಾ, ಸೌಮ್ಯಾ ಮತ್ತು ಚತುರ್ಥಿ ಆಯ್ಕೆಯಾಗಿದ್ದಾರೆ. ಇವರೆಲ್ಲ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಾಗಿದ್ದು, ರಾಯಲ್ ಅಪೊಲೋ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾ ಹಾಕಿ ತರಬೇತಿ ಪಡೆಯುತ್ತಿರುವ ದ್ರವ್ಯ ಎಂ. ಗೌಡ ಪಾರಮ್ಯಮೆರೆಯಲು ಸಿದ್ಧರಾಗಿದ್ದಾರೆ.
ಈ ಬಗ್ಗೆ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ.ಹರೀಶ್, ಇದಕ್ಕೆ ತರಬೇತುದಾರ ರವೀಶ್ ಅವರ ಪರಿಶ್ರಮ ಕಾರಣ ಎಂದು ತಿಳಿಸಿದ್ದು, ಇಂಡಿಯಾ ಸಬ್ ಜೂನಿಯರ್ಸ್ ನ್ಯಾಷನಲ್ ಟೂರ್ನಿಯಲ್ಲಿ ಕರ್ನಾಟಕ ಗೆದ್ದು ಬರಲಿ ಎಂದು ಹಾರೈಸಿದ್ದಾರೆ.
ಹುಬ್ಬಳ್ಳಿಯ ಮನೋಜ ಆಯ್ಕೆ:
ಹುಬ್ಬಳ್ಳಿಯ ಬೆಂಗೇರಿ ನಿವಾಸಿ ಮನೋಜ ಅಶೋಕ ವಾಲ್ಮೀಕಿ ಗೋವಾದಲ್ಲಿ ನಡೆದಿರುವ 12ನೇ ಹಾಕಿ ಇಂಡಿಯಾ ಸಬ್ ಜ್ಯೂನಿಯರ್ ಪುರುಷರ ವಿಭಾಗದ ರಾಷ್ಟ್ರೀಯ ಚಾಂಪಿಯನ್‍ಶಿಪ್ -2022 ಹಾಕಿ ಪಂದ್ಯಾವಳಿಯ ಕರ್ನಾಟಕ ತಂಡದ ಪ್ರಮುಖ ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಕೊಡಗು ಜಿಲ್ಲೆಯ ಕುಡಿಗೆ ಕ್ರೀಡಾ ಶಾಲೆಯ ವಿದ್ಯಾರ್ಥಿಯಾಗಿರುವ ಮನೋಜ ವಾಲ್ಮೀಕಿ ಹಾಕಿ ಆಟದಲ್ಲಿ ತಾನು ಸಾಧಿಸಿರುವ ಚಾಕಚಕ್ಯತೆ ಹಾಗೂ ಪಾರಮ್ಯದಿಂದ ರಾಷ್ಟ್ರೀಯ ಮಟ್ಟದ ಇಂತಹ ಹಾಕಿ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಕಾರಣವಾಗಿದೆ.
ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:44 am, Fri, 6 May 22