Khel Ratna Award: ನೀರಜ್ ಚೋಪ್ರಾ ಸೇರಿ 12 ಮಂದಿ ಸಾಧಕರಿಗೆ ಇಂದು ಖೇಲ್ ರತ್ನ ಪ್ರಶಸ್ತಿ ಪ್ರದಾನ
Major Dhyan Chand Khel Ratna Award: ಸಾಂಪ್ರದಾಯಿಕವಾಗಿ ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29ರಂದು ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಆದರೆ ಈ ಬಾರಿ ಒಲಿಂಪಿಕ್ಸ್-ಪ್ಯಾರಾಲಿಂಪಿಕ್ಸ್ ಸಾಧಕರನ್ನೂ ಪ್ರಶಸ್ತಿಗೆ ಪರಿಗಣಿಸುವ ಸಲುವಾಗಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ವಿಳಂಬಗೊಳಿಸಲಾಗಿತ್ತು.
ಪ್ರಸಕ್ತ ವರ್ಷ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ (National Sports Awards) ಇತ್ತೀಚೆಗಷ್ಟೆ ಪ್ರಕಟಗೊಂಡಿತ್ತು. ಇದರ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ. ಸಂಜೆ 4.30ರಿಂದ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ (Ram Nath Kovind) ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಭಾರತಕ್ಕೆ ಐತಿಹಾಸಿಕ ಟ್ರ್ಯಾಕ್ ಅಂಡ್ ಫೀಲ್ಡ್ ಚಿನ್ನದ ಪದಕ ಗೆದ್ದುಕೊಟ್ಟ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ (Neeraj Chopra) ಸಹಿತ 12 ಕ್ರೀಡಾಪಟುಗಳು ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್‌ಚಂದ್ ಖೇಲ್‌ರತ್ನ (Khel Ratna Award) ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ನೀರಜ್ ಜೋಪ್ರಾ ಜೊತೆ ಒಲಿಂಪಿಕ್ ಪದಕ ವಿಜೇತರಾದ ಕುಸ್ತಿಪಟು ರವಿ ದಹಿಯಾ, ಹಾಕಿ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಮತ್ತು ಮಹಿಳಾ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಹಾಗೂ ಭಾರತ ಮಹಿಳಾ ಒಡಿಐ/ಟೆಸ್ಟ್ ತಂಡದ ನಾಯಕಿ ಮಿಥಾಲಿ ರಾಜ್, ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೇಟ್ರಿ ಅವರು ಪ್ರಶಸ್ತಿ ಪಡೆದುಕೊಳ್ಳಲಿದ್ದಾರೆ.
ಸುನಿಲ್ ಛೇಟ್ರಿ, ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಪಡೆದ ಭಾರತದ ಮೊತ್ತ ಮೊದಲ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಎಂಬುದು ವಿಶೇಷ. 2021 ಭಾರತೀಯ ಕ್ರೀಡಾಪಟುಗಳ ಪಾಲಿಗೆ ಅದ್ಭುತವಾಗಿ ಮೂಡಿಬಂದಿದೆ. ಟೋಕಿಯೋ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಅವನಿ ಲಾಖ್ರಾ 2 ಪದಕ ಗೆದ್ದು ಈ ಸಾಧನೆ ಮಾಡಿದ ಮೊತ್ತ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡರು. ಅವರನ್ನೂ ಕೂಡ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಇದರ ಜೊತೆಗೆ ಟೋಕಿಯೊ ಪ್ಯಾರಾಲಿಂಪಿಕ್ಸ್ ರಜತ ವಿಜೇತ ಕನ್ನಡಿಗ ಸುಹಾಸ್ ಯತಿರಾಜ್ ಸಹಿತ 35 ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿ ಪಡೆಯಲಿದ್ದಾರೆ. ಕ್ರಿಕೆಟಿಗ ಶಿಖರ್ ಧವನ್, ಟೆನಿಸ್ ತಾರೆ ಅಂಕಿತಾ ರೈನಾ, ಕಬಡ್ಡಿ ಆಟಗಾರ ಸಂದೀಪ್ ನರ್ವಾಲ್ ಮತ್ತು ಒಲಿಂಪಿಕ್ಸ್ ಕಂಚು ವಿಜೇತ ಹಾಕಿ ತಂಡದ ಸದಸ್ಯರು ಅರ್ಜುನ ಪ್ರಶಸ್ತಿ ಸ್ವೀಕರಿಸಲಿರುವ ಇತರ ಪ್ರಮುಖರು. 10 ಕೋಚ್‌ಗಳು ದ್ರೋಣಾಚಾರ್ಯ ಮತ್ತು ಐವರು ಮಾಜಿ ಕ್ರೀಡಾಪಟುಗಳು ಧ್ಯಾನ್‌ಚಂದ್ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಸಾಂಪ್ರದಾಯಿಕವಾಗಿ ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29ರಂದು ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಆದರೆ ಈ ಬಾರಿ ಒಲಿಂಪಿಕ್ಸ್-ಪ್ಯಾರಾಲಿಂಪಿಕ್ಸ್ ಸಾಧಕರನ್ನೂ ಪ್ರಶಸ್ತಿಗೆ ಪರಿಗಣಿಸುವ ಸಲುವಾಗಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ವಿಳಂಬಗೊಳಿಸಲಾಗಿತ್ತು.
ಮೇಜರ್ ಧ್ಯಾನ್‌ಚಂದ್ ಖೇಲ್‌ರತ್ನ ಪ್ರಶಸ್ತಿಯು ಪದಕ, ಪ್ರಶಸ್ತಿ ಪತ್ರ ಮತ್ತು 25 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿದೆ. ಅರ್ಜುನ ಪ್ರಶಸ್ತಿಯು ಅರ್ಜುನ ಪ್ರತಿಮೆ, ಪ್ರಶಸ್ತಿ ಪತ್ರ ಮತ್ತು 15 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ. ದ್ರೋಣಾಚಾರ್ಯ ಪ್ರಶಸ್ತಿಯೂ ಪ್ರತಿಮೆ, ಪ್ರಶಸ್ತಿ ಪತ್ರ ಮತ್ತು 15 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ. ಧ್ಯಾನ್‌ಚಂದ್ ಜೀವಮಾನ ಸಾಧನೆ ಪ್ರಶಸ್ತಿಯೂ ಪ್ರತಿಮೆ, ಪ್ರಶಸ್ತಿ ಪತ್ರ ಮತ್ತು 10 ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ.
(President of India Ram Nath Kovind will give away the National Sports Awards 2021 Today)