Paris Olympics 2024: ಕಂಚು ಗೆದ್ದು ತವರಿಗೆ ಮರಳಿದ ಹಾಕಿ ತಂಡಕ್ಕೆ ಅವಮಾನ; ಫ್ಯಾನ್ಸ್ ಆಕ್ರೋಶ

|

Updated on: Aug 10, 2024 | 5:15 PM

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದ ಕೆಲ ಆಟಗಾರರು ಭಾರತಕ್ಕೆ ಮರಳಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರತೀಯ ಆಟಗಾರರಿಗೆ ಭವ್ಯ ಸ್ವಾಗತ ನೀಡಲಾಯಿತು. ಆದರೆ ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಆಟಗಾರರ ಸ್ವಾಗತದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.

Paris Olympics 2024: ಕಂಚು ಗೆದ್ದು ತವರಿಗೆ ಮರಳಿದ ಹಾಕಿ ತಂಡಕ್ಕೆ ಅವಮಾನ; ಫ್ಯಾನ್ಸ್ ಆಕ್ರೋಶ
ಭಾರತ ಹಾಕಿ ತಂಡ
Follow us on

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಮಣಿಸಿದ್ದ ಭಾರತ ಹಾಕಿ ತಂಡ ಸತತ ಎರಡನೇ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ದಾಖಲೆ ನಿರ್ಮಿಸಿದೆ. ಹಾಕಿ ತಂಡದ ಈ ಸಾಧನೆಗೆ ಇಡೀ ದೇಶದಲ್ಲೇ ಪ್ರಶಂಸೆ ವ್ಯಕ್ತವಾಗುತ್ತಿದೆ. ಪ್ರಧಾನಿ ಮೋದಿ ಸೇರಿದಂತೆ ದೇಶದ ಗಣ್ಯರು ಭಾರತ ಹಾಕಿ ತಂಡದ ಯಶಸ್ಸನ್ನು ಶ್ಲಾಘಿಸುತ್ತಿದ್ದಾರೆ. ಇದೀಗ ಐತಿಹಾಸಿಕ ಗೆಲುವಿನ ಬಳಿಕ ಭಾರತ ಹಾಕಿ ತಂಡದ ಕೆಲ ಆಟಗಾರರು ಭಾರತಕ್ಕೆ ಮರಳಿದ್ದಾರೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರತೀಯ ಆಟಗಾರರಿಗೆ ಭವ್ಯ ಸ್ವಾಗತ ನೀಡಲಾಯಿತು. ಆದರೆ ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಆಟಗಾರರ ಸ್ವಾಗತದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ತವರಿಗೆ ಮರಳಿದ ಭಾರತ ಹಾಕಿ ತಂಡದ ಆಟಗಾರರಿಗೆ ಅವಮಾನ ಮಾಡಲಾಗಿದೆ ಎಂದು ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.

ಉಭಯ ತಂಡಗಳ ಸ್ವಾಗತದಲ್ಲಿ ಸಾಕಷ್ಟು ವ್ಯತ್ಯಾಸ

ವಾಸ್ತವವಾಗಿ ಪ್ಯಾರಿಸ್​ನಿಂದ ಭಾರತಕ್ಕೆ ಹೊರಟ್ಟಿದ್ದ ಹಾಕಿ ಆಟಗಾರರ ಸ್ವಾಗತಕ್ಕೆ ದೆಹಲಿ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆಯಿಂದಲೇ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಆಟಗಾರರು ವಿಮಾನ ನಿಲ್ದಾಣದಿಂದ ಹೊರಬಂದ ತಕ್ಷಣ, ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಆದರೆ ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಮರಳಿದ ಟೀಂ ಇಂಡಿಯಾವನ್ನು ಸ್ವಾಗತಿಸಲು ನೆರದಿದ್ದ ಜನಸಂದಣಿಗೆ ಹೊಲಿಸಿದರೆ, ಭಾರತ ಹಾಕಿ ತಂಡದ ಆಟಗಾರರ ಸ್ವಾಗತಕ್ಕೆ ಸೇರಿದ್ದ ಜನಸಂದಣಿ ತುಂಬಾ ಕಡಿಮೆ ಇತ್ತು. ಕ್ರಿಕೆಟ್​ಗೆ ಹೊಲಿಸಿದರೆ ಭಾರತದಲ್ಲಿ ಹಾಕಿ ತಂಡಕ್ಕಿರುವ ಜನಪ್ರಿಯತೆ ಕೊಂಚ ಕಡಿಮೆ ಎನಿಸಿದೆಯಾದರೂ, ಎರಡೂ ತಂಡಗಳ ಆಟಗಾರರಿಗೆ ಸಿಕ್ಕ ಸ್ವಾಗತದ ನಡುವೆ ಸಾಕಷ್ಟು ವ್ಯತ್ಯಾಸವಿತ್ತು.

ಸಾಮಾನ್ಯ ವೋಲ್ವೋ ಬಸ್

ಮತ್ತೊಂದೆಡೆ ಭಾರತ ಹಾಕಿ ತಂಡವನ್ನು ಕರೆದೊಯ್ಯುತ್ತಿದ್ದ ಬಸ್ಸಿನ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ವಾಸ್ತವವಾಗಿ, ಟಿ20 ವಿಶ್ವಕಪ್ ಗೆದ್ದು ಭಾರತಕ್ಕೆ ಬಂದ ಟೀಂ ಇಂಡಿಯಾ ಆಟಗಾರರನ್ನು ಹೋಟೆಲ್​ಗೆ ಕರೆದೊಯ್ಯಲು ಬಂದಿದ್ದ ಬಸ್ಸಿಗೂ, ಈಗ ಹಾಕಿ ಆಟಗಾರರನ್ನು ಕರೆದೊಯ್ಯಲು ಬಂದಿದ್ದ ಬಸ್ಸಿನ ನಡುವೆ ಸಾಕಷ್ಟು ವ್ಯತ್ಯಾಸವಿತ್ತು. ಹಾಕಿ ಆಟಗಾರರನ್ನು ಕರೆದೊಯ್ದ ಬಸ್ ಸಾಮಾನ್ಯ ವೋಲ್ವೋ ಬಸ್ ಆಗಿತ್ತು. ಈ ಬಸ್​ನಲ್ಲಿ ಹೆಚ್ಚಿನ ಸೌಲಭ್ಯಗಳು ಇರಲಿಲ್ಲ. ಆದರೆ ಟೀಂ ಇಂಡಿಯಾ ಆಟಗಾರರನ್ನು ಐಷಾರಾಮಿ ಬಸ್‌ನಲ್ಲಿ ಹೋಟೆಲ್‌ಗೆ ಕರೆದೊಯ್ಯಲಾಗಿತ್ತು. ಈ ಎರಡು ಬಸ್‌ಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ತಾರತಮ್ಯದ ಆರೋಪ ಮಾಡುತ್ತಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡದ ಪ್ರಾಬಲ್ಯ

ಭಾರತವು ಹಾಕಿಯಲ್ಲಿ ಒಲಿಂಪಿಕ್ಸ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ದೇಶವಾಗಿದೆ. ಇದಕ್ಕೆ ಪೂರಕವಾಗಿ ಹಾಕಿ ತಂಡ ಒಲಿಂಪಿಕ್ಸ್​ನಲ್ಲಿ 8 ಚಿನ್ನದ ಪದಕ, 4 ಬೆಳ್ಳಿ ಹಾಗೂ 1 ಬೆಳ್ಳಿ ಪದಕವನ್ನು ಗೆದ್ದಿದೆ. 1928ರ ಒಲಿಂಪಿಕ್ಸ್‌ನಿಂದ ಭಾರತ ಹಾಕಿಯಲ್ಲಿ ಭಾಗವಹಿಸುತ್ತಿದ್ದು, ತನ್ನ ಮೊದಲ 6 ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿತ್ತು. ಭಾರತವನ್ನು ಹೊರತುಪಡಿಸಿ, ಆಸ್ಟ್ರೇಲಿಯಾ ಮಾತ್ರ ಹಾಕಿಯಲ್ಲಿ 10 ಪದಕಗಳನ್ನು ಗೆದ್ದಿದೆ. ಆದರೆ ಆಸ್ಟ್ರೇಲಿಯಾ ತಂಡ ಕೇವಲ 1 ಚಿನ್ನದ ಪದಕ ಮಾತ್ರ ಗೆದ್ದಿದೆ. ನೆದರ್ಲ್ಯಾಂಡ್ಸ್ ಮತ್ತು ಗ್ರೇಟ್ ಬ್ರಿಟನ್ ಇದುವರೆಗೆ 9 ಒಲಿಂಪಿಕ್ ಪದಕಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಕೂಡ ಹಾಕಿಯಲ್ಲಿ 8 ಪದಕಗಳನ್ನು ಗೆದ್ದುಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Sat, 10 August 24