Paris Olympics 2024: ಪದಕ್ಕಾಗಿ ‘ಕುಸ್ತಿ’ಗಿಳಿದ 2 ಬಾರಿಯ ವಿಶ್ವ ಚಾಂಪಿಯನ್ ವಿನೇಶ್ ಫೋಗಟ್

Paris Olympics 2024: 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಅವರಿಂದ ಪದಕದ ನಿರೀಕ್ಷೆ ಮಾಡಲಾಗಿತ್ತು. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಮೊಣಕಾಲು ಗಾಯಕ್ಕೆ ತುತ್ತಾದ ವಿನೇಶ್ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು. ಈ ಗಾಯದಿಂದ ಚೇತರಿಸಿಕೊಳ್ಳಲು ಅವರಿಗೆ ಬಹಳ ಸಮಯ ಹಿಡಿಯಿತು.

Paris Olympics 2024: ಪದಕ್ಕಾಗಿ ‘ಕುಸ್ತಿ’ಗಿಳಿದ 2 ಬಾರಿಯ ವಿಶ್ವ ಚಾಂಪಿಯನ್ ವಿನೇಶ್ ಫೋಗಟ್
ವಿನೇಶ್ ಫೋಗಟ್
Follow us
|

Updated on: Jul 25, 2024 | 6:24 PM

ಕಳೆದ ಕೆಲವು ಒಲಿಂಪಿಕ್ಸ್ ಆವೃತ್ತಿಗಳಲ್ಲಿ ಕುಸ್ತಿ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಭಾರತ, ಈ ಬಾರಿಯೂ ಈ ಕ್ರೀಡೆಯಲ್ಲಿ ಹಲವು ಪದಕಗಳ ನಿರೀಕ್ಷೆಯಲ್ಲಿದೆ. ಇದರಲ್ಲಿ 50 ಕೆಜಿ ತೂಕ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಹರಿಯಾಣದ ಕುಸ್ತಿಪಟು ವಿನೇಶ್ ಫೋಗಟ್ ಕೂಡ ಸೇರಿದ್ದಾರೆ. ಇದು ವಿನೇಶ್ ಫೋಗಟ್ ಅವರ ಮೂರನೇ ಒಲಿಂಪಿಕ್ಸ್ ಆಗಿದೆಯಾದರೂ, ಇಲ್ಲಿಯವರೆಗೆ ಒಲಿಂಪಿಕ್ಸ್‌ನಲ್ಲಿ ಒಮ್ಮೆಯೂ ಪದಕ ಗೆಲ್ಲಲು ಅವರಿಗೆ ಸಾಧ್ಯವಾಗಿಲ್ಲ. ಆದರೆ ಈ ಬಾರಿ ಅವರ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕುಸ್ತಿಯಲ್ಲಿ ಇದುವರೆಗೆ ಏಳು ಪದಕ

ಭಾರತವು ಒಲಿಂಪಿಕ್ಸ್‌ನಲ್ಲಿ ಹೆಚ್ಚು ಯಶಸ್ಸನ್ನು ಸಾಧಿಸಿದ ಕ್ರೀಡೆಗಳಲ್ಲಿ ಕುಸ್ತಿಯೂ ಸೇರಿದೆ. ಕುಸ್ತಿಯಲ್ಲಿ ಭಾರತ ಇದುವರೆಗೆ ಏಳು ಪದಕಗಳನ್ನು ಗೆದ್ದಿದೆ. ಕಳೆದ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಭಾರತ ಈ ಕ್ರೀಡೆಯಲ್ಲಿ ಪದಕ ಗೆದ್ದಿದೆ. ಹಾಗಾಗಿಯೇ ಕುಸ್ತಿಪಟುಗಳು ಈ ಬಾರಿಯೂ ಪದಕದ ನಿರೀಕ್ಷೆಯಲ್ಲಿದ್ದಾರೆ. ಕಳೆದೊಂದು ವರ್ಷದಿಂದ ಭಾರತೀಯ ಕುಸ್ತಿಯಲ್ಲಿ ಹಲವು ವಿವಾದಗಳು ನಡೆದಿವೆ. ಭಾರತದ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ದೇಶದ ಅಗ್ರ ಕುಸ್ತಿಪಟುಗಳು ಧರಣಿ ಕುಳಿತಿದ್ದರು. ಆಯ್ಕೆ ಪರೀಕ್ಷೆಗೆ ಸಂಬಂಧಿಸಿದಂತೆ ಹಲವು ವಿವಾದಗಳೂ ಇದ್ದವು. ಇಷ್ಟೆಲ್ಲದರ ಹೊರತಾಗಿಯೂ ಭಾರತ ಆರು ಕೋಟಾಗಳಲ್ಲಿ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇವರಲ್ಲಿ 50 ಕೆಜಿ ತೂಕ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ವಿನೇಶ್ ಫೋಗಟ್ ಕೂಡ ಸೇರಿದ್ದಾರೆ.

2 ಬಾರಿಯ ವಿಶ್ವ ಚಾಂಪಿಯನ್

ಆಗಸ್ಟ್ 25, 1994 ರಂದು ಹರಿಯಾಣದ ಬಲಾಲಿ ಗ್ರಾಮದಲ್ಲಿ ಜನಿಸಿದ ವಿನೇಶ್ ಫೋಗಟ್, 2014 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದು ತಮ್ಮ ವೃತ್ತಿ ಬದುಕಿಗೆ ಶುಭಾರಂಭ ನೀಡಿದ್ದರು. ಅಂದಿನಿಂದ, ಅವರು ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ 3 ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕಗಳು, ಒಂದು ಏಷ್ಯನ್ ಗೇಮ್ಸ್ ಚಿನ್ನ, 2 ವಿಶ್ವ ಚಾಂಪಿಯನ್‌ಶಿಪ್ ಪದಕಗಳು, ಒಂದು ಚಿನ್ನ ಮತ್ತು 3 ಬೆಳ್ಳಿ ಸೇರಿದಂತೆ ಒಟ್ಟು 8 ಪದಕಗಳನ್ನು ಗೆದ್ದಿದ್ದಾರೆ.

ರಿಯೊ ಒಲಿಂಪಿಕ್ಸ್‌ನಲ್ಲಿ ನಿರಾಸೆ

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ವಿನೇಶ್ ಫೋಗಟ್ ಅವರಿಂದ ಪದಕದ ನಿರೀಕ್ಷೆ ಮಾಡಲಾಗಿತ್ತು. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಮೊಣಕಾಲು ಗಾಯಕ್ಕೆ ತುತ್ತಾದ ವಿನೇಶ್ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು. ಈ ಗಾಯದಿಂದ ಚೇತರಿಸಿಕೊಳ್ಳಲು ಅವರಿಗೆ ಬಹಳ ಸಮಯ ಹಿಡಿಯಿತು. ಇದರ ನಂತರ, ಅವರು 2018 ರಲ್ಲಿ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವ ಮೂಲಕ ಬಲವಾದ ಪುನರಾಗಮನವನ್ನು ಮಾಡಿದರು. ಅದೇ ವರ್ಷ ನಡೆದ ಏಷ್ಯನ್ ಗೇಮ್ಸ್​ನಲ್ಲೂ ಚಿನ್ನದ ಪದಕ ಗೆಲ್ಲುವ ಮೂಲಕ ಏಷ್ಯಾಡ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಖೇಲ್ ರತ್ನ ಪ್ರಶಸ್ತಿ

ವಿನೇಶ್ ಫೋಗಟ್ ಅವರಿಗೆ 2016 ರಲ್ಲಿ ಅರ್ಜುನ ಪ್ರಶಸ್ತಿ ಮತ್ತು 2020 ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ವಿನೇಶ್ ಫೋಗಟ್ ಇತ್ತೀಚೆಗೆ ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುನ್ನ ನಡೆದ ಸ್ಪೇನ್ ಗ್ರ್ಯಾಂಡ್ ಪ್ರಿಕ್ಸ್​ನಲ್ಲಿ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಇದಲ್ಲದೆ ಈ ವರ್ಷ ಫೆಬ್ರವರಿಯಲ್ಲಿ ಜೈಪುರದಲ್ಲಿ ನಡೆದ ರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲೂ ವಿನೇಶ್ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ