
ಮಂಗಳೂರಿನ (Mangaluru) ದೇರಳಕಟ್ಟೆ ಬೆಳ್ಮ ನಿವಾಸಿ ಮೊಹಮ್ಮದ್ ಶಲೀಲ್ (Mohammed Shaleel) ಅವರು ಫುಟ್‌ಬಾಲ್‌ನಲ್ಲಿ ವಿಶೇಷ ಸಾಧನೆಗೈದು ಗಿನ್ನೆಸ್ ದಾಖಲೆಗೆ ಸೇರಿದ್ದಾರೆ. ಕೇವಲ ಮೂವತ್ತು ಸೆಕೆಂಡುಗಳಲ್ಲಿ ಫುಟ್ಬಾಲ್ನೊಂದಿಗೆ 10 ರೌಂಡ್ಗಳ ನಟ್ ಮೆಗ್ ಸಾಧಿಸುವ ಮೂಲಕ ಶಲೀಲ್ ಇಬ್ಬರು ಸಾಧಕರ ಹೆಸರಿನಲ್ಲಿದ್ದ ಗಿನ್ನಿಸ್ ದಾಖಲೆಗಳನ್ನು ಮುರಿದಿದ್ದಾರೆ. ಈ ಹಿಂದೆ ಇಂಗ್ಲೆಂಡ್ನಲ್ಲಿ 2017ರಲ್ಲಿ ಡೆಲೆ ಎಂಬವರು 30 ಸೆಕೆಂಡುಗಳಲ್ಲಿ 7 ಸುತ್ತುಗಳನ್ನು ಸಾಧಿಸುವ ಮೂಲಕ ಮೊದಲ ಗಿನ್ನೆಸ್ ದಾಖಲೆ ಸಾಧಿಸಿದ್ದರು. ಬಳಿಕ 2021 ರ ಫೆಬ್ರವರಿಯಲ್ಲಿ ಮಹಿಳಾ ಫುಟ್ಬಾಲ್ (Football) ಆಟಗಾರ್ತಿ ಅಮೆರಿಕಾದ ತಾಷಾ ನಿಕೋಲ್ ತೇರಾನಿ ಒಂದು ನಿಮಿಷದಲ್ಲಿ 18 ಸುತ್ತುಗಳನ್ನು ಹೊಡೆಯುವ ಮೂಲಕ ಗಿನ್ನೆಸ್ ದಾಖಲೆ ಸಾಧಿಸಿ ಪುಸ್ತಕದ ಪುಟಗಳಲ್ಲಿ ಸೇರಿದ್ದರು. ಇದೀಗ ಇವರಿಬ್ಬರ ದಾಖಲೆಗಳನ್ನು ಮುರಿದಿರುವ ಆರ್.ಬಿ ಅಬ್ದುಲ್ ಹಮೀದ್ ಮತ್ತು ಮುಮ್ತಾಝ್ ದಂಪತಿ ಪುತ್ರ ಮೊಹಮ್ಮದ್ ಶಲೀಲ್ ವಿಶೇಷ ಸಾಧನೆ ಮಾಡಿ ದಾಖಲೆ ನಿರ್ಮಿಸಿದ್ದಾರೆ.
ಶಲೀಲ್ 10 ನೇ ವಯಸ್ಸಿನಿಂದ ಫುಟ್‌ಬಾಲ್‌ನಲ್ಲಿ ಆಸಕ್ತಿ ಹೊಂದಿದ್ದರು ಮತ್ತು ತನ್ನ ಸ್ನೇಹಿತರೊಂದಿಗೆ ತನ್ನ ನಿವಾಸದಲ್ಲಿ ಆಟವಾಡುತ್ತಿದ್ದರು. ಸದ್ಯ ಕೂಳೂರು ಯೆನೆಪೋಯ ಸಂಸ್ಥೆಯಲ್ಲಿ ಏವಿಯೇಷನ್ ಆ್ಯಂಡ್ ಲಾಜಿಸ್ಟಿಕ್ಸ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಶಲೀಲ್ ಒಂದು ತಿಂಗಳ ಹಿಂದೆ ಆನ್‌ಲೈನ್ ಮೂಲಕ ಗಿನ್ನೆಸ್ ದಾಖಲೆ ಸಾಧಿಸಲು ಅರ್ಜಿಯನ್ನು ಸಲ್ಲಿಸಿದ್ದರು. ತಿಂಗಳ ಬಳಿಕ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಆನ್‌ಲೈನ್ ವಿಡಿಯೋ ಮೂಲಕ ಪರೀಕ್ಷೆಯನ್ನು ಕೊಟ್ಟಿದ್ದರು. ಇದೀಗ ಒಂದು ವಾರದಲ್ಲಿ ಇಮೇಲ್‌ಗೆ ಫಲಿತಾಂಶ ಬಂದಿದೆ.
Shubman Gill: ಶುಭ್ಮನ್ ಸಿಡಿಲಬ್ಬರಕ್ಕೆ ಕಿಂಗ್ ಕೊಹ್ಲಿಯ ದಾಖಲೆ ಉಡೀಸ್
ಶಲೀಲ್ ಕಳೆದ ಎರಡು ವರ್ಷಗಳಿಂದ ಫುಟ್ಬಾಲ್ ತರಬೇತಿ ಪಡೆದಿದ್ದರು. ಅವರು ತಮ್ಮ ಕುಟುಂಬದ ಸದಸ್ಯರು, ವಿಶೇಷವಾಗಿ ಸಹೋದರ ಮತ್ತು ಸೋದರಸಂಬಂಧಿಗಳಿಂದ ಬೆಂಬಲವನ್ನು ಹೊಂದಿದ್ದಾರೆ. ಇವರ ಸ್ನೇಹಿತ ಕಾಸರಗೋಡಿನ ಮುದಸ್ಸಿರ್ ದಾಶ್ ಫುಟ್ಬಾಲ್ ಉಡುಗೊರೆಯಾಗಿ ನೀಡಿದ್ದರು. ಸದ್ಯ ಶಲೀಲ್ ಅವರ ಸಾಧನೆಗೆ ಕಾಲೇಜು ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಲೀಲ್, ”ನನ್ನ ಹೆಸರನ್ನು ಗೂಗಲ್‌ನಲ್ಲಿ ನೋಡಿ ನನಗೆ ತುಂಬಾ ಖುಷಿಯಾಗಿದೆ. ನೂತನ ದಾಖಲೆ ಸೃಷ್ಟಿಸುವ ನನ್ನ ಪ್ರಯತ್ನ ಮುಂದುವರಿಸುತ್ತೇನೆ. ನಾನು ರಾಜ್ಯ ಮತ್ತು ರಾಷ್ಟ್ರೀಯ ಫುಟ್ಬಾಲ್ ತಂಡಗಳ ಭಾಗವಾಗಲು ಆಶಿಸುತ್ತೇನೆ,” ಎಂದು ಹೇಳಿದ್ದಾರೆ. ”ಈ ಸಾಧನೆಗಾಗಿ ನಾನು ಎರಡು ವರ್ಷಗಳಿಂದ ನಿರಂತರ ತರಬೇತಿಯನ್ನು ಪಡೆಯುತ್ತಿದ್ದೆನು. ಪರಿಶ್ರಮ , ಮನೆಯವರ ಪ್ರೀತಿ, ಸಹೋದರ ಹಾಗೂ ಸೋದರ ಸಂಬಂಧಿಗಳ ಪ್ರೋತ್ಸಾಹ ಕೈಬಿಡಲಿಲ್ಲ,” ಎಂಬುದು ಶಲೀಲ್ ಮಾತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ