PAK vs AUS: ಪಾಕ್ ವಿರುದ್ಧ 111 ರನ್ಗಳಿಂದ ಸೋತ ಆಸ್ಟ್ರೇಲಿಯಾ
Pakistan Australia T20 Series: ಪಾಕಿಸ್ತಾನ vs ಆಸ್ಟ್ರೇಲಿಯಾ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಭರ್ಜರಿ 111 ರನ್ಗಳಿಂದ ಗೆದ್ದಿತು. ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ 208 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 96 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ಪಾಕಿಸ್ತಾನ 3-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿ, ಟಿ20 ವಿಶ್ವಕಪ್‌ಗೆ ಆತ್ಮವಿಶ್ವಾಸದಿಂದ ಪ್ರವೇಶಿಸಿದೆ. ಆಸ್ಟ್ರೇಲಿಯಾಗೆ ಇದು ದೊಡ್ಡ ಹಿನ್ನಡೆ.

ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ (Pakistan vs Australia) ನಡುವಿನ ಟಿ20 ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಫೆಬ್ರವರಿ 1 ರ ಭಾನುವಾರ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯವನ್ನು ಆತಿಥೇಯ ಪಾಕಿಸ್ತಾನ ಬರೋಬ್ಬರಿ 111 ರನ್ಗಳಿಂದ ಗೆದ್ದುಕೊಳ್ಳುವ ಮೂಲಕ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ. ಅಂದರೆ ಈ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಒಂದೇ ಒಂದು ಪಂದ್ಯವನ್ನು ಗೆಲ್ಲಲಾಗದೆ ಕ್ಲೀನ್ ಸ್ವೀಪ್ ಮುಜುಗರಕ್ಕೊಳಗಾಗಿದೆ. ಟಿ20 ವಿಶ್ವಕಪ್ಗೂ (T20 World Cup) ಮುನ್ನ ಆಸೀಸ್ ತಂಡದ ಈ ಹೀನಾಯ ಪ್ರದರ್ಶನ ತಂಡದ ಮನೋಬಲವನ್ನು ಕುಗ್ಗಿಸಿದರೆ, ಇತ್ತ ಪಾಕಿಸ್ತಾನ ಸರಣಿ ಗೆಲುವಿನ ಆತ್ಮಸ್ಥೈರ್ಯದೊಂದಿಗೆ ವಿಶ್ವಕಪ್‌ಗೆ ಪ್ರವೇಶಿಸುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಗೆಲ್ಲಲು 208 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 96 ರನ್‌ಗಳಿಗೆ ಆಲೌಟ್ ಆಯಿತು.
207 ರನ್ ಕಲೆಹಾಕಿದ ಪಾಕಿಸ್ತಾನ
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಪರ ಮಾಜಿ ನಾಯಕ ಬಾಬರ್ ಆಝಂ 36 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 50 ರನ್ ಗಳಿಸಿದರೆ, ಸ್ಯಾಮ್ ಅಯೂಬ್ ಕೂಡ 37 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 56 ರನ್ ಗಳಿಸಿದರು. ಶಾದಾಬ್ ಖಾನ್ 19 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ 46 ರನ್‌ಗಳ ಕಾಣಿಕೆ ನೀಡಿದರು. ಈ ಮೂವರ ಆಟದಿಂದಾಗಿ ಪಾಕಿಸ್ತಾನ ತನ್ನ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 207 ರನ್ ಗಳಿಸಿತು. ಆಸ್ಟ್ರೇಲಿಯಾದ ಬೌಲರ್‌ಗಳ ಬಗ್ಗೆ ಹೇಳುವುದಾದರೆ, ಬೆನ್ ದ್ವಾರ್ಶುಯಿಸ್ 4 ಓವರ್‌ಗಳಲ್ಲಿ 39 ರನ್‌ಗಳಿಗೆ 2 ವಿಕೆಟ್ ಪಡೆದರೆ, ಮ್ಯಾಥ್ಯೂ ಕುಹ್ನೆಮನ್, ಮ್ಯಾಥ್ಯೂ ಶಾರ್ಟ್, ಕೂಪರ್ ಕಾನೊಲಿ ಮತ್ತು ಕ್ಯಾಮರೂನ್ ಗ್ರೀನ್ ತಲಾ ಒಂದು ವಿಕೆಟ್ ಪಡೆದರು.
96 ರನ್‌ಗಳಿಗೆ ಆಸೀಸ್ ಆಲೌಟ್
ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕಳೆದೆರಡು ಪಂದ್ಯಗಳಂತೆ ಕಳಪೆ ಆರಂಭ ಪಡೆದುಕೊಂಡಿತು. ಪವರ್‌ಪ್ಲೇನಲ್ಲಿಯೇ ತಂಡವು ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡದ ಪರ ಕ್ಯಾಮರೂನ್ ಗ್ರೀನ್ 24 ಎಸೆತಗಳಲ್ಲಿ 22 ರನ್ ಗಳಿಸಿದರೆ,ಮಾರ್ಕಸ್ ಸ್ಟೊಯಿನಿಸ್ 22 ಎಸೆತಗಳಲ್ಲಿ 23 ರನ್ ಗಳಿಸಿದರು. ಬೇರೆ ಯಾವುದೇ ಆಟಗಾರನಿಗೂ 20 ರನ್ ಗಳಿಸಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ಆಸ್ಟ್ರೇಲಿಯಾ 16.5 ಓವರ್‌ಗಳಲ್ಲಿ 96 ರನ್‌ಗಳಿಗೆ ಆಲೌಟ್ ಆಯಿತು. ಆದಾಗ್ಯೂ, ಆಡಮ್ ಜಂಪಾ ಗಾಯದಿಂದಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ.
3ನೇ ಬಾರಿಗೆ ಕ್ಲೀನ್ ಸ್ವೀಪ್ ಅವಮಾನ
ಮತ್ತೊಂದೆಡೆ, ಪಾಕಿಸ್ತಾನದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ಮೊಹಮ್ಮದ್ ನವಾಜ್ 4 ಓವರ್‌ಗಳಲ್ಲಿ 18 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿ ಪಂದ್ಯದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಶಾಹೀನ್ ಶಾ ಅಫ್ರಿದಿ ಕೂಡ 3 ಓವರ್‌ಗಳಲ್ಲಿ 16 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಬಳಿಸಿದರು. ನಸೀಮ್ ಶಾ ಮತ್ತು ಅಬ್ರಾರ್ ಅಹ್ಮದ್ ಕೂಡ ತಲಾ ಒಂದು ವಿಕೆಟ್ ಪಡೆದರು. ಪಾಕಿಸ್ತಾನ ಈ ಹಿಂದೆ 2018 ರಲ್ಲಿ 3 ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾವನ್ನು 3-0 ಅಂತರದಿಂದ ಸೋಲಿಸಿತ್ತು. ಇತ್ತ 3 ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಕ್ಲೀನ್ ಸ್ವೀಪ್ ಎದುರಿಸಿದ್ದು ಇದು ಕೇವಲ ಮೂರನೇ ಬಾರಿ. ಪಾಕಿಸ್ತಾನವನ್ನು ಹೊರತುಪಡಿಸಿ, ಭಾರತ ಕೂಡ ಒಮ್ಮೆ ಈ ಸಾಧನೆ ಮಾಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:03 pm, Sun, 1 February 26
