GT vs MI, IPL 2022: ಗುಜರಾತ್ಗೆ ಶಾಕ್ ನೀಡುತ್ತಾ ಮುಂಬೈ?: ಅರ್ಜುನ್ ತೆಂಡೂಲ್ಕರ್ ಪದಾರ್ಪಣೆ ಸಾಧ್ಯತೆ
ಐಪಿಎಲ್ನಲ್ಲಿಂದು ಗುಜರಾತ್ ಟೈಟಾನ್ಸ್ ಹಾಗೂ ಈಗಾಗಲೇ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿರುವ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ (GT vs MI) ತಂಡಗಳು ಮುಖಾಮುಖಿ ಆಗಲಿದೆ. ಜಿಟಿ ಇಂದಿನ ಪಂದ್ಯ ಗೆದ್ದರೆ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡವಾಗಲಿದೆ.
ಐಪಿಎಲ್ನಲ್ಲಿಂದು ಮಹತ್ವದ ಪಂದ್ಯ ನಡೆಯಲಿದೆ. ಬ್ರಬೌರ್ನ್ ಸ್ಟೇಡಿಯಂನಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್ ಟೈಟಾನ್ಸ್ ಹಾಗೂ ಈಗಾಗಲೇ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿರುವ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ (GT vs MI) ತಂಡಗಳು ಮುಖಾಮುಖಿ ಆಗಲಿದೆ. ಈ ಬಾರಿಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಮಿಂಚುತ್ತಿರುವ ಜಿಟಿ ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಇಂದಿನ ಪಂದ್ಯ ಗೆದ್ದರೆ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡವಾಗಲಿದೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ತಂಡ ಸತತ ಸೋಲಿನೊಂದಿಗೆ ಭಾರೀ ಹಿನ್ನೆಡೆ ಅನುಭವಿಸಿದ್ದು ಟೂರ್ನಿಯಿಂದ ಈಗಾಗಲೇ ಹೊರಬಿದ್ದಿದೆ. ಆದರೆ, ಕಳೆದ ಪಂದ್ಯ ಗೆದ್ದಿದ್ದ ರೋಹಿತ್ (Rohit Sharma) ಪಡೆ ಇಂದು ಯಾವರೀತಿ ಪ್ರದರ್ಶನ ನೀಡುತ್ತೆ ಎಂಬುದು ಕುತೂಹಲ ಕೆರಳಿಸಿದೆ.
ಸತತ ಗೆಲುವಿನ ನಾಗಾಲೋಟದಲ್ಲಿ ತೇಲುತ್ತಿದ್ದ ಗುಜರಾತ್ ತಂಡ ಹಿಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಸೋಲಿನ ಪೆಟ್ಟು ತಿಂದಿದೆ. ಚೇಸಿಂಗ್ನಲ್ಲಿ ಸಾಕಷ್ಟು ಬಲಿಷ್ಠವಾಗಿರುವ ಹಾರ್ದಿಕ್ ಪಡೆ ಕಳೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಸೋಲುಂಡಿತ್ತು. ಪಾಂಡ್ಯ ಕೂಡ, “ಇದೊಂದು ನಮಗೆ ಪಾಠ. ಮೊದಲು ಬ್ಯಾಟಿಂಗ್ ಮಾಡಿದ್ದು ಒಳ್ಳೆಯದಾಯಿತು. ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡುತ್ತೇವೆ,” ಎಂಬ ಮಾತುಗಳನ್ನು ಆಡಿದ್ದರು. ಶುಭ್ಮನ್ ಗಿಲ್ ಬ್ಯಾಟ್ನಿಂದ ರನ್ ಬರದಿರುವುದು ಜಿಟಿ ತಂಡಕ್ಕೆ ತಲೆನೋವಾಗಿದೆ. ಹೆಚ್ಚಿನ ಪಂದ್ಯಗಳಲ್ಲಿ ಡೇವಿಡ್ ಮಿಲ್ಲರ್, ರಶೀದ್ ಖಾನ್ ಹಾಗೂ ರಾಹುಲ್ ತೇವಾಟಿಯ ಅವರೇ ಮಿಂಚಿದ್ದಾರೆ. ಹಾರ್ದಿಕ್ ಪಾಂಡ್ಯ ತಮ್ಮ ಪ್ರಯತ್ನ ಮಾಡುತ್ತಿದ್ದಾರೆ. ಗುಜರಾತ್ ಬೌಲಿಂಗ್ನಲ್ಲಿ ಇನ್ನಷ್ಟು ಘಾತವಾಗಬೇಕಿದೆ.
Kane Williamson: ಡೆಲ್ಲಿ ವಿರುದ್ಧದ ಪಂದ್ಯದ ಬಳಿಕ ಕೇನ್ ವಿಲಿಯಮ್ಸನ್ ಸೋಲಿಗೆ ನೀಡಿದ ಕಾರಣವೇನು ಗೊತ್ತೇ?
ಇತ್ತ 9ನೇ ಪಂದ್ಯದಲ್ಲಿ ಮೊದಲ ಗೆಲುವಿನ ಸವಿ ಅನುಭವಿಸಿದ ಬಳಿಕ ಮುಂಬೈ ಆಡುತ್ತಿರುವ ಮೊದಲ ಪಂದ್ಯವಿದು. ಟೂರ್ನಿಯಲ್ಲಿ ಮುಂಬೈ ಹೋರಾಟ ಮುಕ್ತಾಯಗೊಳಿಸಿದರೂ ಮುಂದಿನ ಪಂದ್ಯಗಳಲ್ಲಿ ಜಯ ದಾಖಲಿಸಿದರೆ ಅಂಕಪಟ್ಟಿಯಲ್ಲಿ ಕಡೇ ಸ್ಥಾನ ತಪ್ಪಿಸಿಕೊಳ್ಳಲು ಹೋರಾಡಬೇಕಿದೆ. ಟೂರ್ನಿಯುದ್ದಕ್ಕೂ ತಂಡದ ನಿರ್ವಹಣೆಯೇ ಸಂಪೂರ್ಣ ನೆಲಕಚ್ಚಿದ್ದು, ಆರಂಭಿಕರಾದ ರೋಹಿತ್ ಶರ್ಮ ಹಾಗೂ ಇಶಾನ್ ಕಿಶನ್ ಜೋಡಿಯ ವೈಫಲ್ಯವೇ ಪ್ರಮುಖವಾಗಿ ಎದ್ದುಕಾಣುತ್ತಿದೆ. ಜಸ್ಪ್ರೀತ್ ವಿಕೆಟ್ ಕೀಳದಿರುವುದು ಕೇವಲ ಮುಂಬೈಗೆ ಮಾತ್ರವಲ್ಲದೆ ಟೀಮ್ ಇಂಡಿಯಾಕ್ಕೂ ಹಿನ್ನಡೆಯಾಗಬಹುದು.
ಅರ್ಜುನ್ ತೆಂಡೂಲ್ಕರ್ ಪದಾರ್ಪಣೆ:
ಎಡಗೈ ವೇಗಿಯಾಗಿರುವ ಅರ್ಜುನ್ ತೆಂಡುಲ್ಕರ್ 2021ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಪ್ರವೇಶಿಸಿದ್ದರು. ಆದರೆ ಆಡುವ ಅವಕಾಶ ಈವರೆಗೆ ಸಿಕ್ಕಿಲ್ಲ. ಯುಎಇಯಲ್ಲಿ ಮುಂದುವರಿದ 2021ರ ದ್ವಿತೀಯಾರ್ಧದ ಐಪಿಎಲ್ ವೇಳೆ ಗಾಯಾಳಾದ ಕಾರಣ ಅರ್ಜುನ್ ತಂಡದಿಂದ ಬೇರ್ಪಟ್ಟಿದ್ದರು. ಹಾಗೆಯೇ 2021ರ ಜನವರಿ ಬಳಿಕ ಯಾವುದೇ ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಆಡಿಲ್ಲ. ಮುಂಬೈ ತಂಡದ ಮುಖ್ಯ ಕೋಚ್ ಮಾಹೇಲ ಜಯವರ್ಧನ ಈ ಬಗ್ಗೆ ಮಾತನಾಡಿ, “ಎಲ್ಲರಿಗೂ ಆಯ್ಕೆಯ ಅವಕಾಶವಿದೆ, ಅರ್ಜುನ್ ತೆಂಡುಲ್ಕರ್‌ಗೂ…’ ಎಂದಿದ್ದಾರೆ. ಹೀಗಾಗಿ ಇವರು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ.
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI:
ಗುಜರಾತ್ ಟೈಟಾನ್ಸ್: ಶುಭ್ಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಸಾಯಿ ಸುದರ್ಶನ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಪ್ರದೀಪ್ ಸಾಂಗ್ವಾನ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ.
ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಟಿಮ್ ಡೇವಿಡ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಡೇನಿಯಲ್ ಸಾಮ್ಸ್, ಹೃತಿಕ್ ಶೋಕೀನ್, ಜಸ್ಪ್ರೀತ್ ಬುಮ್ರಾ, ರಿಲೆ ಮೆರೆಡಿತ್, ಕುಮಾರ್ ಕಾರ್ತಿಕೇಯ/ಅರ್ಜುನ್ ತೆಂಡೂಲ್ಕರ್.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:09 am, Fri, 6 May 22