Pro Kabaddi: ತಮಿಳ್ ತಲೈವಾಸ್ ವಿರುದ್ಧ ಪ್ರಚಂಡ ಗೆಲುವು ಸಾಧಿಸಿ ಎರಡನೇ ಸ್ಥಾನಕ್ಕೇರಿದ ಪಾಟ್ನಾ ಪೈರೇಟ್ಸ್
Patna Pirates vs Tamil Thalaivas: ಪಾಯಿಂಟ್ಸ್ ಟೇಬಲ್‌ನಲ್ಲಿ 46 ಪಾಯಿಂಟ್ಸ್‌ನೊಂದಿಗೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್ ಮುಂದುವರಿದಿದೆ. ತಮಿಳ್ ತಲೈವಾಸ್ ವಿರುದ್ಧ ಗೆದ್ದ ಪಾಟ್ನಾ ಪೈರೇಟ್ಸ್ ಎರಡನೇ ಸ್ಥಾನಕ್ಕೆ ಜಿಗಿದಿದೆ.
ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ (Pro Kabaddi League) ಶುಕ್ರವಾರ ನಡೆದ 80ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಪಾಟ್ನಾ ಪೈರೇಟ್ಸ್ (Patna Pirates vs Tamil Thalaivas) ತಂಡ ಭರ್ಜರಿ ಗೆಲುವು ಸಾಧಿಸಿದೆ. 52-24 ಅಂಕಗಳ ಪ್ರಚಂಡ ಗೆಲುವು ಪಡೆದಿರುವ ಪಾಟ್ನಾ ಪೈರೆಟ್ಸ್ ಒಮ್ಮೆಲೇ ಆರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ನೆಗೆದಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆದ ಈ ಪಂದ್ಯದ ಮೊದಲಾರ್ಧದಲ್ಲಿ ಪಾಟ್ನಾ ಪೈರೇಟ್ಸ್ 21 ಪಾಯಿಂಟ್ಸ್ ಕಲೆಹಾಕಿದರೆ, ತಮಿಳ್ ತಲೈವಾಸ್ 12 ಪಾಯಿಂಟ್ಸ್ ಕಲೆಹಾಕಿ ಆರಂಭದಲ್ಲೇ ಹಿನ್ನಡೆ ಕಂಡಿತು. ಎರಡನೇ ಹಂತದಲ್ಲೂ ಕೂಡ ತಮಿಳ್ ತಲೈವಾಸ್ ಅನ್ನು ಹಿಂದಿಕ್ಕಿದ ಪಾಟ್ನಾ ಪೈರೇಟ್ಸ್ 31 ಪಾಯಿಂಟ್ಸ್ ಕಲೆಹಾಕಿತು. ಇತ್ತ ತಮಿಳ್ ತಲೈವಾಸ್ ಮತ್ತೆ ಕೇವಲ 12 ಪಾಯಿಂಟ್ಸ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಪಂದ್ಯವನ್ನ ಪಾಟ್ನಾ ಪೈರೇಟ್ಸ್ 52-24 ಪಾಯಿಂಟ್ಸ್‌ಗಳಿಂದ ಗೆದ್ದು ಬೀಗಿತು.
ಪ್ರಶಾಂತ್ ಕುಮಾರ್ ರೈ ಮತ್ತು ಮೋನು ಗೋಯತ್ ರೇಡಿಂಗ್‌ನಲ್ಲಿ ಮಿಂಚಿದರು. ಅವರಿಬ್ಬರಿಗೆ ಸಚಿನ್ ಉತ್ತಮ ಸಹಕಾರ ನೀಡಿದರು. ನೀರಜ್ ಕುಮಾರ್ ಮತ್ತು ಸುನಿಲ್ ರಕ್ಷಣಾ ವಿಭಾಗದ ಚುಕ್ಕಾಣಿ ಹಿಡಿದರು. ಆಲ್‌ರೌಂಡರ್ ಮೊಹಮ್ಮದ್ರೇಜಾ ಚಿಯಾನೆ ಆರು ಪಾಯಿಂಟ್ ಕಲೆ ಹಾಕಿದರು. ಮೋನು ಗೋಯತ್ ಆರು ಟಚ್ ಪಾಯಿಂಟ್ ಮತ್ತು ಎರಡು ಟ್ಯಾಕ್ಲಿಂಗ್ ಪಾಯಿಂಟ್ ಒಳಗೊಂಡ ಒಳಗೊಂಡ ಒಂಬತ್ತು ಪಾಯಿಂಟ್ ಕಲೆ ಹಾಕಿದರು.
ಪ್ರಶಾಂತ್ ರೈ ಏಳು ಟಚ್ ಪಾಯಿಂಟ್ ಸೇರಿದಂತೆ ಎಂಟು ಪಾಯಿಂಟ್ ತಂದುಕೊಟ್ಟರು. ಸಚಿನ್, ಮೊಹಮ್ಮದ್ರೇಜಾ ಮತ್ತು ನೀರಜ್ ತಲಾ ಆರು ಪಾಯಿಂಟ್ ಗಳಿಸಿದರು. ಬಲಬದಿಯ ಕಾರ್ನರ್‌ನಲ್ಲಿ ಅಮೋಘ ಆಟವಾಡಿದ ಸುನಿಲ್ ಐದು ಪಾಯಿಂಟ್ ಗಳಿಸಿದರು. ತಲೈವಾಸ್ ಪರ ಸಾಗರ್ ಏಳು ಟ್ಯಾಕ್ಲಿಂಗ್ ಪಾಯಿಂಟ್ ಸೇರಿದಂತೆ ಒಟ್ಟು ಎಂಟು ಪಾಯಿಂಟ್ ಗಳಿಸಿ ಮಿಂಚಿದರು. ರೇಡರ್ ಅಜಿಂಕ್ಯ ಪವಾರ್ ಐದು ಮತ್ತು ಮಂಜೀತ್ ನಾಲ್ಕು ಪಾಯಿಂಟ್ ಗಳಿಸಿದರು.
ಪಾಯಿಂಟ್ಸ್ ಟೇಬಲ್‌ನಲ್ಲಿ 46 ಪಾಯಿಂಟ್ಸ್‌ನೊಂದಿಗೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್ ಮುಂದುವರಿದಿದೆ. ತಮಿಳ್ ತಲೈವಾಸ್ ವಿರುದ್ಧ ಗೆದ್ದ ಪಾಟ್ನಾ ಪೈರೇಟ್ಸ್ ಎರಡನೇ ಸ್ಥಾನಕ್ಕೆ ಜಿಗಿದಿದೆ. ದಬಾಂಗ್ ಡೆಲ್ಲಿ ಮೂರನೇ ಸ್ಥಾನದಲ್ಲಿದ್ದು, ಹರಿಯಾಣ ಸ್ಟೀಲರ್ಸ್ ನಾಲ್ಕನೇ ಸ್ಥಾನ ಪಡೆದಿದೆ.
ಅರ್ಧ ನಿಮಿಷಕ್ಕೆ 50 ಲಕ್ಷ ರೂ. ಖರ್ಚು! ಮಡದಿಯ ಜನ್ಮದಿನಕ್ಕೆ ಮರೆಯಲಾಗದ ಉಡುಗೂರೆ ಕೊಟ್ಟ ರೊನಾಲ್ಡೊ