‘ಇದು ಅಂತ್ಯವಲ್ಲ, ಒಳ್ಳೆಯ ನೆನಪುಗಳ ಆರಂಭ’; ಭಾವನಾತ್ಮಕ ವಿದಾಯ ಹೇಳಿದ ಭಾರತ ಹಾಕಿ ಲೆಜೆಂಡ್ ಪಿ.ಆರ್ ಶ್ರೀಜೇಶ್

|

Updated on: Aug 08, 2024 | 8:51 PM

PR Sreejesh Retirement, Indian Hockey Team: ಭಾರತದ ಅನುಭವಿ ಗೋಲ್‌ಕೀಪರ್ ಮತ್ತು ಹಾಕಿ ತಂಡದ ಮಾಜಿ ನಾಯಕ ಪಿಆರ್ ಶ್ರೀಜೇಶ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ಗೆ ಮುಂಚೆಯೇ ಇದು ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯಾವಳಿ ಎಂದು ಘೋಷಿಸಿದ್ದರು. ಅದರಂತೆ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಸ್ಪೇನ್ ತಂಡವನ್ನು ಮಣಿಸಿದ ಕೂಡಲೇ ಪಿಆರ್ ಶ್ರೀಜೇಶ್​ಗೆ ತಂಡದ ಆಟಗಾರರು ಭಾವನಾತ್ಮಕ ವಿಧಾಯ ಹೇಳಿದರು.

‘ಇದು ಅಂತ್ಯವಲ್ಲ, ಒಳ್ಳೆಯ ನೆನಪುಗಳ ಆರಂಭ’; ಭಾವನಾತ್ಮಕ ವಿದಾಯ ಹೇಳಿದ ಭಾರತ ಹಾಕಿ ಲೆಜೆಂಡ್ ಪಿ.ಆರ್ ಶ್ರೀಜೇಶ್
ಪಿ.ಆರ್ ಶ್ರೀಜೇಶ್
Follow us on

ಭಾರತೀಯ ಹಾಕಿ ತಂಡ ತನ್ನ ಕಂಚಿನ ಪದಕದ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಮಣಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಭಾರತ ತಂಡ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆಯನ್ನು ಮಾಡಿತು. ಹಾಗೆಯೇ ಒಲಿಂಪಿಕ್ಸ್ ಇತಿಹಾಸದಲ್ಲಿ 13 ನೇ ಪದಕ ಗೆದ್ದ ದಾಖಲೆಯನ್ನೂ ಭಾರತ ಹಾಕಿ ತಂಡ ನಿರ್ಮಿಸಿದೆ. ಈ ಐತಿಹಾಸಿಕ ಗೆಲುವಿನೊಂದಿಗೆ ಭಾರತ ತಂಡದ ಆಟಗಾರನ ವೃತ್ತಿಜೀವನವೂ ಅಂತ್ಯಗೊಂಡಿದೆ. ಈ ಆಟಗಾರ ಬೇರೆ ಯಾರೂ ಅಲ್ಲ, ಭಾರತ ಹಾಕಿ ತಂಡದ ಗೋಡೆ ಎಂದೇ ಕರೆಸಿಕೊಳ್ಳುವ ಗೋಲ್ ಕೀಪರ್ ಪಿಆರ್ ಶ್ರೀಜೇಶ್.

18 ವರ್ಷಗಳ ಸುದೀರ್ಘ ವೃತ್ತಿಜೀವನ ಅಂತ್ಯ

ಭಾರತದ ಅನುಭವಿ ಗೋಲ್‌ಕೀಪರ್ ಮತ್ತು ಹಾಕಿ ತಂಡದ ಮಾಜಿ ನಾಯಕ ಪಿಆರ್ ಶ್ರೀಜೇಶ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ಗೆ ಮುಂಚೆಯೇ ಇದು ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯಾವಳಿ ಎಂದು ಘೋಷಿಸಿದ್ದರು. ಅದರಂತೆ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಸ್ಪೇನ್ ತಂಡವನ್ನು ಮಣಿಸಿದ ಕೂಡಲೇ ಪಿಆರ್ ಶ್ರೀಜೇಶ್​ಗೆ ತಂಡದ ಆಟಗಾರರು ಭಾವನಾತ್ಮಕ ವಿದಾಯ ಹೇಳಿದರು.

ಭಾರತದ ಪರ ಒಟ್ಟು 4 ಒಲಿಂಪಿಕ್ಸ್ ಆಡಿರುವ ಶ್ರೀಜೇಶ್, ಇದರಲ್ಲಿ ಎರಡು ಒಲಿಂಪಿಕ್ ಪದಕವನ್ನು ಗೆದ್ದ ತಂಡದ ಭಾಗವಾಗಿದ್ದಾರೆ. 2004 ರಲ್ಲಿ ಜೂನಿಯರ್ ತಂಡದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಶ್ರೀಜೇಶ್, 2006 ರಲ್ಲಿ ಹಿರಿಯ ತಂಡವನ್ನು ಸೇರಿಕೊಂಡರು. ಆ ನಂತರ 2014 ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಮತ್ತು 2018 ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಇದಲ್ಲದೆ, ಶ್ರೀಜೇಶ್ 2018 ರಲ್ಲಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಜಂಟಿ ವಿಜೇತ ತಂಡ, ಭುವನೇಶ್ವರದಲ್ಲಿ ನಡೆದ 2019 ಎಫ್‌ಐಹೆಚ್ ಪುರುಷರ ಸರಣಿ ಫೈನಲ್‌ನಲ್ಲಿ ಚಿನ್ನದ ಪದಕ ವಿಜೇತ ತಂಡ ಮತ್ತು ಬರ್ಮಿಂಗ್ಹ್ಯಾಮ್ 2022 ಕಾಮನ್‌ವೆಲ್ತ್ ಗೇಮ್ಸ್‌ನ ಬೆಳ್ಳಿ ಪದಕ ವಿಜೇತ ತಂಡದಲ್ಲಿ ಸದಸ್ಯರಾಗಿದ್ದರು.

ಶ್ರೀಜೇಶ್​ಗೆ ಒಲಿದಿರುವ ಪ್ರಶಸ್ತಿಗಳು

ಪಿಆರ್ ಶ್ರೀಜೇಶ್ ಅವರಿಗೆ 2021 ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದಲ್ಲದೆ, ಅವರು 2021 ರಲ್ಲಿ ವರ್ಷದ ವರ್ಲ್ಡ್ ಗೇಮ್ಸ್ ಅಥ್ಲೀಟ್ ಪ್ರಶಸ್ತಿಯನ್ನು ಸಹ ಪಡೆದರು. ಈ ಮೂಲಕ ವರ್ಲ್ಡ್ ಗೇಮ್ಸ್ ಅಥ್ಲೀಟ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಗೆದ್ದ ಭಾರತದ ಎರಡನೇ ಆಟಗಾರ ಎನಿಸಿಕೊಂಡರು. ಇದಲ್ಲದೆ 2021 ಮತ್ತು 2022 ರಲ್ಲಿ FIH ವರ್ಷದ ಗೋಲ್‌ಕೀಪರ್ ಆಗಿಯೂ ಆಯ್ಕೆಯಾಗಿದ್ದಾರೆ.

ಕೊನೆಯ ಪಂದ್ಯಕ್ಕೂ ಮುನ್ನ ಭಾವನಾತ್ಮಕ ಪೋಸ್ಟ್

ಕಂಚಿನ ಪಂದ್ಯಕ್ಕೂ ಮುನ್ನ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ಬರೆದಿದ್ದ ಶ್ರೀಜೇಶ್, ‘ನಾನು ಕೊನೆಯ ಬಾರಿಗೆ ಗೋಲ್ ಪೋಸ್ಟ್‌ಗಳ ನಡುವೆ ನಿಂತಾಗ, ನನ್ನ ಹೃದಯವು ಕೃತಜ್ಞತೆ ಮತ್ತು ಹೆಮ್ಮೆಯಿಂದ ತುಂಬಿರುತ್ತದೆ. ಚಿಕ್ಕ ಹುಡುಗನ ಕನಸಿನಿಂದ ಭಾರತದ ಗೌರವವನ್ನು ಕಾಪಾಡುವ ವ್ಯಕ್ತಿಯ ಈ ಪ್ರಯಾಣವು ಅಸಾಮಾನ್ಯವಾಗಿದೆ. ಇಂದು ನಾನು ಭಾರತಕ್ಕಾಗಿ ನನ್ನ ಕೊನೆಯ ಪಂದ್ಯವನ್ನು ಆಡುತ್ತಿದ್ದೇನೆ. ಪ್ರತಿ ಸೇವ್, ಪ್ರತಿ ಡೈವ್, ಗುಂಪಿನ ಪ್ರತಿ ಘರ್ಜನೆ ನನ್ನ ಆತ್ಮದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತದೆ. ಭಾರತ, ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ನನ್ನೊಂದಿಗೆ ನಿಂತಿದ್ದಕ್ಕಾಗಿ ಧನ್ಯವಾದಗಳು. ಇದು ಅಂತ್ಯವಲ್ಲ, ಒಳ್ಳೆಯ ನೆನಪುಗಳ ಆರಂಭ ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:45 pm, Thu, 8 August 24