ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಒಲಿಂಪಿಕ್ ಫೈನಲ್‌ನಿಂದ ಅನರ್ಹಗೊಳಿಸಿರುವುದರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾತ್ರಿ ಅಂದರೆ ಶನಿವಾರ ರಾತ್ರಿಯೊಳಗೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ತೀರ್ಪು ನೀಡಲಿದೆ. ಪ್ಯಾರಿಸ್‌ನಿಂದ ಬಂದಿರುವ ವರದಿಗಳ ಪ್ರಕಾರ, ಈ ಪ್ರಕರಣದ ವಿಚಾರಣೆಯು ಭಾರತೀಯ ಕಾಲಮಾನ ರಾತ್ರಿ 9.30 ರಿಂದ 10 ರವರೆಗೆ ನಡೆಯಲಿದೆ ಎಂದು ಸಿಎಎಸ್ ತಿಳಿಸಿದೆ. ಸಿಎಎಸ್‌ನ ಈ ನಿರ್ಧಾರವು ವಿನೇಶ್ ಫೋಗಟ್ ಒಲಿಂಪಿಕ್ ಪದಕವನ್ನು ಪಡೆಯುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ. ಸೆಮಿಫೈನಲ್ ಪಂದ್ಯದವರೆಗೂ ವಿನೇಶ್ ಅವರ ತೂಕ ನಿಯಮಾನುಸಾರ ಇದ್ದುದರಿಂದ ಬೆಳ್ಳಿ ಪದಕ ನೀಡಬೇಕೆಂದು ವಿನೇಶ್ ಫೋಗಟ್ ಅವರ ಮನವಿಯಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಯಾವ ತೀರ್ಪು ನೀಡುತ್ತದೆ ಎಂಬುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.
ವಿನೇಶ್ ಫೋಗಟ್ ಅವರು ಸೆಮಿಫೈನಲ್‌ನಲ್ಲಿ ಜಯಗಳಿಸುವವರೆಗೆ ಅವರ ತೂಕವು ನಿಗದಿತ ಮಿತಿಯಲ್ಲಿತ್ತು. ಆದ್ದರಿಂದ ವಿನೇಶ್ ಅವರಿಗೆ ಕನಿಷ್ಠ ಬೆಳ್ಳಿ ಪದಕವನ್ನು ನೀಡಬೇಕು ಎಂದು ಪ್ರಸಿದ್ಧ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಷ್ಪತ್ ಸಿಂಘಾನಿಯಾ ಅವರು ಸಿಎಎಸ್‌ನಲ್ಲಿ ವಿನೇಶ್ ಪರ ವಾದಿಸಿದ್ದಾರೆ. ಅಲ್ಲದೆ ಈ ಪ್ರಕರಣದ ನಿರ್ಧಾರ ವಿನೇಶ್ ಪರವಾಗಿ ಬರಲಿದೆ ಎಂಬ ಭರವಸೆಯನ್ನು ಭಾರತೀಯ ಒಲಿಂಪಿಕ್ ಸಂಸ್ಥೆ ವ್ಯಕ್ತಪಡಿಸಿದೆ. ಒಂದು ವೇಳೆ ವಿನೇಶ್ ಪರವಾಗಿ ತೀರ್ಪು ಬಂದರೆ ಅವರಿಗೆ ಬೆಳ್ಳಿ ಪದಕ ಸಿಗಲಿದೆ.
BIG BREAKING
Here is the breaking update on the @Phogat_Vinesh appeal.
Decision to come today by 6pm Paris time. @RevSportzGlobal pic.twitter.com/u5FmSHQswa
— Boria Majumdar (@BoriaMajumdar) August 10, 2024
ವಾಸ್ತವವಾಗಿ ವಿನೇಶ್ ಫೋಗಟ್ ಅವರಂತೆ, 57 ಕೆಜಿ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಅಮನ್ ಸೆಹ್ರಾವತ್ ಅವರ ತೂಕವೂ ಸಾಕಷ್ಟು ಹೆಚ್ಚಾಗಿತ್ತು ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಕಂಚಿನ ಪದಕದ ಪಂದ್ಯಕ್ಕೂ ಮುನ್ನ ಅಮಾನ್ ಅವರ ತೂಕ 61.5 ಕೆಜಿ ತಲುಪಿತ್ತು. ಆದರೆ ರಾತ್ರಿಯಿಡೀ ತೂಕ ಇಳಿಸುವ ಕೆಲಸದಲ್ಲಿ ನಿರತರಾಗಿದ್ದ ಅಮನ್ ಒಂದೇ ರಾತ್ರಿಯಲ್ಲಿ ಬರೋಬ್ಬರಿ 4 ಕೆಜಿಗಿಂತ ಹೆಚ್ಚು ತೂಕವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಅವರು ಕಂಚಿನ ಪದಕದ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದ್ದರು ಎಂದು ವರದಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Sat, 10 August 24