David Warner: ಅಜೇಯ 92 ರನ್: ಡೇವಿಡ್ ವಾರ್ನರ್ ಸ್ಫೋಟಕ ಬ್ಯಾಟಿಂಗ್ಗೆ ಗೇಲ್ ದಾಖಲೆ ಉಡೀಸ್
DC vs SRH, IPL 2022: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಹೈ ಸ್ಕೋರ್ ಗೇಮ್ನಲ್ಲಿ ಡೆಲ್ಲಿ ಪರ ಡೇವಿಡ್ ವಾರ್ನರ್ ಅಬ್ಬರಿಸಿದರು. ಮೊದಲ ಓವರ್ನಿಂದ ಸಂಪೂರ್ಣ 20 ಓವರ್ ವರೆಗೂ ಆಡಿದ ವಾರ್ನರ್ ಶತಕದ ಅಂಚಿಗೆ ಬಂದು ಅಜೇಯರಾಗಿ ಉಳಿದರು.
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಮೋಘ ಪ್ರದರ್ಶನ ನೀಡಿ ಭರ್ಜರಿ ಗೆಲುವು ಸಾಧಿಸಿದ್ದಿ ತನ್ನ ಪ್ಲೇ ಆಫ್ ಹಾದಿಯನ್ನು ಜೀವಂತವಾಗಿರಿಸಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಹೈ ಸ್ಕೋರ್ ಗೇಮ್ನಲ್ಲಿ ಡೆಲ್ಲಿ (DC vs SRH) ಪರ ಡೇವಿಡ್ ವಾರ್ನರ್ ಅಬ್ಬರಿಸಿದರು. ಮೊದಲ ಓವರ್ನಿಂದ ಸಂಪೂರ್ಣ 20 ಓವರ್ ವರೆಗೂ ಆಡಿದ ವಾರ್ನರ್ ಶತಕದ ಅಂಚಿಗೆ ಬಂದು ಅಜೇಯರಾಗಿ ಉಳಿದರು. 58 ಎಸೆತಗಳನ್ನು ಅಜೇಯ 92 ರನ್ ಚಚ್ಚಿದ ವಾರ್ನರ್ (David Warner) ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು. ಇದರ ಜೊತೆಗೆ ವಿಶೇಷ ದಾಖಲೆ ಕೂಡ ಬರೆದಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲೇ ಇವರು ದಾಖಲೆಯ 89ನೇ ಅರ್ಧಶತಕ ಗಳಿಸಿದರು. ಈ ಮೂಲಕ ವೆಸ್ಟ್ ಇಂಡೀಸ್‌ನ ದೈತ್ಯ ಕ್ರಿಸ್ ಗೇಲ್ (88 ಅರ್ಧಶತಕ) ದಾಖಲೆ ಮುರಿದಿದ್ದಾರೆ. ಅಲ್ಲದೆ ಐಪಿಎಲ್‌ನಲ್ಲೂ (IPL 2022) ದಾಖಲೆಯ 54ನೇ ಅರ್ಧಶತಕ ಬಾರಿಸಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ಆರಂಭಿಕ ಆಘಾತವನ್ನು ಅನುಭವಿಸಿತು. ಮೊದಲ ಓವರ್‌ನ ಭುನವೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಮಂದೀಪ್ ಸಿಂಗ್ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಮಿಚೆಲ್ ಮಾರ್ಷ್(10) ನಿರೀಕ್ಷಿತ ಆಟವಾಡಲಿಲ್ಲ. ಆದರೆ 3ನೇ ವಿಕೆಟ್‌ಗೆ ಜೊತೆಯಾದ ವಾರ್ನರ್ ಹಾಗೂ ರಿಷಬ್ ಪಂತ್(26) ಉತ್ತಮ ಬ್ಯಾಟಿಂಗ್‌ನಿಂದ 48 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು.
ಒಂದೆಡೆ ವಿಕೆಟ್ ಬೀಳುತ್ತಿದ್ದರು ನೆಲಕಚ್ಚಿ ಆಟವಾಡಿದ ಡೇವಿಡ್ ವಾರ್ನರ್ 92* ರನ್ (58 ಬಾಲ್, 12 ಬೌಂಡರಿ, 3 ಸಿಕ್ಸ್) ತಂಡಕ್ಕೆ ಬೆನ್ನೆಲುಬಾದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬಂದ ರೋವ್ಮನ್ ಪೋವೆಲ್ 67* ರನ್ (35 ಬಾಲ್, 3 ಬೌಂಡರಿ, 6 ಸಿಕ್ಸ್) ಸಹ ಭರ್ಜರಿ ಬ್ಯಾಟಿಂಗ್ ಮೂಲಕ ಐಪಿಎಲ್ ಟೂರ್ನಿಯ ಚೊಚ್ಚಲ ಅರ್ಧಶತಕ ಸಿಡಿಸಿದರು. ಹೈದರಬಾದ್ ಬೌಲಿಂಗ್ ದಾಳಿಯನ್ನ ಮನಬಂದಂತೆ ದಂಡಿಸಿದ ಈ ಜೋಡಿ 4ನೇ ವಿಕೆಟ್‌ಗೆ ಮುರಿಯದ 122(66 ಬಾಲ್) ರನ್‌ಗಳ ಜೊತೆಯಾಟವಾಡಿ ಅಬ್ಬರಿಸಿದರು. ಪರಿಣಾಮ ಡೆಲ್ಲಿ 20 ಓವರ್ಗೆ 3 ವಿಕೆಟ್ ನಷ್ಟಕ್ಕೆ 207 ರನ್ ಸಿಡಿಸಿತು.
IPL 2022: RCB ಪಾಲಿಗೆ ಹೊರೆಯಾದ್ರಾ ವಿರಾಟ್ ಕೊಹ್ಲಿ? ಕಳವಳ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ
ಗೆಲ್ಲಲು 208 ರನ್ ಗುರಿ ಪಡೆದ ಹೈದರಾಬಾದ್ ತಂಡ ನಿಕೊಲಸ್ ಪೂರನ್ (62 ರನ್, 34 ಎಸೆತ, 2 ಬೌಂಡರಿ, 6 ಸಿಕ್ಸರ್) ಏಕಾಂಗಿ ಹೋರಾಟದ ಹೊರತಾಗಿಯೂ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ(7)ಹಾಗೂ ನಾಯಕ ವಿಲಿಯಮ್ಸನ್(4)ವಿಕೆಟನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು. ಏಡೆನ್ ಮರ್ಕ್ರಾಮ್ (42 ರನ್) ಹಾಗೂ ರಾಹುಲ್ ತ್ರಿಪಾಠಿ(22) ಎರಡಂಕೆಯ ಸ್ಕೋರ್ ಗಳಿಸಿದರು. ಡೆಲ್ಲಿ ಪರ 3 ವಿಕೆಟ್ ಕಿತ್ತು ಖಲೀಲ್ ಅಹ್ಮದ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಶಾರ್ದೂಲ್ ಠಾಕೂರ್(2-44) ಎರಡು ವಿಕೆಟ್ ಪಡೆದರು. ಡೇವಿಡ್ ವಾರ್ನರ್ ಪಂದ್ಯಶ್ರೇಷ್ಠ ಬಾಜಿಕೊಂಡರು.
ಈ ಗೆಲುವಿನ ಮೂಲಕ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿದಿದೆ. 10 ಅಂಕದೊಂದಿಗೆ ಡೆಲ್ಲಿಯ ನಿವ್ವಳ ರನ್ ರೇಟ್ 0.641 ಆಗಿದೆ. ಇತ್ತ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ಆರನೇ ಸ್ಥಾನಕ್ಕೆ ಕುಸಿದಿದೆ. ಆಡಿದ 10 ಪಂದ್ಯಗಳಲ್ಲಿ ತಲಾ ಐದರಲ್ಲಿ ಜಯ-ಸೋಲು ಕಂಡು 10 ಅಂಕ ಸಂಪಾದಿಸಿ 0.325 ರನ್ ರೇಟ್ ಹೊಂದಿದೆ. (ವರದಿ)
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:42 am, Fri, 6 May 22