Paris Olympics 2024: ಶೂಟಿಂಗ್​ನಲ್ಲಿ ದಾಖಲೆ ನಿರ್ಮಿಸಿರುವ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮನು ಭಾಕರ್

Paris Olympics 2024: ಭಾರತ ಶೂಟಿಂಗ್​ನಲ್ಲಿ 2004 ರ ಅಥೆನ್ಸ್, 2008 ರ ಬೀಜಿಂಗ್ ಮತ್ತು 2012 ರ ಲಂಡನ್ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಹ್ಯಾಟ್ರಿಕ್ ಸಾಧನೆಯ ಬಳಿಕ ಈ ಕ್ರೀಡೆಯಿಂದ ಭಾರತಕ್ಕೆ ಪದಕ ಲಭಿಸಿಲ್ಲ. ಆದರೆ ಈ ಬಾರಿ ಪದಕ ಗೆದ್ದೇ ಗೆಲ್ಲುವ ಇರಾದೆಯೊಂದಿಗೆ ಭಾರತದ ಶೂಟರ್​ಗಳು ಕ್ರೀಡಾ ಗ್ರಾಮಕ್ಕೆ ತೆರಳಿದ್ದಾರೆ. ಇವರಲ್ಲಿ ಹರಿಯಾಣದ ಮನು ಭಾಕರ್ ಪದಕದ ಭರವಸೆ ಮೂಡಿಸಿದ್ದಾರೆ.

Paris Olympics 2024: ಶೂಟಿಂಗ್​ನಲ್ಲಿ ದಾಖಲೆ ನಿರ್ಮಿಸಿರುವ ಭಾರತಕ್ಕೆ ಮತ್ತೊಂದು ಪದಕದ ಭರವಸೆ ಮನು ಭಾಕರ್
ಮನು ಭಾಕರ್
Follow us
|

Updated on:Jul 25, 2024 | 5:31 PM

ಪ್ಯಾರಿಸ್ ಒಲಿಂಪಿಕ್ಸ್​ ಇಂದಿನಿಂದ ಆರಂಭವಾಗಿದೆ. ಭಾರತದಿಂದ 117 ಸ್ಪರ್ಧಿಗಳು ಪದಕಕ್ಕಾಗಿ ಅಖಾಡಕ್ಕಿಳಿದಿದ್ದಾರೆ. ಕಳೆದ ಒಲಿಂಪಿಕ್ಸ್​ನಲ್ಲಿ 7 ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್ ಇತಿಹಾಸದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತ, ಈ ಬಾರಿಯ ಒಲಿಂಪಿಕ್ಸ್​ನಲ್ಲಿ ತನ್ನ ಹಿಂದಿನ ದಾಖಲೆಯನ್ನು ಮುರಿಯುವ ಗುರಿ ಇಟ್ಟುಕೊಂಡಿದೆ. ಈ ಬಾರಿ ಭಾರತ ಹಲವು ಕ್ರೀಡೆಗಳಲ್ಲಿ ಪದಕ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ. ಅದರಲ್ಲಿ ಒಂದು ಶೂಟಿಂಗ್. ವಾಸ್ತವವಾಗಿ ಭಾರತ ಶೂಟಿಂಗ್​ನಲ್ಲಿ 2004 ರ ಅಥೆನ್ಸ್, 2008 ರ ಬೀಜಿಂಗ್ ಮತ್ತು 2012 ರ ಲಂಡನ್ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಹ್ಯಾಟ್ರಿಕ್ ಸಾಧನೆಯ ಬಳಿಕ ಈ ಕ್ರೀಡೆಯಿಂದ ಭಾರತಕ್ಕೆ ಪದಕ ಲಭಿಸಿಲ್ಲ. ಆದರೆ ಈ ಬಾರಿ ಪದಕ ಗೆದ್ದೇ ಗೆಲ್ಲುವ ಇರಾದೆಯೊಂದಿಗೆ ಭಾರತದ ಶೂಟರ್​ಗಳು ಕ್ರೀಡಾ ಗ್ರಾಮಕ್ಕೆ ತೆರಳಿದ್ದಾರೆ. ಇವರಲ್ಲಿ ಹರಿಯಾಣದ ಮನು ಭಾಕರ್ ಪದಕದ ಭರವಸೆ ಮೂಡಿಸಿದ್ದಾರೆ.

ಶೂಟಿಂಗ್​ನಲ್ಲಿ ಭಾರತ

ಮೇಲೆ ಹೇಳಿದಂತೆ ಭಾರತ ಸತತ 3 ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಶೂಟಿಂಗ್ ವಿಭಾಗದಲ್ಲಿ ಪದಕ ಜಯಿಸಿತ್ತು. ಇದರಲ್ಲಿ ರಾಜ್ಯವರ್ಧನ್ ರಾಥೋಡ್ ಅವರು ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದರೆ, 2012ರಲ್ಲಿ ಗಗನ್ ನಾರಂಗ್ (ಕಂಚಿನ) ಮತ್ತು ರವಿಕುಮಾರ್ (ಬೆಳ್ಳಿ) ಪದಕ ಗೆದ್ದಿದ್ದರು. ಇದೆಲ್ಲದರ ನಡುವೆ 2008ರಲ್ಲಿ ಅಭಿನವ್ ಬಿಂದ್ರಾ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಆದರೆ ಕಳೆದ ಎರಡು ಸತತ ಒಲಿಂಪಿಕ್ಸ್​ನಲ್ಲಿ ಭಾರತ ಶೂಟರ್​​ಗಳು ಯಾವುದೇ ಗುರಿ ಮುಟ್ಟಲು ಸಾಧ್ಯವಾಗದಿರುವುದು ಅತ್ಯಂತ ಅಚ್ಚರಿ ಮೂಡಿಸಿದೆ. ಆದರೆ ಈ ಬಾರಿ 22 ವರ್ಷದ ಮನು ಭಾಕರ್ ಮೇಲೆ ಪದಕದ ನಿರೀಕ್ಷೆ ಹೆಚ್ಚಿದೆ.

ಮನು ಭಾಕರ್ ಸಾಧನೆ

ವಾಸ್ತವವಾಗಿ ಕುಸ್ತಿಪಟುಗಳು ಮತ್ತು ಬಾಕ್ಸರ್‌ಗಳಿಗೆ ಹೆಸರುವಾಸಿಯಾದ ಹರಿಯಾಣ ರಾಜ್ಯದಿಂದ ಈ ಬಾರಿ ಶೂಟಿಂಗ್‌ನಲ್ಲಿ ಕಮಾಲ್ ಮಾಡಲು ಮನು ಭಾಕರ್ ಸಜ್ಜಾಗಿದ್ದಾರೆ. ಹರಿಯಾಣದ ಜಜ್ಜರ್ ಜಿಲ್ಲೆಯಲ್ಲಿ ಜನಿಸಿದ ಮನು ಭಾಕರ್, ಆರಂಭಿಕ ದಿನಗಳಲ್ಲಿ ಅನೇಕ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಆದರೆ ಆ ನಂತರ ಪಿಸ್ತೂಲ್ ಶೂಟಿಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಂಡರು. ನಂತರ ಜೂನಿಯರ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ತಮ್ಮ ವೃತ್ತಿ ಬದುಕಿಗೆ ಪ್ರಮುಖ ತಿರುವ ನೀಡಿದ ಮುನು, ಇದಾದ ಬಳಿಕ 2017ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಹೀನಾ ಸಿಧು ಅವರಂತಹ ಅನುಭವಿ ಶೂಟರ್‌ರನ್ನು ಸೋಲಿಸಿ ಒಟ್ಟು 9 ಚಿನ್ನದ ಪದಕಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು. 2018 ರಲ್ಲಿ ನಡೆದ ISSF ವಿಶ್ವಕಪ್‌ನಲ್ಲಿ ಮನು ಅದ್ಭುತ ಪ್ರದರ್ಶನ ನೀಡಿ 10 ಮೀಟರ್ ಏರ್ ಪಿಸ್ತೂಲ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕೈಜಾರಿದ ಪದಕ

2018ರಲ್ಲಿಯೇ ಯೂತ್ ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಚಿನ್ನ ಗೆದ್ದಿದ್ದ ಮನು 2018 ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್​ನಲ್ಲೂ ಚಿನ್ನ ಗೆಲ್ಲುವ ಮೂಲಕ ಸಂಚಲನ ಮೂಡಿಸಿದ್ದರು. ಈ ಯಶಸ್ಸಿನ ಪ್ರವೃತ್ತಿಯನ್ನು 2019 ರಲ್ಲಿಯೂ ಮುಂದುವರೆಸಿದ ಮನು, ಸೌರಭ್ ಚೌಧರಿ ಜೊತೆಗೆ 10 ಮೀಟರ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸತತ 4 ವಿಶ್ವಕಪ್‌ಗಳಲ್ಲಿ ಚಿನ್ನ ಗೆದ್ದರು. ಈ ಮೂಲಕ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದ ಮನು ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ 10 ಮೀಟರ್ ಏರ್ ಪಿಸ್ತೂಲ್ ಈವೆಂಟ್‌ನಲ್ಲಿ ಮನು ಅವರ ಪಿಸ್ತೂಲ್ ಹಠಾತ್ತನೆ ಮುರಿದುಹೋಯಿತು. ಇದು ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರಿದಲ್ಲದೆ, ಅವರು ಫೈನಲ್‌ಗೆ ಅರ್ಹತೆ ಪಡೆಯಲು ವಿಫಲರಾದರು.

2 ಈವೆಂಟ್​ಗಳಲ್ಲಿ ಸ್ಪರ್ಧೆ

ಇದೀಗ ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿರುವ ಮನು ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇದಕ್ಕೆ ಪೂರಕವಾಗಿ ಮನು ಕೂಡ 2023 ರಲ್ಲಿ ಬಾಕುದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 25 ಮೀಟರ್ ಏರ್ ಪಿಸ್ತೂಲ್‌ನಲ್ಲಿ ಚಿನ್ನ, ಅದೇ ವರ್ಷ ನಡೆದ ಏಷ್ಯನ್ ಗೇಮ್ಸ್‌ನಲ್ಲಿ 25 ಮೀಟರ್ ಮಹಿಳಾ ತಂಡ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಇದೀಗ ಮನು ಪ್ಯಾರಿಸ್‌ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮತ್ತು 25 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಎರಡು ಈವೆಂಟ್‌ಗಳಲ್ಲೂ ಮನು ಕೊರಳಿಗೆ ಪದಕ ಬೀಳಲಿ ಎಂಬುದು ಭಾರತೀಯರ ಆಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Thu, 25 July 24