Paris Olympics 2024: ಮೊದಲ ದಿನವೇ ಭಾರತಕ್ಕೆ ಶುಭಾರಂಭ; ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಭಾರತ ಮಹಿಳಾ ಆರ್ಚರಿ ತಂಡ

Paris Olympics 2024: 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್, ಇದೇ ಜುಲೈ 26 ರಿಂದ ಆರಂಭವಾಗಲಿದೆ. ಆದರೆ ಈ ಮೊದಲೇ ಅಂದರೆ ಇಂದಿನಿಂದ ಕೆಲವು ಸ್ಪರ್ಧೆಗಳು ಆರಂಭವಾಗಿವೆ. ಇದರಲ್ಲಿ ಮೊದಲಿಗೆ ನಡೆದ ಅರ್ಹತಾ ರ‍್ಯಾಂಕಿಂಗ್ ಸುತ್ತಿನಲ್ಲಿ ಭಾರತದ ಮಹಿಳಾ ಆರ್ಚರಿ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಇದರೊಂದಿಗೆ ತಂಡ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.

Paris Olympics 2024: ಮೊದಲ ದಿನವೇ ಭಾರತಕ್ಕೆ ಶುಭಾರಂಭ; ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಭಾರತ ಮಹಿಳಾ ಆರ್ಚರಿ ತಂಡ
ಭಾರತ ಮಹಿಳಾ ಆರ್ಚರಿ ತಂಡ

Updated on: Jul 25, 2024 | 4:59 PM

33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್, ಇದೇ ಜುಲೈ 26 ರಿಂದ ಆರಂಭವಾಗಲಿದೆ. ಆದರೆ ಈ ಮೊದಲೇ ಅಂದರೆ ಇಂದಿನಿಂದ ಕೆಲವು ಸ್ಪರ್ಧೆಗಳು ಆರಂಭವಾಗಿವೆ. ಅದರಂತೆ ಇಂದು ಭಾರತದ ಮಹಿಳಾ ಮತ್ತು ಪುರುಷರ ಎರಡೂ ತಂಡಗಳು ಆರ್ಚರಿಯಲ್ಲಿ ಭಾಗವಹಿಸುತ್ತಿವೆ. ಇದರಲ್ಲಿ ಮೊದಲಿಗೆ ನಡೆದ ಅರ್ಹತಾ ರ‍್ಯಾಂಕಿಂಗ್ ಸುತ್ತಿನಲ್ಲಿ ಭಾರತದ ಮಹಿಳಾ ಆರ್ಚರಿ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಇದರೊಂದಿಗೆ ತಂಡ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಗಿಟ್ಟಿಸಿದೆ. ಕ್ವಾರ್ಟರ್‌ಫೈನಲ್‌ ಸುತ್ತಿಗೆ ಭಾರತ ಮಾತ್ರವಲ್ಲದೆ ದಕ್ಷಿಣ ಕೊರಿಯಾ, ಚೀನಾ ಮತ್ತು ಮೆಕ್ಸಿಕೊ ತಂಡಗಳು ಅರ್ಹತೆ ಪಡೆದುಕೊಂಡಿವೆ.

ಅರ್ಹತಾ ರ‍್ಯಾಂಕಿಂಗ್ ಸುತ್ತಿನಲ್ಲಿ ಭಾರತದ ದೀಪಿಕಾ ಕುಮಾರಿ, ಅಂಕಿತಾ ಭಕತ್, ಭಜನ್ ಕೌರ್ ಉತ್ತಮ ಪ್ರದರ್ಶನ ನೀಡಿದರು. ಇದರಲ್ಲಿ 666 ವೈಯಕ್ತಿಕ ಸ್ಕೋರ್ ಕಲೆಹಾಕಿದ ಅಂಕಿತಾ ಭಕತ್ 11ನೇ ಸ್ಥಾನ ಪಡೆದರೆ, ಭಜನ್ ಕೌರ್ 659 ವೈಯಕ್ತಿಕ ಸ್ಕೋರ್ ಮತ್ತು ದೀಪಿಕಾ ಕುಮಾರಿ 658 ವೈಯಕ್ತಿಕ ಸ್ಕೋರ್ ಕಲೆಹಾಕುವುದರೊಂದಿಗೆ ಕ್ರಮವಾಗಿ 22 ಮತ್ತು 23ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಭಾರತದ ಒಟ್ಟು ಸ್ಕೋರ್ 1983 ಆಗಿದ್ದು, ಭಾರತ ಮಹಿಳಾ ತಂಡ ನಾಲ್ಕನೇ ಸ್ಥಾನದಲ್ಲಿ ನಿಂತಿದೆ. ಇದೀಗ ಕ್ವಾರ್ಟರ್ ಫೈನಲ್‌ ಸುತ್ತಿನಲ್ಲಿ ಭಾರತ ಮಹಿಳಾ ತಂಡವು ಜುಲೈ 28 ರಂದು ಫ್ರಾನ್ಸ್ ಅಥವಾ ನೆದರ್ಲೆಂಡ್ಸ್ ತಂಡವನ್ನು ಎದುರಿಸಬಹುದು.

ದಕ್ಷಿಣ ಕೊರಿಯಾಗೆ ಮೊದಲ ಸ್ಥಾನ

ಭಾರತವನ್ನು ಹೊರತುಪಡಿಸಿ ಮೊದಲ ಮೂರು ಸ್ಥಾನಗಳಲ್ಲಿರುವ ದಕ್ಷಿಣ ಕೊರಿಯಾ, ಚೀನಾ ಮತ್ತು ಮೆಕ್ಸಿಕೊ ಮಹಿಳಾ ತಂಡಗಳು ಕ್ರಮವಾಗಿ 2046, 1996 ಮತ್ತು 1986 ಅಂಕಗಳನ್ನು ಕಲೆಹಾಕಿವೆ. ಇದರೊಂದಿಗೆ ಈ ಮೂರು ತಂಡಗಳು ಕೂಡ ಕ್ವಾರ್ಟರ್​ ಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಂಡಿವೆ. ಈ ಸುತ್ತಿನಲ್ಲಿ ಅತ್ಯಧಿಕ 2046 ಅಂಕ ಕಲೆಹಾಕಿರುವ ದಕ್ಷಿಣ ಕೊರಿಯಾ ತಂಡ ಅರ್ಹತಾ ರ‍್ಯಾಂಕಿಂಗ್ ಸುತ್ತಿನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿತು.

ಕ್ವಾರ್ಟರ್ ಫೈನಲ್ ಪಂದ್ಯ

  • ದಕ್ಷಿಣ ಕೊರಿಯಾ vs ಅಮೆರಿಕ/ಚೈನೀಸ್ ತೈಪೆ
  • ಚೀನಾ vs ಇಂಡೋನೇಷ್ಯಾ/ಮಲೇಷ್ಯಾ
  • ಮೆಕ್ಸಿಕೋ vs ಜರ್ಮನಿ/ಗ್ರೇಟ್ ಬ್ರಿಟನ್
  • ಭಾರತ vs ಫ್ರಾನ್ಸ್/ನೆದರ್ಲೆಂಡ್ಸ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Thu, 25 July 24